ಹೊಸದಿಲ್ಲಿ: ದೆಹಲಿ ಸೇರಿದಂತೆ ದೇಶದ ಕೆಲವು ಭಾಗಗಳಲ್ಲಿ ಟೊಮ್ಯಾಟೋ ಚಿಲ್ಲರೆ ದರವು ಕೆಜಿಗೆ 200 ರೂ.ಗೆ ತಲುಪಿದೆ,ಇತರ ತರಕಾರಿಗಳ ದರಗಳು ಸಹ ಏರಿಕೆಯಾಗಿವೆ. ಇದಕ್ಕೆ ನಿರಂತರ ಮಳೆಯಿಂದಾಗಿ ಪೂರೈಕೆಗೆ ಅಡ್ಡಿಯಾಗಿರುವುದು ಕಾರಣ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ .
ಬೆಳೆಯುವ ಪ್ರದೇಶಗಳಲ್ಲಿ ಭಾರೀ ಮಳೆಯು ಜಲಾವೃತವಾಗಲು ಕಾರಣವಾಗಿದ್ದು,ಟೊಮ್ಯಾಟೋ ಬೆಳೆ ಮತ್ತು ಮಣ್ಣಿನ ಕೆಳಗೆ ಬೆಳೆದ ಇತರ ಕೊಳೆಯುವ ತರಕಾರಿಗಳು ವಿಶೇಷವಾಗಿ ಈರುಳ್ಳಿ ಮತ್ತು ಶುಂಠಿ ಹಾನಿಗೊಳಗಾಗುತ್ತಿವೆ ಎಂದು ಅವರು ಹೇಳಿದರು.
ಗ್ರಾಹಕ ವ್ಯವಹಾರಗಳ ಸಚಿವಾಲಯವು ನಿರ್ವಹಿಸಿದ ಅಂಕಿಅಂಶಗಳ ಪ್ರಕಾರ, ಸೋಮವಾರದಂದು ಅಖಿಲ ಭಾರತ ಸರಾಸರಿ ಚಿಲ್ಲರೆ ಟೊಮ್ಯಾಟೋ ದರವು ಪ್ರತಿ ಕೆಜಿಗೆ 104.38 ರಷ್ಟಿತ್ತು, ಗರಿಷ್ಠ ಬೆಲೆಯು ಸ್ವೈ ಮಾಧೋಪುರ್‌ನಲ್ಲಿ ಕೆಜಿಗೆ 200 ರೂ. ಮತ್ತು ರಾಜಸ್ಥಾನದ ಚುರುದಲ್ಲಿ ಕನಿಷ್ಠ 31 ರೂ. ಇತ್ತು.
ಮಹಾನಗರಗಳಲ್ಲಿ, ಟೊಮ್ಯಾಟೋ ಚಿಲ್ಲರೆ ಬೆಲೆ ಕೋಲ್ಕತಾದಲ್ಲಿ ಕೆಜಿಗೆ 149 ರೂ., ಮುಂಬೈನಲ್ಲಿ ಕೆಜಿಗೆ ರೂ. 135, ಚೆನ್ನೈನಲ್ಲಿ ರೂ. 123 ಮತ್ತು ದೆಹಲಿಯಲ್ಲಿ ರೂ. 100 ಎಂದು ಅಂಕಿಅಂಶಗಳು ತೋರಿಸಿವೆ.ಟೊಮ್ಯಾಟೋ ಮತ್ತು ಇತರ ತರಕಾರಿಗಳ ಚಿಲ್ಲರೆ ಬೆಲೆಯು ಗುಣಮಟ್ಟ ಮತ್ತು ಅವುಗಳನ್ನು ಮಾರಾಟ ಮಾಡುವ ಸ್ಥಳವನ್ನು ಅವಲಂಬಿಸಿ ಬದಲಾಗುತ್ತದೆ.
”ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದೆಹಲಿಯಲ್ಲಿ ಟೊಮ್ಯಾಟೋ ಪೂರೈಕೆಯಲ್ಲಿ ಮತ್ತಷ್ಟು ಅಡಚಣೆ ಉಂಟಾಗಿದೆ. ಭಾರೀ ಮಳೆ ಮುಂದುವರಿದರೆ, ಶೀಘ್ರದಲ್ಲೇ ಬೆಲೆ ಕಡಿಮೆಯಾಗುವ ಸಾಧ್ಯತೆಯಿಲ್ಲ ಎಂದು ಆಜಾದ್‌ಪುರ ಟೊಮ್ಯಾಟೋ ಅಸೋಸಿಯೇಷನ್ ಅಧ್ಯಕ್ಷ ಮತ್ತು ಆಜಾದ್‌ಪುರ ಮಂಡಿ ಸದಸ್ಯ ಅಶೋಕ್ ಕೌಶಿಕ್ ಪಿಟಿಐಗೆ ತಿಳಿಸಿದ್ದಾರೆ.
ಮಾನ್ಸೂನ್ ನಲ್ಲಿ ಭಾರಿ ಮಳೆಯಿಂದಾಗಿ ಬೆಳೆಗಳು ಜಲಾವೃತವಾಗಿ ಹಾನಿಗೊಳಗಾಗುವುದೂ ಹೆಚ್ಚಿನ ತರಕಾರಿಗಳ ಬೆಲೆ ಏರಿಕೆಗೆ ಪ್ರಮುಖ ಕಾರಣ ಎಂದು ಕೌಶಿಕ್ ಹೇಳಿದರು.
“ನಾನು ಆಜಾದ್‌ಪುರ ಸಗಟು ಮಾರುಕಟ್ಟೆಯಲ್ಲಿ ಟೊಮ್ಯಾಟೋ ಕೆಜಿಗೆ 160 ರೂ.ಕೊಟ್ಟು ಖರೀದಿಸಿದೆ ಮತ್ತು ಪ್ರತಿ ಕೆಜಿಗೆ 170 ರೂ.ಗೆ ಚಿಲ್ಲರೆ ಮಾರಾಟ ಮಾಡಿದೆ. ಇತರ ಕೆಲವು ಮಾರಾಟಗಾರರು ದೆಹಲಿಯಲ್ಲಿ ಪ್ರತಿ ಕೆಜಿಗೆ 200 ರೂ.ವರೆಗೆ ಮಾರಾಟ ಮಾಡುತ್ತಿದ್ದಾರೆ ಎಂದು ಪಶ್ಚಿಮ ವಿಹಾರ್‌ನ ಸ್ಥಳೀಯ ಚಿಲ್ಲರೆ ಮಾರಾಟಗಾರ ಜ್ಯೋತಿಶ್ ಝಾ ಹೇಳಿದರು.ಶುಂಠಿ ಬೆಲೆ ಕೆಜಿಗೆ 300 ರೂ.ಗೆ ಏರಿಕೆಯಾಗಿದೆ. ಹಲವು ತರಕಾರಿಗಳ ದರ ನೂರು ರೂ. ದಾಟಿದೆ.