ಕಾರ್ಕಳ/ಹುಬ್ಬಳ್ಳಿ: ಮುಂಗಾರುಪೂರ್ವ ಮಳೆ ಸಂಬಂಧಿ ಘಟನೆಗಳಲ್ಲಿ ಶನಿವಾರ ಮತ್ತೆ ಇಬ್ಬರು ಮೃತಪಟ್ಟಿದ್ದಾರೆ. ಕಾರ್ಕಳ ಸಮೀಪದ ಕಾಂತಾವರದಲ್ಲಿ ಶನಿವಾರ ಬೆಳಗ್ಗೆ ಸಿಡಿಲು ಬಡಿದು ಯುವಕರೊಬ್ಬರು ಮೃತಪಟ್ಟಿದ್ದಾರೆ.
ಪಾಲಡ್ಕ ನಿವಾಸಿ ಕಾರ್ಮಿಕ ನಿತಿನ್ ಪೂಜಾರಿ (24) ಮೃತಪಟ್ಟವರು. ಅವರು ಬೆಳಗ್ಗೆ ಕೇಪ್ಲಾಜೆ ಮಾರಿಗುಡಿ ಸಮೀಪದ ರಸ್ತೆ ಬದಿ ತೆರಳುತ್ತಿದ್ದ ವೇಳೆ ಸಿಡಿಲು ಬಡಿದಿತ್ತು. ಇದೇವೇಳೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಶನಿವಾರ ಮಧ್ಯಾಹ್ನ ಸಿಡಿಲು ಬಡಿದು ಮಹೇಶ್ ನಾಗರಾಜ ಕುಸನೂರ (9) ಮೃತಪಟ್ಟಿದ್ದಾನೆ.
ದಕ್ಷಿಣ ಕನ್ನಡದ ಸುಳ್ಯ ಮತ್ತು ಉಡುಪಿ ಜಿಲ್ಲೆಯ ಕಂದಾವರದಲ್ಲಿ ಶುಕ್ರವಾರ ರಾತ್ರಿ ಮತ್ತು ಶನಿವಾರ ಬೆಳಗ್ಗೆ ಸಿಡಿಲು ಬಡಿದು ಮೂರು ಕರುಗಳು ಮೃತಪಟ್ಟಿವೆ. ಶುಕ್ರವಾರ ರಾತ್ರಿ ಸುಳ್ಯದ ಕಲ್ಮಡ್ಕ ಗ್ರಾಮದ ಮುಚ್ಚಿಲ ಕಜೆ ಅಬ್ಟಾಸ್ ಅವರ ಹಟ್ಟಿಯಲ್ಲಿದ್ದ ಕರು ಸಿಡಿಲು ಬಡಿದು ಸಾವನ್ನಪ್ಪಿದೆ. ಇನ್ನೊಂದೆಡೆ ಶನಿವಾರ ಬೆಳಗ್ಗೆ ಕಂದಾವರ ಗ್ರಾಮದ ಹೇರಿಕೆರೆಯ ಸಮೀಪ ಸಿಡಿಲು ಬಡಿದು ಎರಡು ಕರುಗಳು ಮೃತಪಟ್ಟಿವೆ.
ಸಿಡಿಲು ಸಹಿತ ಗಾಳಿ ಮಳೆಯಾಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಕರಾವಳಿ ಜಿಲ್ಲೆಗಳಿಗೆ ಎ. 21, 22ರಂದು ಹಳದಿ ಅಲರ್ಟ್ ಘೋಷಿಸಲಾಗಿದೆ.