ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ಮೇ 4ರಂದು ರಾತ್ರಿ ಸುರಿದ ಗಾಳಿ, ಗುಡುಗು ಸಹಿತ ಮಳೆಗೆ ವ್ಯಾಪಕ ನಷ್ಟ ಸಂಭವಿಸಿದೆ. ಮಡಿಕೈ ಪುದಿಯ ಕಂಡತ್ತಿಲ್‌ನಲ್ಲಿ ಸಾವಿರಾರು ಬಾಳೆ, ಕಂಗು, ತೆಂಗು ಮರಗಳು ನೆಲಕಚ್ಚಿವೆ.
ಮಾವುಂಗಾಲ್, ಅರಯಿ, ಕುಳಿಯಂಗಾಲ್, ಅಲಾಮಿಪಳ್ಳಿ, ಕೋಯಮ್ಮಲ್, ವಿಷ್ಣುಮಂಗಲಂ, ಮಾಣಿಕೋತ್, ಅದಿಂಞಾಲ್, ಬೇಕಲ ಮೊದಲಾದೆಡೆಗಳಲ್ಲಿ ಮರಗಳು, ವಿದ್ಯುತ್ ಕಂಬಗಳು, ಕಟ್ಟಡದ ಮೇಲ್ಛಾವಣಿ ಧರೆಗುರುಳಿವೆ. ಮಡಿಕೈ ಕಣಿಯಿಲ್ ಪದ್ಮನಾಭ ಅವರ ಮನೆಯ ಮೇಲೆ ತೆಂಗಿನ ಮರ ಬಿದ್ದು ಹಾನಿಗೀಡಾಗಿದೆ.
ಅದಿಂಞಾಲ್‌ನಲ್ಲಿ ವಿದ್ಯುತ್ ಕಂಬ ಉರುಳಿ ಬಿದಿದ್ದು, ಈ ಸಂದರ್ಭ ಬೇಕಲದಲ್ಲಿ ಡ್ನೂಟಿ ಮುಗಿಸಿ ಕಾಂಞಂಗಾಡ್‌ಗೆ ತೆರಳುತ್ತಿದ್ದ ಪೊಲೀಸರಾದ ರಂಜಿತ್ ಮತ್ತು ಅಜಯನ್ ಅದೃಷ್ಟವಶಾತ್ ಅಪಾಯದಿಂದ ಪಾರಾದರು. ಇವರ ಹೆಲ್ಮೆಟ್‌ಗೆ ವಿದ್ಯುತ್ ತಂತಿ ಬಡಿದರೂ ಅಪಾಯದಿಂದ ಪಾರಾದರು. ಬೇಕಲದಲ್ಲಿ ಲಾರಿ ಅಪಘಾತದಿಂದ ಲಾರಿಯಲ್ಲಿ ಸಿಲುಕಿಕೊಂಡ ಚಾಲಕನನ್ನು ಕಾಂಞಂಗಾಡ್‌ನ ಅಗ್ನಿಶಾಮಕ ದಳ ರಕ್ಷಿಸಿತು. ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತು.
ಚೆಮ್ಮಟಂವಯಲ್ ಕಾಲಿಚ್ಚಾನಡ್ಕಂ ರಸ್ತೆಯಲ್ಲಿ ನಾದಪುರಂ ಕುನ್ನಿಲ್‌ನಲ್ಲಿ ಎಚ್.ಟಿ. ಲೈನ್ ಕಡಿದು ಬಿದ್ದು ಸಂಚಾರ ಸ್ಥಗಿತಗೊಂಡಿತು.ಮೈಲಾಟಿ – ಕಾಂಞಂಗಾಡ್ 110 ಕೆ.ವಿ. ಲೈನ್ ಹಾನಿಗೀಡಾಗಿದ್ದು, ವಿವಿಧೆಡೆ ವಿದ್ಯುತ್ ಕಡಿತವಾಗಿದೆ. ತಳಂಗರೆಯಲ್ಲಿ ತೆಂಗಿನ ಮರ ಉರುಳಿ ವಿದ್ಯುತ್ ಕಂಬದ ಮೇಲೆ ಬಿದ್ದು ವಿದ್ಯುತ್ ಸ್ಥಗಿತವಾಗಿದೆ. ಕಾಸರಗೋಡು ಸಮುದ್ರ ಕಿನಾರೆಯಲ್ಲಿ ಹಲವು ಮನೆಗಳು ಹಾನಿಗೀಡಾದವು. ಕಾಸರಗೋಡು ಕಡಪುರದಲ್ಲಿ ಮರು ಬಿದ್ದು ಶಿವ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿದ್ಯುತ್ ಕಂಬ ಹಾಗೂ ಮರ ಬಿದ್ದು ಕಾಸರಗೋಡು ಕಡಪ್ಪುರದ ಗಂಗಾನಗರದ ಕೊಗ್ಗು ಮತ್ತು ರಾಜೀವನ್ ಅವರ ಮನೆಗಳು ಹಾನಿಗೀಡಾಗಿವೆ. ಲೈಟ್ ಹೌಸ್ ಪರಿಸರದಲ್ಲಿ ಮರ ಉರುಳಿ ಬಿದ್ದು ಮನೆಗೆ ಹಾನಿಯಾಗಿದೆ.