ದಾಂಡೇಲಿ : ನಗರದಲ್ಲಿ ಕಳೆದರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಬಾಂಬೆಚಾಳದಲ್ಲಿ ಬೃಹತ್ ಗಾತ್ರದ ಮರವೊಂದು ಧರೆಗುರುಳಿದ್ದು, ಪರಿಣಾಮವಾಗಿ ಅಲ್ಲೆ ಇದ್ದ ಸುನ್ನಿ ಮದನಿ ಜಾಮೀಯಾ ಮಸೀದಿಗೆ ತೀವ್ರ ಹಾನಿಯಾಗಿರುವ ಘಟನೆ ಸೋಮವಾರ ತಡರಾತ್ರಿ ನಡೆದಿದೆ.
ಇಲ್ಲಿ ಸುನ್ನಿ ಮದನಿ ಜಾಮೀಯಾ ಮಸೀದಿಯ ಹಿಂಬದಿಯಲ್ಲಿರುವ ಅರಣ್ಯ ಇಲಾಖೆಗೆ ಸೇರಿದ ಮರವೊಂದು ಉರುಳಿ ಬಿದ್ದ ಪರಿಣಾಮವಾಗಿ ಮಸೀದಿಯ ಆವರಣ ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮರ ಬಿದ್ದ ರಭಸಕ್ಕೆ ಕೆಇಬಿ ವಿದ್ಯುತ್ ಕಂಬವು ಮುರಿದು ಬಿದ್ದಿದೆ. ಇನ್ನೂ ನೂತನವಾಗಿ ನಿರ್ಮಾಣವಾಗಿದ್ದ ಶೌಚಾಲಯ ಮತ್ತು ಮೂತ್ರಾಲಯ ಕಟ್ಟಡಕ್ಕೆ ಅಪಾರ ಹಾನಿಯಾಗಿದೆ. ಮಸೀದಿಯ ಆವರಣದಲ್ಲಿದ್ದ ಅಡಿಕೆ ಮತ್ತು ತೆಂಗಿನ ಮರಗಳಿಗೂ ಹಾನಿಯಾಗಿದೆ. ಮಸೀದಿಯ ಆವರಣದಲ್ಲಿರುವ ವಿದ್ಯುತ್ ಕಂಬಗಳು, ಸಿಸಿಟಿವಿ ಕೇಬಲ್ ಗಳು ಹಾನಿಗೀಡಾಗಿವೆ.
ಘಟನೆ ಸಂಭವಿಸುತ್ತಿದ್ದಂತೆಯೆ ನಗರದ ಅಂಜುಮಾನ್ ಅಹಲೆ ಸುನ್ನತ್ ಸಂಸ್ಥೆಯ ಕಾರ್ಯದರ್ಶಿ ಇಕ್ಬಾಲ್ ಶೇಖ್ ಅವರು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ವಸ್ತುಸ್ಥಿತಿಯನ್ನು ವಿವರಿಸಿ, ಮುಂದಿನ ಕ್ರಮಕ್ಕಾಗಿ ಮನವಿ ಮಾಡಿದ್ದಾರೆ. ಇನ್ನೂ ತುಂಡರಿಸಿ ಬಿದ್ದಿದ್ದ ಮರದ ರೆಂಬೆ ಕೊಂಬೆಗಳನ್ನು ರಾತ್ರಿ ಒಂದು ಗಂಟೆಯವರೆಗೆ ಶ್ರಮದಾನದ ಮೂಲಕ ಸ್ಥಳೀಯ ಯುವಕರು ವಿಲೇವಾರಿ ಮಾಡಿದ್ದಾರೆ. ಕೆಇಬಿಯ ಅಧಿಕಾರಿಗಳು, ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿ ಆಗಬಹುದಾದ ಅನಾಹುತವನ್ನು ತಪ್ಪಿಸಿದರು.
ಇದನ್ನೂ ಓದಿ :ಹೊಸ ಜೆರ್ಸಿಯೊಂದಿಗೆ ಯುಎಇ ಚರಣದ ಮೊದಲ ಪಂದ್ಯವಾಡಲಿದೆ ಆರ್ ಸಿಬಿ ತಂಡ
ಈ ಬಗ್ಗೆ ಕೂಡಲೆ ಅರಣ್ಯ ಇಲಾಖೆ ಕ್ರಮವನ್ನು ಕೈಗೊಳ್ಳಬೇಕೆಂದು ಹಾಗೂ ಹಾನಿಯಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ವಿದ್ಯುತ್ ಲೈನನ್ನು ದುರಸ್ತಿಗೊಳಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಇದರ ಜೊತೆಗೆ ಹಾನಿಯಾಗಿರುವುದಕ್ಕೆ ಸೂಕ್ತ ರೀತಿಯ ಪರಿಹಾರವನ್ನು ಒದಗಿಸಿಕೊಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.