ಉಡುಪಿ: ಜಿಲ್ಲೆಯಲ್ಲಿ ಶನಿವಾರ ಭಾರೀ ಮಳೆಯಾಗಿದ್ದು, ಮಧ್ಯಾಹ್ನದ ಬಳಿಕ ಬಿರುಸು ಪಡೆದುಕೊಂಡಿದೆ. ರಾತ್ರಿ ವೇಳೆ ಅತಿಯಾದ ಮಳೆಯಿಂದಾಗಿ ನಗರದ ಬನ್ನಂಜೆ ಪರಿಸರ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ ಕೃತಕ ನೆರೆಯುಂಟಾಗಿ ಬನ್ನಂಜೆ ಪ್ರದೇಶದಲ್ಲಿನ ವಾಸ್ತವ್ಯದ ಮನೆಗಳಿಗೆ ನೀರು ನುಗ್ಗಿದೆ.
ಬಂಗಾಲ ಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಪರಿಣಾಮ ಕರಾವಳಿ ಭಾಗದಲ್ಲಿ ಮುಂಗಾರು ಬಿರುಸು ಪಡೆದಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ದಿನವಿಡೀ ಭಾರೀ ಮಳೆಯಾಗಿದೆ.
ಮುಂಗಾರು ಮೋಡಗಳ ಚಲನೆಗೆ ಪೂರಕ ವಾತಾವರಣ ಇದ್ದು, ಸೆ. 19ರಿಂದ 21ರ ವರೆಗೆ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಮೂರು ದಿನ ರೆಡ್ ಅಲರ್ಟ್: ಕರಾವಳಿಯಲ್ಲಿ ಸೆ. 20, 21 ಮತ್ತು 22ರಂದು ರೆಡ್ ಹಾಗೂ ಸೆ. 23ರಂದು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಶನಿವಾರ ದಿನವಿಡೀ ಭಾರೀ ಮಳೆಯಾಗಿದ್ದು, ಕೆಲವೆಡೆ ಹಾನಿಯೂ ಸಂಭವಿಸಿದೆ.