ಮುಂಬಯಿ : ಮುಂಬಯಿ ಮಹಾ ನಗರದಲ್ಲಿ ಇಂದು ಮಂಗಳವಾರ ಮಧ್ಯಾಹ್ನದಿಂದ ಜಡಿ ಮಳೆ ಸುರಿಯಲು ಆರಂಭವಾಗಿದೆ. ಮಳೆಯ ಜತೆಗೆ ಗುಡುಗು, ಸಿಡಿಲಿನ ಆರ್ಭಟ ಕೂಡ ಮೇಳೈಸಿದ್ದು ಜನರಲ್ಲಿ ಅನಾಹುತಗಳ ಬಗ್ಗೆ ಭಯ, ಆತಂಕ ಆವರಿಸಿದೆ. ಬಿಎಂಸಿ ಮಹಾ ನಗರದ ಆದ್ಯಂತ ಕಟ್ಟೆಚ್ಚರ ವಹಿಸಿದೆ.
ಜಡಿ ಮಳೆ ಸುರಿಯುತ್ತಿರುವ ಹೊರತಾಗಿಯೂ ಎಲ್ಲಿಯ ಮಳೆ ನೀರು ತುಂಬಿಕೊಂಡ ಅಥವಾ ಸಾರಿಗೆ ಸೇವೆಗಳು ಬಾಧಿತವಾದ ವರದಿಗಳು ಇಲ್ಲ.
ಕಳೆದ ಆಗಸ್ಟ್ 29ರಂದು ಮುಂಬಯಿ ಮಹಾ ನಗರದಲ್ಲಿ 300 ಎಂಎಂ ಮಳೆ ಸುರಿದಿತ್ತು. ಪರಿಣಾಮವಾಗಿ ಸಾರಿಗೆ ಸೇವೆಗಳು ತೀವ್ರ ಅಡಚಣೆಗೆ ಗುರಿಯಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿತ್ತು.
ಮೊನ್ನೆ ಭಾನುವಾರ ಹವಾಮಾನ ಇಲಾಖೆಯು ಮುಂಬಯಿ ಮತ್ತು ಕರಾವಳಿ ಕೊಂಕಣ ಪ್ರದೇಶದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಾಗುವ ಎಚ್ಚರಿಕೆಯನ್ನು ನೀಡಿತ್ತು. ಹಾಗಿದ್ದರೂ ನಿನ್ನೆ ಸೋಮವಾರ ದಿನ ಮಹಾನಗರದಲ್ಲಿ ಭಾರೀ ಮಳೆಯೇನೂ ಸುರಿದಿರಲಿಲ್ಲ.
ಇಂದು ಮಂಗಳವಾರ ಬೆಳಗಾಗುತ್ತಲೇ ಮುಂಬಯಿಗರು ದಟ್ಟನೆಯ ಮೋಡ ಕವಿದ ವಾತಾವರಣಕ್ಕೆ ಸಾಕ್ಷಿಯಾದರು. ಮಧ್ಯಾಹ್ನದ ವೇಳೆಗೆ ಜಡಿ ಮಳೆ ಸುರಿಯಲಾರಂಭಿಸಿ ಅದರೊಂದಿಗೆ ಗುಡುಗು, ಸಿಡಿಲಿಯನ ಆರ್ಭಟ ಕೂಡ ಮೇಳೈಸಿತು.
ದಕ್ಷಿಣ ಮುಂಬಯಿ, ಬೊರಿವಲಿ, ಕಾಂದಿವಿಲಿ, ಅಂಧೇರಿ ಮತ್ತು ಭಾಂಡೂಪ್ ಸೇರಿದಂತೆ ಮಹಾನಗರದ ಹಲವು ಭಾಗಗಳಲ್ಲಿ ಮಧ್ಯಾಹ್ನದಿಂದ ಭಾರೀ ಮಳೆಯಾಗುತ್ತಿದೆ.