Advertisement
ಕೊಡಗು ಜಿಲ್ಲೆಯಲ್ಲಿ ಮಳೆ ಆರ್ಭಟ ನಿಂತಿಲ್ಲ. ಶುಕ್ರವಾರ ಬೆಳಗ್ಗಿನಿಂದೀಚೆಗೆ ಶನಿವಾರ ಬೆಳಗ್ಗಿನ ತನಕ ಭಾಗಮಂಡಲದಲ್ಲಿ 21 ಸೆಂ.ಮೀ. ಮಳೆಯಾಗಿದೆ. ನೂರಾರು ಗ್ರಾಮಗಳು ಮುಳುಗಿವೆ.
Related Articles
ಕರಾವಳಿಯಲ್ಲಿ ಭಾರೀ ಮಳೆ
ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಶನಿವಾರವೂ ಭಾರೀ ಮಳೆ ಮುಂದುವರಿದಿತ್ತು. ಹಲವು ಕಡೆಗಳಲ್ಲಿ ಹಾನಿ ಸಂಭವಿಸಿದ್ದು, ಅಪಾಯದಲ್ಲಿರುವ ಮಂದಿಯನ್ನು ಸುರಕ್ಷಿತ ತಾಣಗಳಿಗೆ ಸ್ಥಳಾಂತರಿಸಲಾಗಿದೆ. ಬೆಳ್ತಂಗಡಿ ತಾಲೂಕಿನ ಕಲ್ಬೆಟ್ಟು, ದಿಡುಪೆ, ಕೊಲ್ಲಿ ಪ್ರದೇಶದಲ್ಲಿ ನೆರೆ ನೀರು ಕೃಷಿ ಭೂಮಿಗೆ ನುಗ್ಗಿದೆ. ಬಂಟ್ವಾಳ ತಾಲೂಕಿನಲ್ಲಿ ನೇತ್ರಾವತಿ ನದಿ ಉಕ್ಕಿ ಹರಿಯುತ್ತಿದ್ದು, 52 ಮನೆಗಳ 253 ಮಂದಿಯನ್ನು ಸ್ಥಳಾಂತರಿಸಲಾಗಿದೆ. ಉಡುಪಿ ಜಿಲ್ಲೆಯಲ್ಲೂ ಶನಿವಾರ ಉತ್ತಮ ಮಳೆಯಾಗಿದ್ದು, ಅಪಾರ ಕೃಷಿಭೂಮಿ, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.
Advertisement
ಚಾರ್ಮಾಡಿ ಘಾಟಿ ಬಂದ್ಚಿಕ್ಕಮಗಳೂರು-ಮಂಗಳೂರು ಸಂಪರ್ಕ ಕಲ್ಪಿಸುವ ಚಾರ್ಮಾಡಿ ಘಾಟಿ ಪ್ರದೇಶದ ಅನೇಕ ಕಡೆ ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಆ.11ರ ವರೆಗೆ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದೆ.
ಇಂದೂ ಮಳೆ
ಸೋಮವಾರ ಮುಂಜಾನೆಯವರೆಗಿನ 48 ತಾಸುಗಳ ಅವಧಿಯಲ್ಲಿ ಕರಾವಳಿ ಮತ್ತು ದಕ್ಷಿಣ ಒಳನಾಡಿನ ಎಲ್ಲೆಡೆ, ಉತ್ತರ ಒಳನಾಡಿನ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಕೇಂದ್ರ ತಿಳಿಸಿದೆ. ರಾಜ್ಯ ಕರಾವಳಿಯಲ್ಲಿ ಆ. 9 ರಂದು ರೆಡ್ ಅಲರ್ಟ್, ಆ. 10ರಿಂದ ಆ. 13ರ ವರೆಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಸಮುದ್ರ ಪ್ರಕ್ಷುಬ್ಧವಿರಲಿದ್ದು, ಮೀನುಗಾರರು ಸಮುದ್ರಕ್ಕಿಳಿಯ ಬಾರದು ಎಂದು ಎಚ್ಚರಿಸಿದೆ. ತಲಕಾವೇರಿ: ಮೃತದೇಹ ಪತ್ತೆ
ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿದು ಮನೆಗಳೆರಡು ನೆಲಸಮಗೊಂಡು ನಾಪತ್ತೆಯಾದ ಐವರಲ್ಲಿ ಓರ್ವರ ಮೃತದೇಹ ಪತ್ತೆಯಾಗಿದೆ. ಮೃತರನ್ನು ಆನಂದತೀರ್ಥ (86) ಎಂದು ಗುರುತಿಸಲಾಗಿದ್ದು, ಉಳಿದ ನಾಲ್ವರ ಪತ್ತೆ ಕಾರ್ಯ ಮಳೆಯ ನಡುವೆಯೂ ಚುರುಕುಗೊಂಡಿದೆ. ಪ್ರಧಾನ ಅರ್ಚಕ ನಾರಾಯಣ ಆಚಾರ್, ಪತ್ನಿ ಶಾಂತಾ, ಸಹಾಯಕರಾದ ಶ್ರೀನಿವಾಸ ಮತ್ತು ರವಿಕಿರಣ್ ಪತ್ತೆಯಲ್ಲಿ ಎನ್‌ಡಿಆರ್ ಎಫ್ ನಿರತವಾಗಿದೆ. ಶನಿವಾರ ಮಳೆಯಾಗುತ್ತಿದ್ದರೂ ಸಚಿವ ವಿ. ಸೋಮಣ್ಣ ಅವರ ಸೂಚನೆಯಂತೆ ಸ್ಥಳೀಯರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆದಿದ್ದು ಒಬ್ಬರ ದೇಹವನ್ನು ಪತ್ತೆಹಚ್ಚುವಲ್ಲಿ ತಂಡ ಯಶಸ್ವಿಯಾಯಿತು.