Advertisement

ಭಾರೀ ಮಳೆ: ಕರಾವಳಿಗೆ ಮತ್ತೆ ಮೂರು ದಿನ ರೆಡ್‌ ಅಲರ್ಟ್‌

11:34 PM Jul 09, 2022 | Team Udayavani |

ಬೆಂಗಳೂರು: ರಾಜ್ಯದಲ್ಲಿ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆ ಮುಂದುವರಿದಿದ್ದು, ಕರಾವಳಿ ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ (ಜು.12ರ ವರೆಗೆ) ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ.

Advertisement

ಅನಂತರ ಎರಡು ದಿನಗಳು ಆರೇಂಜ್‌ ಅಲರ್ಟ್‌ ಘೋಷಿಸಿದೆ.ಈಗಾಗಲೇ ಕರಾವಳಿ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಿಂದ ಸಾಕಷ್ಟು ಪ್ರಮಾಣದಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ನಷ್ಟವಾಗಿದೆ. ನದಿ ಗಳು ತುಂಬಿ ಹರಿಯುತ್ತಿದ್ದು, ಅಪಾಯದ ಮಟ್ಟ ತಲುಪಿವೆ. ಮಲೆ ನಾಡು ಜಿಲ್ಲೆಗಳಾದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಕೂಡ ಭಾರೀ ಮಳೆಯಾಗಲಿದೆ ಎಂದು ಸೂಚಿಸಿದ್ದು, ಆರೆಂಜ್‌ ಅಲರ್ಟ್‌ ಘೋಷಿಸಿದೆ.

ಮಲೆನಾಡಿನಲ್ಲಿ ಮುಂದುವರಿದ ಮಳೆ
ಶಿವಮೊಗ್ಗ ಜಿಲ್ಲೆಯ ಬಹುತೇಕ ಭಾಗದಲ್ಲಿ ಮಳೆ ಮುಂದುವರಿದಿದೆ. ನದಿಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ತುಂಬಿ ಹರಿಯುತ್ತಿವೆ. ಹಳ್ಳ ಕೊಳ್ಳಗಳು, ಕೆರೆಕಟ್ಟೆಗಳಿಗೆ ಹೆಚ್ಚಿನ ನೀರು ಬಂದಿದೆ. ಕೆಲವೆಡೆ ಮನೆಗಳು ಕುಸಿದಿವೆ. ನಿರಂತರ ಮಳೆಯಿಂದ ಕೃಷಿ ಚಟುವಟಿಕೆಗಳು ಕೂಡ ಚುರುಕಾಗಿದೆ. ಮಳೆ ಬಿಡುವು ನೀಡಿದ ಕಡೆಗಳಲ್ಲಿ ಕೃಷಿ ಕಾರ್ಯಗಳು ಭರದಿಂದ ಸಾಗಿವೆ. ರಾಜ್ಯದ ಪ್ರಮುಖ ಜಲವಿದ್ಯುತ್‌ ಉತ್ಪಾದನೆ ಕೇಂದ್ರವಾದ ಶರಾವತಿ ಲಿಂಗನಮಕ್ಕಿ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾಗುತ್ತಿದ್ದು, ಜಲಾಶಯದ ಒಳಹರಿವು 47,968 ಕ್ಯೂಸೆಕ್‌ ಇದೆ. ಡ್ಯಾಂ ನೀರಿನ ಮಟ್ಟ 1775.35 ಅಡಿಯಿದೆ.

ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು, 28,061 ಕ್ಯೂಸೆಕ್‌ ಒಳಹರಿವು ಇದೆ. 168 ಅಡಿ 8 ಇಂಚು ನೀರು ಸಂಗ್ರಹವಾಗಿದೆ. ತುಂಗಾ ಜಲಾನಯನ ಪ್ರದೇಶದಲ್ಲೂ ಮಳೆಯಾಗುತ್ತಿದ್ದು ಜಲಾಶಯಕ್ಕೆ 58,770 ಕ್ಯೂಸೆಕ್‌ ಒಳಹರಿವು ಇದೆ. ಡ್ಯಾಂನಿಂದ 51,380 ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ.

ಕಾಫಿನಾಡಿನಲ್ಲಿ
ಮಳೆ 6ನೇ ದಿನ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ 6ನೇ ದಿನಕ್ಕೆ ಕಾಲಿ ಟ್ಟಿದ್ದು, ನದಿಗಳು ಅಪಾಯ ಮಟ್ಟ ದಲ್ಲೇ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅಲ್ಲಲ್ಲಿ ಅವಘಡಗಳು ಸಂಭವಿಸಿವೆ.

Advertisement

ಮೂಡಿಗೆರೆ, ಶೃಂಗೇರಿ, ಕೊಪ್ಪ, ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ನಿರಂತರ ಮಳೆಯಾಗುತ್ತಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, ನದಿಪಾತ್ರದ ತೋಟಗಳಿಗೆ ನೀರು ನುಗ್ಗಿದೆ. 9 ಮನೆಗಳು ಕುಸಿದಿದ್ದು, 15 ಮನೆಗಳಿಗೆ ಭಾಗಶಃ ಹಾನಿಯಾಗಿದೆ. ಕಾಫಿ, ಕಾಳುಮೆಣಸು, ಅಡಕೆ ಬೆಳೆಗೆ ಕೊಳೆ ರೋಗ ಹರಡುವ ಭೀತಿ ಎದುರಾಗಿದೆ.

ನದಿಗಳ ನೀರಿನ ಮಟ್ಟ ಏರಿಕೆ ಸಾಧ್ಯತೆ
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದ್ದು, ದಿನವಿಡೀ ಚಿಕ್ಕೋಡಿ ಭಾಗದಲ್ಲಿ ಭಾರೀ ಮಳೆಯಾಗಿದೆ. ಕೃಷ್ಣಾ, ದೂಧ್‌ಗಂಗಾ ಮತ್ತು ವೇದಗಂಗಾ ನದಿಗಳಿಗೆ 71 ಸಾವಿರ ಕ್ಯುಸೆಕ್‌ ನೀರು ಹರಿದು ಬಂದಿದೆ. ರವಿವಾರ ಮತ್ತು ಸೋಮವಾರ ನದಿ ನೀರಿನ ಮಟ್ಟದಲ್ಲಿ ಏರಿಕೆ ಆಗುವ ಸಾಧ್ಯತೆಯಿದೆ.

ಇಬ್ಬರ ಸಾವು
ಕಲಬುರಗಿ ಜಿಲ್ಲೆಯ ಚಿತ್ತಾಪುರದ ಸ್ಟೇಷನ್‌ ಏರಿಯಾ ತಾಂಡಾದಲ್ಲಿ ಶನಿವಾರ ಮನೆ ಕುಸಿದು ಆರೀಫಾ ಬೇಗಂ ಸರ್ದಾರ್‌ ಅಲಿ (65) ಎಂಬವರು ಮೃತಪಟ್ಟಿದ್ದಾರೆ. ಯಾಸ್ಮಿನ್‌ ಬೇಗಂ ಮತ್ತು ಎಂ.ಡಿ.ಅಲಿ ಎಂಬವರಿಗೆ ಗಾಯಗಳಾಗಿವೆ. ಶಿವಮೊಗ್ಗದ ಹೊಸನಗರ ಸಮೀಪದ ಪುರಪ್ಪಮನೆ ಗ್ರಾಮ ಪಂಚಾಯತಿನ ದೊಡ್ಡಬೆಳಗೋಡು ನಿವಾಸಿ ಗಣಪತಿ (75) ಅವರು ತುಂಬಿದ ಕೆರೆಗೆ ಜಾರಿ ಬಿದ್ದು ಮೃತಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next