ಕುಂದಾಪುರ: ಭಾರೀ ಮಳೆಯಿಂದಾಗಿ ಗುರುವಾರ ಸೌಪರ್ಣಿಕ ನದಿ ತಟದ ನಾವುಂದ ಗ್ರಾಮವು ನೆರೆಗೆ ನಲುಗಿ ಹೋಗಿದ್ದು, ನೂರಾರು ಮನೆಗಳು ಜಲಾವೃತಗೊಂಡಿದ್ದು, ಹೆಕ್ಟೇರ್‌ಗಟ್ಟಲೇ ಕೃಷಿ ಭೂಮಿ ನೀರಲ್ಲಿ ಮುಳುಗಿದೆ. ಇಷ್ಟೆಲ್ಲ ಆದರೂ ಇಲ್ಲಿಗೆ ಬಾರದ ಜನಪ್ರತಿನಿಧಿಗಳ ವಿರುದ್ಧ ಜನರು
ಆಕ್ರೋಶ ಹೊರ ಹಾಕಿದ್ದಾರೆ.
ಸಾಲ್ಬುಡ ಸುತ್ತಮುತ್ತಲಿನ ಕೆಳಾಬದಿ, ಕಂಡಿಕೇರಿ, ಬಾಂಗಿನ್‌ಮನೆ, ಅರೆಹೊಳೆ ಭಾಗಗಳಲ್ಲಿ ನೆರೆಯಿಂದಾಗಿ ಸಂಪೂರ್ಣ ಜಲಾವೃತಗೊಂಡಿದೆ. ಕೆಲ ಮನೆಯೊಳಗೆ ನೀರು ನುಗ್ಗಿದ್ದು, ಬಹುತೇಕ ಮನೆಗಳಲ್ಲಿ ಮನೆಯಿಂದ ಹೊರಬಾರದಷ್ಟು ಮನೆ ಸುತ್ತಲೂ ನೀರು ತುಂಬಿದೆ.
ನೆರೆಯಿಂದಾಗಿ ರಸ್ತೆ ಮೇಲೆ ದೋಣಿಯಲ್ಲಿ ಸಂಚಾರಿಸುವಂತಾಗಿದೆ. ದಿನಸಿ, ಅಗತ್ಯ ಸಾಮಗ್ರಿಗಳನ್ನು ಅಂಗಡಿಯಿಂದ ತರಲು ಜನ ದೋಣಿಯನ್ನು ಆಶ್ರಯಿಸಬೇಕಾಯಿತು. ಸ್ಥಳೀಯ ಗ್ರಾ.ಪಂ. ಸದಸ್ಯರು, ಯುವಕರು ಸಂತ್ರಸ್ತರಿಗೆ ಸಹಕರಿಸಿದರು.
ನಾವುಂದ ಗ್ರಾಮದ ಸುಮಾರು 30 ಹೆಕ್ಟೇರ್ ನಾಟಿ ಮಾಡಿದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ. ಅದರಲ್ಲೂ ಕೆಲವೆಡೆಗಳಲ್ಲಿ ವಾರದ ಹಿಂದಷ್ಟೆ ನಾಟಿ ಮಾಡಲಾಗಿತ್ತು. ಕಳೆದ ಕೆಲ ದಿನಗಳಿಂದ ಈ ಗದ್ದೆಗಳಲ್ಲಿ ನೀರು ನಿಂತು, ಪೈರು ಕೊಳೆತು ಹೋಗುವ ಸಂಭವವಿದೆ. ಈ ವರ್ಷದ ಮುಂಗಾರು ಹಂಗಾಮಿನ ಭತ್ತದ ಕೃಷಿ ಸಂಪೂರ್ಣ ನೆರೆಗೆ ಆಹುತಿಯಾದಂತಾಗಿದೆ.
ಬಡಾಕೆರೆ, ಹಡವು, ಪಡುಕೋಣೆ, ಮರವಂತೆಯ ಕುದ್ರು, ನಾಡ ಗ್ರಾಮದ ಪ್ರದೇಶಗಳಲ್ಲಿಯೂ ಮನೆಗಳು ಜಲಾವೃತಗೊಂಡಿದ್ದು, ಅಲ್ಲಿನ ನಿವಾಸಿಗರು ಅತಂತ್ರರಾಗಿದ್ದಾರೆ. ಬಡಾಕೆರೆ- ನಾವುಂದ ರಸ್ತೆ ಸಂಪೂರ್ಣ ಜಲಾವೃತಗೊಂಡು, ಸಂಪರ್ಕ ಕಡಿತಗೊಂಡಿದೆ.