Advertisement

ಹಬ್ಬಕ್ಕೆ ಮಳೆಯೇ ಅತಿಥಿ; ರಾಜ್ಯದಲ್ಲಿ ಸೆ.2ರ ವರೆಗೂ ಭಾರೀ ಮಳೆ ಸಾಧ್ಯತೆ

12:44 AM Aug 30, 2022 | Team Udayavani |

ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮವನ್ನು ಎದುರು ನೋಡು ತ್ತಿರುವಾಗಲೇ ರಾಜ್ಯದ ಹಲವೆಡೆ ಮಳೆ ಭೋರ್ಗರೆದು ಅನಾಹುತ ಸೃಷ್ಟಿಸಿದೆ. ರಾಮನಗರ, ಮಂಡ್ಯ, ಕೊಡಗು, ದಕ್ಷಿಣ ಕನ್ನಡ, ರಾಯಚೂರು ಜಿಲ್ಲೆಗಳಲ್ಲಿ ಮಳೆಯಿಂದಾಗಿ ಭಾರೀ ಪ್ರಮಾಣದಲ್ಲಿ ಹಾನಿ ಉಂಟಾಗಿದೆ.

Advertisement

ಬಂಗಾಲ ಕೊಲ್ಲಿಯಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಪರಿಣಾಮ, ರಾಜ್ಯದಲ್ಲಿ ಮುಂದಿನ 3ರಿಂದ 4 ದಿನ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ರಾಮನಗರ ಜಿಲ್ಲೆಯ ಮೂಲಕ ಹಾದು ಹೋಗುವ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಹಾಗೂ ಸರ್ವಿಸ್‌ ರಸ್ತೆ ಸಂಪೂರ್ಣ ಜಲಾವೃತಗೊಂಡಿದೆ. ಹೆದ್ದಾರಿಯಲ್ಲಿ ಬಸ್‌, ದೊಡ್ಡ ಕಂಟೈನರ್‌ ವಾಹನಗಳು ಮುಳುಗುವಷ್ಟು ನೀರು ನಿಂತಿದೆ. ಹಲವು ವಾಹನಗಳು ಬಹುತೇಕ ಮುಳುಗಡೆಯಾಗಿದ್ದವು. ಬಿಳಗುಂಬ ಸಮೀಪ ಇರುವ ಅಂಡರ್‌ ಪಾಸ್‌ನಲ್ಲಿ ಖಾಸಗಿ ಬಸ್‌ ನೀರಿನಲ್ಲಿ ಸಿಲುಕಿತ್ತು. ಅದರಲ್ಲಿದ್ದ 50ಕ್ಕೂ ಹೆಚ್ಚು ಮಂದಿಯನ್ನು ಗ್ಲಾಸ್‌ ಒಡೆದು ಸ್ಥಳೀಯರು ರಕ್ಷಿಸಿದ್ದಾರೆ.

ಬಿಡದಿಯ ತೊರೆದೊಡ್ಡಿಯಲ್ಲಿ ಬೃಹತ್‌ ಆಲದಮರ ಕಾರಿನ ಮೇಲೆ ಉರುಳಿ ಬಿದ್ದು ಬೋರೆಗೌಡ(50) ಅಸುನೀಗಿದ್ದಾರೆ. ಧಾರವಾಡದ ಬೆಣ್ಣೆಹಳ್ಳದಲ್ಲಿ ಯುವಕ ಕೊಚ್ಚಿ ಹೋಗಿದ್ದಾನೆ. ನಾಲ್ವರು ಯುವಕರು ಇಂಗಳಹಳ್ಳಿಗೆ ತೆರಳುವ ವೇಳೆ ಸ್ಥಳೀಯರ ಎಚ್ಚರಿಕೆಯನ್ನು ಲೆಕ್ಕಿಸದೇ ಹಳ್ಳ ದಾಟಲು ಮುಂದಾದರು. ಈ ಸಂದರ್ಭ ಇಬ್ಬರು ಈಜಿ ದಡ ಸೇರಿದ್ದರೆ, ಇನ್ನಿಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಒಬ್ಬ ಗಿಡವೊಂದನ್ನು ಹಿಡಿದುಕೊಂಡು ಪಾರಾಗಿದ್ದಾನೆ.

ಕೊಚ್ಚಿಕೊಂಡು ಬಂದ ಮರ
ದ.ಕ. ಜಿಲ್ಲೆಯ ಸುಳ್ಯದ ಕಲ್ಮಕಾರು ಗ್ರಾಮಕ್ಕೆ ಹೊಂದಿಕೊಂಡ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮದ ಕಡಮಕಲ್ಲು ಎಸ್ಟೇಟ್‌ ಭಾಗದಲ್ಲಿ ರವಿವಾರ ತಡರಾತ್ರಿ ಭೂ ಕುಸಿತ ಸಂಭವಿಸಿದೆ.

Advertisement

ಕೊಡಗು- ಸಂಪರ್ಕ ಕಡಿತ: ಕೊಡಗು ಜಿಲ್ಲೆಯಲ್ಲಿ ಆ. 28ರ ರಾತ್ರಿ ಮತ್ತು ಆ. 29ರಂದು ಸುರಿದ ಭಾರೀ ಮಳೆಯಿಂದ ವಿವಿಧೆಡೆ ರಸ್ತೆ ಹಾಗೂ ಸೇತುವೆ ಸಂಪರ್ಕ ಕಡಿತಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮ ದ್ವೀಪದಂತಾಗಿದೆ. ನದಿ ನೀರು ತುಂಬಿ ಹರಿದು ಶ್ರೀ ಭಗಂಡೇಶ್ವರ ದೇವಾಲಯದ ಆವರಣವನ್ನು ತಲುಪಿತ್ತು. ನಾಪೋಕ್ಲು ಮತ್ತು ಮಡಿಕೇರಿ ರಸ್ತೆಯ ಮೇಲೂ ನೀರು ಹರಿಯಿತು.

ಸುಳಿಗಾಳಿಯಿಂದ‌ ವರುಣ ಪ್ರಕೋಪ
ಆಂಧ್ರ ಪ್ರದೇಶದ ಕರಾವಳಿ ಹಾಗೂ ಆಗ್ನೇಯ ಬಂಗಾಲ ಕೊಲ್ಲಿಯಲ್ಲಿನ ಸಮುದ್ರದಲ್ಲಿ ಎದ್ದಿರುವ ಮೇಲ್ಮೈ ಸುಳಿಗಾಳಿ ಪರಿಣಾಮ, ರಾಜ್ಯದಲ್ಲಿ ಇನ್ನೂ 3ರಿಂದ 4 ದಿನ ಅಂದರೆ ಸೆ. 2ರ ವರೆಗೂ ರಾಜ್ಯಾ ದ್ಯಂತ ಮಳೆ ಸುರಿಯುವ ಸಂಭವವಿದೆ. ಕರಾವಳಿ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಸೆ. 2ರ ವರೆಗೆ ಎಲ್ಲೋ ಅಲರ್ಟ್‌ ನೀಡಲಾಗಿದೆ. ಉತ್ತರ ಒಳನಾಡು ಜಿಲ್ಲೆಗಳಿಗೆ ಮಂಗಳ ವಾರ ಮತ್ತು ಬುಧವಾರ ಮಾತ್ರ ಹವಾಮಾನ ಇಲಾಖೆ ಎಲ್ಲೋ ಅಲರ್ಟ್‌ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next