ಮುಂಬಯಿ: ಸೋಮವಾರ ರಾತ್ರಿಯಿಂದೀಚೆಗೆ ಸುರಿದ ಧಾರಾಕಾರ ಮಳೆಯು ವಾಣಿಜ್ಯ ನಗರಿಯನ್ನು ನಡುಗಿಸಿದೆ. ರಾತ್ರಿ ಬೆಳಗಾಗು ವಷ್ಟರಲ್ಲಿ ಮುಂಬಯಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹಲವು ತಗ್ಗುಪ್ರದೇಶಗಳು ಜಲಾವೃತವಾಗಿದ್ದು, ರಸ್ತೆ-ರೈಲು ಸಂಚಾರ ಅಸ್ತವ್ಯಸ್ತವಾಗಿವೆ. ಕೇವಲ 4 ಗಂಟೆಗಳ ಅವಧಿಯಲ್ಲಿ 200 ಮಿ.ಮೀ.ನಷ್ಟು ಮಳೆಯಾಗಿದ್ದು, 2005ರ ಬಳಿಕ ಇದೇ ಮೊದಲ ಬಾರಿಗೆ ಮುಂಬಯಿನಲ್ಲಿ ಇಷ್ಟೊಂದು ಪ್ರಮಾಣದ ಮಳೆಯಾಗಿದೆ.
ಮುಂಬಯಿನ 2 ಕೋಟಿ ನಿವಾಸಿಗಳ ಜೀವನಾಡಿಯಾಗಿರುವ ಲೋಕಲ್ ರೈಲುಗಳ ಸಂಚಾರ ಸ್ಥಗಿತಗೊಂಡಿದ್ದು, ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಕಚೇರಿಗಳು ಮುಚ್ಚಿವೆ. ಮುಂಬಯಿ ಹಾಗೂ ಸುತ್ತಮುತ್ತಲಿನ ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದ್ದು, ಬುಧವಾರವೂ ಭಾರೀ ಮಳೆ ಮುಂದುವರಿ ಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಜನಜೀವನ ಸಂಪೂರ್ಣ ಅಸ್ತವ್ಯಸ್ತ: ಕೊರೊನಾ ಸೋಂಕಿನ ನಡು ವೆಯೇ ವರುಣನ ಅಬ್ಬರವೂ ಮುಂಬಯಿಗರ ನಿದ್ದೆಗೆಡಿಸಿದೆ. ರೈಲು ಹಳಿಗಳಲ್ಲಿ ನೀರು ತುಂಬಿದ ಕಾರಣ, ಬಹುತೇಕ ಮಾರ್ಗಗಳ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ರಸ್ತೆಗಳೂ ಮುಳುಗಡೆ ಯಾ ಗಿದ್ದು ಹಲವು ಬಸ್ಸುಗಳು ಸಂಚರಿಸುವ ಮಾರ್ಗಗಳನ್ನೇ ಬದಲಿಸ ಲಾಗಿದೆ. ರಾತ್ರಿ ಸುರಿದ ಮಳೆಗೆ ಮಿಥಿ ನದಿಯು ಅಪಾಯದ ಮಟ್ಟ ಮೀರಿ ಉಕ್ಕಿ ಹರಿದಿದೆ. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ತಗ್ಗುಪ್ರದೇಶಗಳ ಜನರನ್ನು ಸ್ಥಳಾಂತರಿಸಲಾಗಿದೆ. ಒಟ್ಟಾರೆ 26 ಪ್ರದೇಶಗಳಲ್ಲಿ ಪ್ರವಾಹ ಸ್ಥಿತಿ ತಲೆದೋರಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಯಿ, ಇಬ್ಬರು ಮಕ್ಕಳ ಸಾವು: ಸಾಂತಾಕ್ರೂಸ್‌ನಲ್ಲಿ ಮಳೆಯಿಂ ದಾಗಿ ಮನೆಯೊಂದು ಕುಸಿದು ಬಿದ್ದು ಉಕ್ಕಿ ಹರಿಯುತ್ತಿದ್ದ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿ 35 ವರ್ಷದ ಮಹಿಳೆ ಮತ್ತು ಇಬ್ಬರು ಮಕ್ಕಳು ಸಾವಿಗೀಡಾಗಿದ್ದಾರೆ. ಧೋಬಿಘಾಟ್‌ನಲ್ಲಿ ಮಂಗಳವಾರ ಈ ಘಟನೆ ನಡೆದಿದೆ. ನಾಲೆಗೆ ಹೊಂದಿಕೊಂಡಂತಿದ್ದ ಮನೆಯು ಕುಸಿದುಬಿದ್ದ ಕಾರಣ, ತಾಯಿ ಮತ್ತು ಮೂರು ಮಕ್ಕಳು ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಕರೆಂಟ್ ಶಾಕ್‌ಗೆ ವ್ಯಕ್ತಿ ಸಾವು
ಮಂಗಳವಾರ ಥಾಣೆ ಜಿಲ್ಲೆಯಲ್ಲಿ ವಿದ್ಯುತ್ ಕಂಬವೊಂದನ್ನು ಆಕಸ್ಮಿಕವಾಗಿ ಸ್ಪರ್ಶಿಸಿದ ವ್ಯಕ್ತಿಯೊಬ್ಬರು ವಿದ್ಯುತ್ ಆಘಾತದಿಂದ ಮೃತಪಟ್ಟಿದ್ದಾರೆ. ಓವ್ಲಾ ಪ್ರದೇಶದ ದೇಗುಲದ ಬಳಿ ನಿಂತಿದ್ದ ವ್ಯಕ್ತಿ, ಅಕಸ್ಮಾತಾಗಿ ಕಂಬವನ್ನು ಮುಟ್ಟಿದಾಗ ಈ ಘಟನೆ ನಡೆದಿದೆ. ಮತ್ತೂಂದು ಪ್ರಕರಣದಲ್ಲಿ, ವರ್ತಕ್ ನಗರದ ವಸತಿ ಸಂಕೀರ್ಣದ ಕಟ್ಟಡದ ಚಾವಣಿಯ ಪ್ಲಾಸ್ಟರ್ ಕುಸಿದು ಬಿದ್ದಿದೆ. ಕೂಡಲೇ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿಲ್ಲ.