Advertisement

Heavy Rain 10 ಜಿಲ್ಲೆಗಳ 11 ನದಿಗಳಲ್ಲಿ  ಪ್ರವಾಹ ಭೀತಿ

12:47 AM Jul 27, 2024 | Team Udayavani |

ಹುಬ್ಬಳ್ಳಿ/ಬೆಂಗಳೂರು: ನಿರಂತರ ಮಳೆ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕ ಸೇರಿ ಕಾವೇರಿ ಕೊಳ್ಳದ 11 ಜಿಲ್ಲೆಗಳಲ್ಲಿ  ನದಿಗಳ ನೀರಿನ ಮಟ್ಟ ಏರಿಕೆಯಾಗಿದ್ದು, ಹಲವು ಸೇತುವೆಗಳು ಮುಳುಗಡೆಯಾಗಿದೆ.

Advertisement

ನೂರಾರು ಗ್ರಾಮಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಆಯಾ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಮಂಡ್ಯ, ಮೈಸೂರು, ಹಾಸನ ಜಿಲ್ಲೆಗಳಲ್ಲಿ ಜಲಾಶಯಗಳ ಮೂಲಕ ನದಿಗೆ ಭಾರೀ ಪ್ರಮಾಣದಲ್ಲಿ ನೀರು ಬಿಡುಗಡೆಗೊಳಿಸುತ್ತಿರುವುದರಿಂದ ನದಿಗಳ ತೀರ ಪ್ರದೇಶಗಳಲ್ಲಿ ಆತಂಕ ಮನೆ ಮಾಡಿದೆ.

ಕೃಷ್ಣಾ, ದೂಧಗಂಗಾ, ವೇದಗಂಗಾ, ಘಟಪ್ರಭಾ, ಮಲಪ್ರಭಾ, ತುಂಗಭದ್ರಾ ನದಿಗಳ ರೌದ್ರಾವತಾರಕ್ಕೆ ಜಲಪ್ರಳಯವೇ ಆಗಿದೆ. ಜಲಾಶಯಗಳು ಧುಮ್ಮಿಕ್ಕುತ್ತಿವೆ. 50ಕ್ಕೂ ಹೆಚ್ಚು ಸೇತುವೆಗಳು ಮುಳುಗಡೆಯಾಗಿವೆ. ಕೆಲವು ಗ್ರಾಮಗಳು ನಡುಗಡ್ಡೆಯಾಗಿವೆ. ನೂರಾರು ಜನರನ್ನು ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ.

ಬೆಳಗಾವಿ ಜಿಲ್ಲೆಯಲ್ಲಿ ಸಪ್ತ ನದಿಗಳು ಉಕ್ಕೇರಿದ್ದು, 122 ಗ್ರಾಮಗಳಿಗೆ ಜಲದಿಗ್ಬಂಧನವಾಗಿದೆ. ಬೆಳಗಾವಿಯಲ್ಲಿ 32, ಬಾಗಲಕೋಟೆಯಲ್ಲಿ 12, ರಾಯಚೂರಿನಲ್ಲಿ 2, ಯಾದಗಿರಿ, ಕಂಪ್ಲಿಯಲ್ಲಿ ತಲಾ 1 ಸೇರಿದಂತೆ 48 ಸೇತುವೆಗಳು ಜಲಾವೃತವಾಗಿವೆ. ಹಲವು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.

Advertisement

ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಯಾದಗಿರಿ ಹಾಗೂ ತುಂಗಭದ್ರಾ ಡ್ಯಾಂನಿಂದ 1.07 ಲಕ್ಷ ಕ್ಯೂಸೆಕ್‌ ನೀರು ಬಿಟ್ಟಿದ್ದರಿಂದ ನದಿ ತೀರದ ಕೊಪ್ಪಳ, ಗಂಗಾವತಿ, ಕಂಪ್ಲಿ, ಸಿರಗುಪ್ಪ, ಹಂಪಿಯಲ್ಲಿ ನೆರೆ ಆವರಿಸಿದೆ.

10ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಭೀತಿ
ಕಬಿನಿ ಜಲಾಶಯದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯದ 19 ಟಿಎಂಸಿ. ಡ್ಯಾಂನಿಂದ 70 ಸಾವಿರ ಕ್ಯುಸೆಕ್‌ಗೂ ಹೆಚ್ಚು ನೀರನ್ನು ಕಪಿಲಾ ನದಿಗೆ ಹರಿಬಿಟ್ಟರೆ ಮೈಸೂರು ಜಿಲ್ಲೆಯ 10ಕ್ಕೂ ಹೆಚ್ಚು ಹಳ್ಳಿಗಳಿಗೆ ನೆರೆ ಭೀತಿ ಕಾಡಲಿದೆ.  ಎಚ್‌.ಡಿ. ಕೋಟೆ ತಾಲೂಕಿನ ಬಿದರಹಳ್ಳಿ, ಕಡೆಗದ್ದೆ, ಸಾಗರೆ, ಅಗತ್ತೂರು, ತುಂಬುಸೋಗೆ, ಇಟ್ನಾ, ಹೆಬ್ಬಲಗುಪ್ಪೆ, ನೇರಳೆ, ಮಾಗೂಡಿಲು ಗ್ರಾಮಗಳಲ್ಲಿ ನೆರೆ ಸಂಭವಿಸಲಿದೆ.

3 ತಾಲೂಕುಗಳಲ್ಲಿ ಪ್ರವಾಹದ ಪರಿಸ್ಥಿತಿ
ಹಾಸನದ ಹೇಮಾವತಿ ಡ್ಯಾಂನಿಂದ  ಹೇಮಾವತಿ ನದಿಗೆ 83 ಸಾವಿರ ಕ್ಯುಸೆಕ್‌ ನೀರು ಹೊರ ಬಿಡಲಾಗಿದ್ದು, ಅರಕಲಗೂಡು, ರಾಮನಾಥಪುರ ಆಲೂರು ರಸ್ತೆಗಳು ಜಲಾವೃತವಾಗಿದೆ. ಅರಕಲಗೂಡಿನ ಗೊರೂರು- ಹೊಳೆನರಸೀಪುರ ರಸ್ತೆ ಜಲದಿಗ½ಂದನವಾಗಿದೆ.  ಹೇಮಾವತಿ, ಯಗಚಿ, ವಾಟೆಹೊಳೆ ಡ್ಯಾಂಗಳ ಹೆಚ್ಚುವರಿ ನೀರನ್ನು ನದಿಗೆ ಬಿಡುತ್ತಿರುವುದರಿಂದ  ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು, ಸಕಲೇಶಪುರ, ಹೊಳೆನರಸೀಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ.

90ಕ್ಕೂ ಹೆಚ್ಚು ಗ್ರಾಮಗಳಿಗೆ ಅತಂಕ
ಮಂಡ್ಯದ ಕೆಆರ್‌ಎಸ್‌ ಡ್ಯಾಂನಿಂದ 80 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿರುವುದರಿಂದ ನದೀ ಪಾತ್ರದಲ್ಲಿ ಪ್ರವಾಹ ಉಂಟಾಗಿದೆ. ಕಾವೇರಿ ನದಿ ತೀರದ ಶ್ರೀರಂಗಪಟ್ಟಣ ತಾಲೂಕಿನ 53 ಗ್ರಾಮಗಳು, ಪಾಂಡವಪುರ 15, ಮಳವಳ್ಳಿ 21 ಗ್ರಾಮಗಳಲ್ಲಿನ ಸಾರ್ವಜನಿಕರಿಗೆ ಧ್ವನಿವರ್ಧಕಗಳ ಮೂಲಕ ನದಿ ತೀರಕ್ಕೆ ತೆರಳದಂತೆ ಜಾಗೃತಿ ಮೂಡಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next