ಹೊಸದಿಲ್ಲಿ: ಮಹಾರಾಷ್ಟ್ರ, ಬಿಹಾರ, ಕರ್ನಾಟಕ, ತಮಿಳುನಾಡು, ಈಶಾನ್ಯ ಭಾಗ ಸೇರಿದಂತೆ ದೇಶದ ಹಲವು ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು ಹಲವೆಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಮುಂಬಯಿಯಲ್ಲಿ ಬುಧವಾರ ರಾತ್ರಿಯಿಂದ ನಿರಂತರವಾಗಿ ಮಳೆ ಸುರಿಯುತ್ತಿದೆ. ಜುಲೈ ತಿಂಗಳ ಮೊದಲ 16 ದಿನಗಳ ಕಾಲ ಇಲ್ಲಿ 1,024 ಮಿ.ಮೀ. ಮಳೆಯಾಗಿದ್ದು, ಮಾಸಿಕ ಸರಾಸರಿಗಿಂತ ಶೇ.122ರಷ್ಟು ಹೆಚ್ಚು ಮಳೆಯಾದಂತಾಗಿದೆ. ಅಲ್ಲದೆ, ಬುಧವಾರದಿಂದ ಗುರುವಾರದವರೆಗೆ 24 ಗಂಟೆಗಳಲ್ಲಿ 191.2 ಮಿ.ಮೀ. ಮಳೆ ಸುರಿಯುವ ಮೂಲಕ, 2015ರ ಬಳಿಕ ಒಂದೇ ದಿನದ ಗರಿಷ್ಠ ಮಳೆ ಎಂಬ ದಾಖಲೆ ಸೃಷ್ಟಿಯಾಗಿದೆ. ಗುರುವಾರವೂ ಕೊಂಕಣ ಪ್ರದೇಶ, ರಾಯಗಡ, ರತ್ನಗಿರಿ, ಥಾಣೆ ಸೇರಿದಂತೆ ಬಹುತೇಕ ಕಡೆ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯ ಮುನ್ಸೂಚನೆ ಇದ್ದ ಕಾರಣ ಮುಂಬಯಿಯಲ್ಲಿ ರೆಡ್ ಅಲರ್ಟ್ ಘೋಷಿಸಿ ಬುಧವಾರವೇ ಹವಾಮಾನ ಇಲಾಖೆಯು ಆದೇಶ ಹೊರಡಿಸಿತ್ತು.
68ಕ್ಕೇರಿಕೆ: ಅಸ್ಸಾಂನಲ್ಲಿ ಗುರುವಾರ ಪ್ರವಾಹದಲ್ಲಿ ಮತ್ತಿಬ್ಬರು ಕೊಚ್ಚಿಹೋಗಿದ್ದು, ಮಳೆ ಹಾಗೂ ಪ್ರವಾಹ ಸಂಬಂಧಿ ಘಟನೆಯಿಂದ ಮೃತಪಟ್ಟವರ ಸಂಖ್ಯೆ 68ಕ್ಕೇರಿದೆ. ನೆರೆಯಿಂದಾಗಿ 30 ಜಿಲ್ಲೆಗಳ 4500 ಗ್ರಾಮಗಳ 48 ಲಕ್ಷಕ್ಕೂ ಅಧಿಕ ಮಂದಿ ಅತಂತ್ರರಾಗಿದ್ದಾರೆ.
66 ಪ್ರಾಣಿಗಳ ಸಾವು: ಪ್ರವಾಹದಿಂದಾಗಿ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮುಳುಗಡೆಯಾಗಿದ್ದು, ಈವರೆಗೆ 66 ಪ್ರಾಣಿಗಳು ಸಾವಿಗೀಡಾಗಿವೆ. 170ರಷ್ಟು ಪ್ರಾಣಿಗಳನ್ನು ರಕ್ಷಿಸಿ ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ.
ಕುಸಿದ 3 ಕಟ್ಟಡ: ನಾಲ್ವರ ಸಾವು
ಧಾರಾಕಾರ ಮಳೆಯಿಂದಾಗಿ ಗುರುವಾರ ಮುಂಬಯಿಯಲ್ಲಿ 3 ಕಟ್ಟಡಗಳು ಭಾಗಶಃ ಕುಸಿದಿದ್ದು, ನಾಲ್ವರು ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಸುಮಾರು 15ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಫೋರ್ಟ್ ಏರಿಯಾದಲ್ಲಿ 7 ಮಹಡಿಯ ಕಟ್ಟಡ ಕುಸಿದುಬಿದ್ದ ಪರಿಣಾಮ, ಕನಿಷ್ಠ ಇಬ್ಬರು ಮೃತಪಟ್ಟು, ಮತ್ತಿಬ್ಬರು ಗಾಯಗೊಂಡಿದ್ದಾರೆ. ಮಲ್ವಾನಿ ಎಂಬಲ್ಲಿ 3 ಅಂತಸ್ತಿನ ಮನೆಯ ಒಂದು ಭಾಗ ಕುಸಿದು ಬಿದ್ದು, ಇಬ್ಬರು ಸಾವಿಗೀಡಾಗಿದ್ದಾರೆ. 13 ಮಂದಿ ಗಾಯಗೊಂಡಿದ್ದಾರೆ. ಇದಕ್ಕೂ ಮುನ್ನ, ಥಾಣೆಯಲ್ಲಿ 3 ಮಹಡಿಯ ಕಟ್ಟಡವು ಭಾಗಶಃ ಕುಸಿದುಬಿದ್ದಿದೆ. ಆದರೆ ಅದೃಷ್ಟವಶಾತ್ ಈ ಘಟನೆಯಲ್ಲಿ ಸಾವು-ನೋವು ಸಂಭವಿಸಿಲ್ಲ.