ಯಾದಗಿರಿ: ಜಿಲ್ಲೆಯಲ್ಲಿ ಗುರುವಾರ ಬೆಳಗಿನ ಜಾವ ಸುರಿದ ಮಳೆಯಿಂದಾಗಿ ಜನಜೀವನ ಸಂಪೂರ್ಣ ಅಸ್ತವ್ಯಸ್ಥವಾಗಿ ಸಂಚರಿಸಲು ಪರದಾಡುವಂತಾಗಿದೆ.
ಜಿಲ್ಲೆಯಲ್ಲಿ ಒಂದು ಕಡೆ ಕೋವಿಡ್ ಅಟ್ಟಹಾಸ ಮುಂದುವರಿದಿದ್ದು ಇನ್ನೊಂದೆಡೆ ಮಳೆಯ ಅಬ್ಬರ ರೈತರ ಗಾಯದ ಮೇಲೆ ಬರೆ ಎಳೆಯುವಂತೆ ಮಾಡಿದೆ.
ಜಿಲ್ಲೆಯ ಯಾದಗಿರಿ ತಾಲೂಕಿನ ಸೈದಾಪುರ ವ್ಯಾಪ್ತಿಯಲ್ಲಿ ಅತಿ ಹೆಚ್ಚು 96 ಮಿ.ಮೀ ಮಳೆ ಸುರಿದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಹಾನಿಯಾಗಿದೆ.
ಯಾದಗಿರಿ ವ್ಯಾಪ್ತಿಯಲ್ಲಿ 74 ಮಿ. ಮೀ, ಗುರುಮಠಕಲ್ 30 ಮಿ. ಮೀ, ಶಹಾಪುರ 30, ಸುರಪುರ 36 ಮಿ. ಮೀ, ವಡಗೇರಾ 46 ಮಿ. ಮೀ ಹಾಗೂ ಹುಣಸಗಿಯಲ್ಲಿ 9 ಮಿ. ಮೀ ಮಳೆಯಾಗಿದೆ.
ಸೈದಾಪುರ ಪಟ್ಟಣದ ಉಪ ತಹಸೀಲ್ದಾರ್ ಕಚೇರಿ ಮತ್ತು ನೆಮ್ಮದಿ ಕೇಂದ್ರಕ್ಕೆ ಮಳೆ ನೀರು ನುಗ್ಗಿ ಆವಾಂತರ ಸೃಷ್ಟಿಯಾಗಿದೆ.
ಸುತ್ತಮುತ್ತಲಿನ ಆನೂರ ಕೆ, ಕೊಂಡಾಪುರ, ಸಂವಾದ, ಮುನಗಾಲ, ಹಾಗೂ ಬೆಳಗುಂದಿ ಹಳ್ಳಗಳ ಸೇತುವೆ ಮೇಲಿಂದ ನೀರು ರಭಸದಿಂದ ಹರಿಯುತ್ತಿದೆ. ತಾಲೂಕಿನ ಕೊಯಿಲೂರ ಗ್ರಾಮದಲ್ಲಿಯೂ ಮಳೆ ಆವಾಂತರದಿಂದ ಇಡೀ ಗ್ರಾಮ ಜಲಾವೃತಗೊಂಡು ಮನೆಗಳಿಗೆ ನೀರು ನುಗ್ಗಿದೆ.
ಜಿಲ್ಲಾ ಪಂಚಾಯಿತಿ ಮತ್ತು ಲೋಕೋಪಯೋಗಿ ಇಲಾಖೆ ಅವೈಜ್ಞಾನಿಕ ಸೇತುವೆಗಳ ನಿರ್ಮಾಣದಿಂದ ರೈತರು ಹಾನಿ ಅನುಭವಿಸುವಂತಾಗಿದೆ ಎಂದು ರೈತ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.