ಸುಬ್ರಹ್ಮಣ್ಯ: ಇಲ್ಲಿನ ವಿವಿಧ ಕಡೆಯ ಮಳೆ ಹಾನಿ ಪ್ರದೇಶಗಳ ಭೇಟಿಗೆ ಬಂದಿದ್ದ ದ.ಕ. ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್ ಅವರಿಗೆ ಮಳೆಯಾಲ-ಐನೆಕಿದು ಹದಗೆಟ್ಟ ರಸ್ತೆಯ ದರುಶನವನ್ನು ಸ್ಥಳೀಯ ಬಿಜೆಪಿ ನಾಯಕರು ತಪ್ಪಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಬ್ರಹ್ಮಣ್ಯದಿಂದ ಐನೆಕಿದು-ಹರಿಹರ ಪಲ್ಲತ್ತಡ್ಕ ಭಾಗಕ್ಕೆ ಮಳೆಯಾಲ ಮೂಲಕ ಸಂಚರಿಸಬೇಕಿದ್ದ ಉಸ್ತುವಾರಿ ಸಚಿವರನ್ನು ತೀರಾ ಹದಗೆಟ್ಟ ರಸ್ತೆಯಲ್ಲಿ ಸಂಚರಿಸುವ ಬದಲು ಬದಲಿ ರಸ್ತೆಯಾಗಿ ನಡುಗಲ್ಲು ಮೂಲಕ ಸುತ್ತುಬಳಸಿ ಕರೆದೊಯ್ದರು ಎನ್ನಲಾಗಿದೆ. ಇದರಿಂದಾಗಿ ಸಚಿವರಿಗೆ ಇಲ್ಲಿನ ಸ್ಥಿತಿ ಅರ್ಥವಾಗಲಿಲ್ಲ ಮತ್ತು ವಸ್ತುಸ್ಥಿತಿ ತಿಳಿದುಕೊಳ್ಳುವುದು ಸಾಧ್ಯವಾಗಲಿಲ್ಲ. ಇದರಿಂದ ಸ್ಥಳೀಯ ಗ್ರಾಮಸ್ಥರು ತೀವ್ರ ಬೇಸರಗೊಂಡಿದ್ದಾರೆ.
ಸುಬ್ರಹ್ಮಣ್ಯದಲ್ಲಿ ಮಳೆಯಾಲ ಐನೆಕಿದು ರಸ್ತೆ ಮೂಲಕ ತೆರಳುವ ಬಗ್ಗೆ ಸಚಿವ ಸುನಿಲ್ ಕುಮಾರ್ ಅವರಲ್ಲಿ ಮಾತನಾಡಿದ್ದು, ಅದಕ್ಕೆ ಅವರೂ ಒಪ್ಪಿಗೆ ಸೂಚಿಸಿದ್ದರು. ಇದೇ ರಸ್ತೆಯಲ್ಲಿ ಕೆಲವು ದಿನಗಳ ಹಿಂದೆ ಬಸ್ಸೊಂದು ಹೂತು ಹೋಗಿತ್ತು.
ಇದೀಗ ಬಿಜೆಪಿ ನಾಯಕರ ನಡೆಗೆ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರ ಬೆಂಗಾವಲು ಪಡೆ ಗರಂ ಆಗಿರುವ ಘಟನೆಯೂ ನಡೆದಿದೆ.