ಸೇಡಂ: ವರುಣನ ಆರ್ಭಟಕ್ಕೆ ಅನ್ನದಾತ ಕಂಗಾಲಾಗಿದ್ದು, ಈ ಹಿಂದೆ ಸುರಿದ ಜಿಟಿ-ಜಿಟಿ ಮಳೆಗೆ ಮುಂಗಾರು ಬಿತ್ತನೆ ಮಾಡಿದ ಹೆಸರು, ಉದ್ದು ಹಾಳಾದರೆ, ಇದೀಗ ಸುರಿಯುತ್ತಿರುವ ಮಳೆಯಿಂದ ಬಿತ್ತನೆ ಮಾಡಿದ ತೊಗರಿ ಯನ್ನು ಕಳೆದುಕೊಳ್ಳುವ ಭೀತಿ ಎದುರಾಗಿದೆ.
ಈ ಹಿಂದೆ ಮುಂಗಾರು ಬಿತ್ತನೆ ಮಾಡಿದ್ದ ರೈತರಿಗೆ ಜಿಟಿ-ಜಿಟಿ ಮಳೆ, ಬಸವನ ಹುಳು, ಕಾಂಡ ನೊಣ, ಮ್ಯಾಕ್ರೋಫೋಮಿನಾ ಶಿಲೀಂಧ್ರ ರೋಗಗಳಿಂದ ಬೆಳೆ ನಷ್ಟ ಉಂಟಾಗಿತ್ತು. ತಾಲೂಕಿನ ಆಡಕಿ ವಲಯದಲ್ಲಿ 9985 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 2185 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1580 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 155 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 650 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 15 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಕೋಡ್ಲಾ ವಲಯದಲ್ಲಿ 20250 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 5630 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1830 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 255 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1850 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 30 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ.
ಮುಧೋಳ ವಲಯದಲ್ಲಿ 18325 ಹೆ. ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 5325 ಹೆ. ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1895 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 295 ಹೆ.ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. 1350 ಹೆ. ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 25 ಹೆ. ಪ್ರದೇಶದಲ್ಲಿ ನಷ್ಟ , ಸೇಡಂ ವಲಯದಲ್ಲಿ 20850 ಹೆಕ್ಟೇರ್ ಪ್ರದೇಶದಲ್ಲಿ ತೊಗರಿ ಬಿತ್ತನೆ ಮಾಡಲಾಗಿದ್ದು, 4350 ಹೆ. ಪ್ರದೇಶದಲ್ಲಿ ನಷ್ಟ, 2530 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆ ಮಾಡಲಾಗಿದ್ದು, 250 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ, 1750 ಹೆಕ್ಟೇರ್ ಪ್ರದೇಶದಲ್ಲಿ ಉದ್ದು ಬಿತ್ತನೆ ಮಾಡಿದ್ದು, 35 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿರಬಹುದೆಂದು ಅಂದಾಜಿಸಲಾಗಿದೆ. ಒಟ್ಟಾರೆ 18550 ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಬೆಳೆಹಾನಿ ಕುರಿತು ಈಗಾಗಲೇ ಸಮೀಕ್ಷೆ ಕಾರ್ಯ ಆರಂಭ ಮಾಡಲಾಗಿದೆ. ಸತತವಾಗಿ ಮಳೆ ಬರುತ್ತಿರುವ ಕಾರಣಕ್ಕೆ ಸಮೀಕ್ಷೆ ಕಾರ್ಯ ವಿಳಂಬವಾಗುತ್ತಿದೆ. ಸರ್ವೇ ಕಾರ್ಯ ತ್ವರಿತವಾಗಿ ಮಾಡಲು ಕಂದಾಯ, ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ. ಈ ಎಲ್ಲ ಇಲಾಖೆಗಳ ತಂಡ ಪ್ರತಿ ಗ್ರಾಮದ ಜಮೀನುಗಳಿಗೆ ಭೇಟಿ ನೀಡಿ ನಿಖರ ವರದಿ ಸಿದ್ಧಪಡಿಸಿ ನೀಡಲಿವೆ.
-ಬಸವರಾಜ ಬೆಣ್ಣೆಶಿರೂರ, ತಹಶೀಲ್ದಾರ್
ಸತತ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಹಲವೆಡೆ ಬೆಳೆ ನಷ್ಟ ಉಂಟಾಗಿದ್ದು, 26276 ರೈತರು ಈಗಾಗಲೇ ಬೆಳೆ ವಿಮೆ ಮಾಡಿಸಿದ್ದಾರೆ. ವಿಮೆ ಮಾಡಿಸಿದ ರೈತರು ಬೆಳೆ ನಷ್ಟವಾದ 72 ಗಂಟೆಯಲ್ಲಿ ವಿಮಾ ಕಂಪನಿಯ ಟೋಲ್ ಫ್ರೀ ಸಂಖ್ಯೆಗೆ ದೂರು ನೀಡಬೇಕು. ವಿಮಾ ಕಂಪನಿ ಹಾಗೂ ಕೃಷಿ ಇಲಾಖೆಯಿಂದ ಸಮೀಕ್ಷೆ ನಡೆಸಿ ಹಾನಿಯ ಪ್ರಮಾಣವನ್ನು ಆಧರಿಸಿ ಪರಿಹಾರ ನೀಡಲಾಗುತ್ತದೆ.
-ವೈ.ಎಲ್ ಹಂಪಣ್ಣ, ಸಹಾಯಕ ಕೃಷಿ ನಿರ್ದೇಶಕ
ಸುಧೀರ ಎಸ್. ಬಿರಾದಾರ