ಮುಂಬಯಿ, ಜೂ. 18: ಮುಂಬಯಿ ಸೇರಿದಂತೆ ರಾಜ್ಯಾದ್ಯಂತ ಮುಂಗಾರು ಮಳೆ ಚುರುಕುಗೊಂಡಿದ್ದು, ಹಲವೆಡೆ ಗುಡುಗು ಸಹಿತ ಧಾರಾಕಾರ ಮಳೆ ಮುಂದುವರಿದಿದೆ. ಗುರುವಾರ ಮುಂಜಾನೆಯಿಂದ ಮುಂಬಯಿಯ ಹೆಚ್ಚಿನ ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ಜಮಾವಣೆಯಾಗಿರುವ ಘಟನೆಗಳು ಸಂಭವಿಸಿವೆ.
ಉಪನಗರಗಳಾದ ದಾದರ್, ಗೋರೆಗಾವ್, ಬೊರಿವಲಿ, ಕಾಂದಿವಲಿ ಮತ್ತು ಮಲಾಡ್ ಪ್ರದೇಶಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಭಾರೀ ಮಳೆಯಿಂದಾಗಿ ಕಾಂದಿವಲಿಯ (ಗಣೇಶನಗರ) ಓಲ್ಡ್ ಲಿಂಕ್ ರೋಡ್‌ನಲ್ಲಿ ಚರಂಡಿ ನೀರು ರಸ್ತೆಗೆ ಹರಿದು ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ. ವಸಾಯಿ, ವಿರಾರ್ ಮತ್ತು ನಲಸೋಪರ ಪ್ರದೇಶಗಳಲ್ಲಿ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು, ಆದರೆ ಮಧ್ಯಾಹ್ನದ ಅನಂತರ ಅಲ್ಲಿಯೂ ಭಾರೀ ಮಳೆಯಾಗುತ್ತಿದೆ. ನಗರಕ್ಕೆ ನೆರೆಯ ಥಾಣೆ, ಡೊಂಬಿವಲಿ, ಕಲ್ಯಾಣ್, ಬದ್ಲಾಪುರ ಸೇರಿದಂತೆ ವಿವಿಧ ಕಡೆಗಳಲ್ಲಿ ನಿರಂತರ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯು ಮುಂದಿನ ನಾಲ್ಕು ದಿನಗಳವರೆಗೆ ಭಾರೀ ಮಳೆಯ ಎಚ್ಚರಿಕೆ ನೀಡಿದೆ.
ಸಂಪರ್ಕ ಕಡಿತ : ಕೊಲ್ಲಾಪುರದಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಸುಮಾರು 60 ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ. ಈವರೆಗೆ ಜಿಲ್ಲೆಯ 25 ಅಣೆಕಟ್ಟುಗಳು ತುಂಬಿ ಹರಿಯುತ್ತಿದ್ದು, ಇದರ ಪರಿಣಾಮವಾಗಿ 60 ಹಳ್ಳಿಗಳೊಂದಿಗಿನ ನೇರ ಸಂಪರ್ಕ ಕಡಿದುಹೋಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಂಚಗಂಗಾ ನದಿಯ ನೀರಿನ ಮಟ್ಟ 25 ಅಡಿಗಳಿಗೆ ಏರಿದೆ. ಕೊಲ್ಲಾಪುರ ಜಿಲ್ಲೆಯ 12 ಅಣೆಕಟ್ಟು ಪ್ರದೇಶಗಳಲ್ಲಿ 24 ಗಂಟೆಗಳಲ್ಲಿ ಭಾರೀ ಮಳೆಯಾಗಿದೆ. ಕೊಲ್ಲಾಪುರ ನಗರ ಸೇರಿದಂತೆ ಗಗನ್‌ಬೌಡ ಮತ್ತು ರಾಧಾನಗರಿ ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ನಂದೂರ್‌ಬಾರ್‌ನ ಸಾತ್ಪುಡಾದ ಬೆಟ್ಟಗಳಲ್ಲಿ ಭಾರೀ ಮಳೆಯಿಂದಾಗಿ ಅನೇಕ ನದಿಗಳು ಮತ್ತು ತೊರೆಗಳು ಉಕ್ಕಿ ಹರಿಯಲಾರಂಭಿಸಿವೆ.
ಸುಸಾರಿ ನದಿಯಲ್ಲಿ ಉಂಟಾದ ಪ್ರವಾಹಕ್ಕೆ ನದಿಯ ಮೇಲಿರುವ ಸೇತುವೆಯ ನಿರ್ಮಾಣಕ್ಕೆ ಇರಿಸಲಾಗಿದ್ದ ಅಗತ್ಯ ವಸ್ತುಗಳು ಕೊಚ್ಚಿ ಹೋಗಿವೆ. ಸ್ಥಳದಲ್ಲಿದ್ದ ಜೆಸಿಬಿ ಹಾಗೂ ದೊಡ್ಡ ಕ್ರೇನ್‌ಗಳು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿವೆ. ಪ್ರವಾಹವು ಗುತ್ತಿಗೆದಾರನಿಗೆ ದೊಡ್ಡ ಹಾನಿಯನ್ನುಂಟುಮಾಡಿದೆ. ಕಳೆದ 3 ದಿನಗಳಿಂದ ಸಾತ್ಪುಡಾದ ಬೆಟ್ಟಗಳಲ್ಲಿ ಭಾರೀ ಮಳೆಯಾಗುತ್ತಿದೆ. ಇದರ ಪರಿಣಾಮವಾಗಿ ಈ ಸ್ಥಳದಲ್ಲಿ ಹುಟ್ಟುವ ನದಿಗಳು ಮತ್ತು ತೊರೆಗಳ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆಯಿದೆ. ನದಿಗಳ ಉದ್ದಕ್ಕೂ ನೆಲೆಸಿರುವ ಜನರಿಗೆ ಆಡಳಿತವು ಎಚ್ಚರಿಕೆ ನೀಡಿದೆ. ನದಿಗಳಿಗೆ ಇಳಿಯದಂತೆ ಜಿಲ್ಲಾಡಳಿತವು ನಾಗರಿಕರಿಗೆ ಮನವಿ ಮಾಡಿದೆ. ಕಳೆದ 2-3 ದಿನಗಳಿಂದ ರತ್ನಗಿರಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುತ್ತಿದೆ. ಇಲ್ಲಿನ ಸಂಗಮೇಶ್ವರ ಪ್ರದೇಶದಲ್ಲಿ ಮಳೆಯಿಂದಾಗಿ ಹೆಚ್ಚಿನ ಹಾನಿಯಾಗಿದೆ. ಭಾರೀ ಮಳೆಯಿಂದಾಗಿ ಪ್ರದೇಶದಲ್ಲಿನ ನದಿಗಳು ಮತ್ತು ತೊರೆಗಳು ತುಂಬಿ ಹರಿಯಲು ಪ್ರಾರಂಭಿಸಿವೆ.