ಮಸ್ಕಿ: ತಾಲೂಕಿನ ಮಾರಲದಿನ್ನಿ ಬಳಿ ಇರುವ ಮಸ್ಕಿ ನಾಲಾ ಯೋಜನೆ(ಎಂಎನ್‌ಪಿ) ಅಣೆಕಟ್ಟು ಒಂದೇ ಮಳೆಗೆ ಈ ಬಾರಿ ಭರ್ತಿಯಾಗಿದೆ. ಪ್ರತಿ ವರ್ಷ ಮುಂಗಾರು ಆರಂಭದ ಬಳಿಕ ಜುಲೈ ತಿಂಗಳ ವೇಳೆಗೆ ಭರ್ತಿಯಾಗುತ್ತಿದ್ದ ಇಲ್ಲಿನ ಜಲಾಶಯ ಈ ಬಾರಿ ಮುಂಗಾರು ಪೂರ್ವವೇ ಭರ್ತಿಯಾಗಿದ್ದು, ಅಚ್ಚುಕಟ್ಟು ವ್ಯಾಪ್ತಿ ಪ್ರದೇಶದ ರೈತರ ಸಂತಸ ಇಮ್ಮಡಿಯಾಗಿದ್ದರೆ, ಹಳ್ಳಕ್ಕೆ ಹೊಂದಿಕೊಂಡ ಹಳ್ಳಿಗರಲ್ಲಿ ಢವ-ಢವ ಶುರು ಮಾಡಿದೆ.
ಈಗಲೇ ಹೊರ ಹರಿವು: ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಗುರುವಾರದ ಅಂತ್ಯಕ್ಕೆ 25 ಅಡಿ ನೀರು ಜಲಾಶಯದ ಮಡಿಲು ಸೇರಿತ್ತು. ಆದರೆ, ಶುಕ್ರವಾರದ ವೇಳೆಗೆ 0.5 ಟಿಎಂಸಿ ಅಡಿ (29 ಅಡಿ ನೀರು ಸಂಗ್ರಹ) ಸಾಮರ್ಥ್ಯದ ಮಸ್ಕಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ಹೆಚ್ಚುವರಿ ನೀರನ್ನು ಜಲಾಶಯದ ಎರಡು ಗೇಟ್‌ಗಳ ಮೂಲಕ ಹೊರ ಬಿಡಲಾಗುತ್ತಿದೆ.
ಸದ್ಯ 500 ಕ್ಯೂಸೆಕ್‌ನಷ್ಟು ಹಿರೇ ಹಳ್ಳಕ್ಕೆ ಬಿಡಲಾಗುತ್ತಿದೆ. ಹಳ್ಳದಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುವುದರಿಂದ ಹಳ್ಳದ ದಂಡೆಯ ಗ್ರಾಮಸ್ಥರು ಹಳ್ಳದಲ್ಲಿ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ. ಇನ್ನು ನಿರಂತರ ಮಳೆಯಿದ್ದು, ನೀರಿನ ಒಳ ಹರಿವು ಹೆಚ್ಚಿರುವ ಕಾರಣ ಜಲಾಶಯದ ಗೇಟ್‌ಗಳ ಮೂಲಕ ಹೆಚ್ಚಿನ ಪ್ರಮಾಣದ ನೀರು ಹೊರ ಹರಿಸುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಈಗಾಗಲೇ ತಾಲೂಕು ಆಡಳಿತಕ್ಕೆ ಹಾಗೂ ಹಳ್ಳದ ವ್ಯಾಪ್ತಿಯ ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಪಂಗಳಿಗೆ ಮಾಹಿತಿ ನೀಡಲಾಗಿದ್ದು, ಯಾರು ಹಳ್ಳಕ್ಕೆ ಇಳಿಯದಂತೆ ಸೂಚನೆ ನೀಡಲಾಗುತ್ತಿದೆ.
ಬೇಸಿಗೆ ವೇಳೆಗೆ ಡೆಡ್ ಸ್ಟೋರೇಜ್ ಹೊರತುಪಡಿಸಿ ಸಂಪೂರ್ಣ ಬರಿದಾಗಿದ್ದ ಮಸ್ಕಿ ನಾಲಾ ಯೋಜನೆಯ ಅಣೆಕಟ್ಟು ಈ ಬಾರಿ ಮುಂಗಾರು ಆರಂಭದ ಮುನ್ನವೇ ಸಂಪೂರ್ಣ ತುಂಬಿರುವುದು ಐತಿಹಾಸಿಕವೆನಿಸಿದೆ. ಜುಲೈ ಅಂತ್ಯದಲ್ಲಿ ಅಣೆಕಟ್ಟು ಭರ್ತಿಯಾಗಿ ಆಗಸ್ಟ್ ಅಂತ್ಯದ ವೇಳೆಗೆ ಬೆಳೆಗೆ ನೀರು ಹರಿಸುವುದು ಇಲ್ಲಿನ ವಾಡಿಕೆ. ಆದರೆ, ಈ ಬಾರಿ ಮುಂಗಾರು ಪೂರ್ವವೇ ಡ್ಯಾಂ ಭರ್ತಿಯಾಗಿದ್ದರಿಂದ ಅಚ್ಚುಕಟ್ಟು ವ್ಯಾಪ್ತಿಯ ಮಾರಲದಿನ್ನಿ, ಉಸ್ಕಿಹಾಳ, ಕಾಟಗಲ್, ಮುದಬಾಳ, ವೆಂಕಟಾಪುರ, ದಿಗ್ಗನಾಯಕನಬಾವಿ, ಬೆಲ್ಲದಮರಡಿ, ಬೆನಕಟ್ಟಿ, ವೆಂಕಟಾಪುರ ತಾಂಡ ಸೇರಿ 10 ಹಳ್ಳಿಗಳ ಸುಮಾರು 7,416 ಎಕರೆ ಜಮೀನುಗಳಲ್ಲಿ ಕೃಷಿ ಚಟುವಟಿಕೆ ನಡೆಸಲು ನೀರಿನ ಬರ ನೀಗಿದಂತಾಗಿದೆ.
ಹೆಚ್ಚಿನ ಮಳೆಯಾಗುತ್ತಿರುವ ಕಾರಣ ಮಸ್ಕಿ ಜಲಾಶಯದಿಂದ ನೀರು ಬಿಡಲಾಗಿದೆ. ಹಳ್ಳದ ದಂಡೆಯ ಗ್ರಾಮಸ್ಥರು ಹಳ್ಳದಲ್ಲಿ ಇಳಿಯದಂತೆ ಸೂಚನೆ ನೀಡಲಾಗಿದೆ. ತಾಲೂಕಿನಲ್ಲಿ ಮಳೆಯಿಂದಾದ ನಷ್ಟದ ಬಗ್ಗೆ ವರದಿ ತರಿಸಿಕೊಳ್ಳಲಾಗುತ್ತಿದೆ.
–ಕವಿತಾ ಆರ್., ತಹಶೀಲ್ದಾರ್, ಮಸ್ಕಿ
-ಮಲ್ಲಿಕಾರ್ಜುನ ಚಿಲ್ಕರಾಗಿ