Advertisement

ಹಬ್ಬಕ್ಕೆ ಮಳೆಯಾಘಾತ; ಪ್ರವಾಹ, ಮನೆ ಕುಸಿತದಲ್ಲಿ ಮೂವರು ಸಾವು

12:30 AM Aug 31, 2022 | Team Udayavani |

ಬೆಂಗಳೂರು: ರಾಜ್ಯಾದ್ಯಂತ ಮಂಗಳವಾರ ಮಳೆಯ ಪ್ರಕೋಪ ತಗ್ಗಿದ್ದರೂ, ಅದರಿಂದ ಉಂಟಾದ ಅನಾಹುತಗಳ ಚಿತ್ರಣ ಅನಾವರಣಗೊಳ್ಳಲಾರಂಭಿಸಿದೆ. ಹೀಗಾಗಿ, ಹೆಚ್ಚಿನ ಜಿಲ್ಲೆಗಳಲ್ಲಿ ಹಬ್ಬದ ಸಂಭ್ರಮಕ್ಕೆ ತಣ್ಣೀರೆರಚಿದಂತಾಗಿದೆ.

Advertisement

ಸೋಮವಾರದಿಂದ ಈಚೆಗೆ ರಾಜ್ಯದಲ್ಲಿ ಮೂವರು ಅಸುನೀಗಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ಕೆರೆಗಳಲ್ಲಿ ನೀರಿನ ಪ್ರಮಾಣ ಹೆಚ್ಚಾಗಿ ಕಟ್ಟೆಯೊಡೆದಿವೆ. ಇದರಿಂದಾಗಿ ಕೃಷಿ ಭೂಮಿಗೆ ಅಪಾರ ಪ್ರಮಾಣದಲ್ಲಿ ನೀರು ನುಗ್ಗಿ ಹಾನಿಯಾಗಿದೆ. ಇನ್ನು ಕೆಲವೆಡೆ ವರ್ಷಗಳ ಬಳಿಕ ಕೆರೆಗಳು ತುಂಬಿದ್ದು ರೈತಾಪಿ ವರ್ಗದವರಲ್ಲಿ ಸಂತೋಷ ತಂದಿದೆ.

ಇದೇ ವೇಳೆ ಬೆಂಗಳೂರಿನಲ್ಲಿ ಮಾತನಾಡಿದ ಕಂದಾಯ ಸಚಿವ ಆರ್‌.ಅಶೋಕ ಇದುವರೆಗೂ 5 ಲಕ್ಷ 80 ಸಾವಿರ ಹೆಕ್ಟೇರ್‌ ಜಮೀನು ಮಳೆಯಿಂದಾಗಿ ಹಾನಿಗೆ ಒಳಗಾಗಿದೆ. 1, 471 ಸೇತುವೆ, 499 ಕೆರೆಗಳಿಗೆ ಹಾನಿಯಾಗಿದೆ ಎಂದರು. ಪ್ರಸಕ್ತ ಸಾಲಿನಲ್ಲಿ ಮಳೆಗಾಲ ಶುರುವಾದ ಬಳಿಕ ಇದುವರೆಗೆ 96 ಮಂದಿ ಅಸುನೀಗಿದ್ದಾರೆ. 30 ಸಾವಿರ ಮಂದಿಗೆ ತೊಂದರೆಯಾಗಿದೆ ಎಂದು ಹೇಳಿದ್ದಾರೆ.

ಭಾರೀ ನಷ್ಟ:
ರಾಜ್ಯದಲ್ಲಿ ಮಳೆಯಿಂದಾಗಿ 7, 647 ಕೋಟಿ ರೂ. ನಷ್ಟದ ಅಂದಾಜು ಮಾಡಲಾಗಿದೆ. ಪರಿಹಾರ ಕಾರ್ಯಗಳಿಗೆ 920 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕಳೆದ 24 ಗಂಟೆಗಳಲ್ಲಿ 820 ಮಿಮೀ ಮಳೆಯಾಗಿ, 27 ಜಿಲ್ಲೆಗಳಲ್ಲಿ ಮಳೆಯಾಗಿದೆ ಮತ್ತು 187 ಹಳ್ಳಿಗಳಲ್ಲಿ ಹೆಚ್ಚಿನ ಹಾನಿಯಾಗಿದೆ ಎಂದು ಕಂದಾಯ ಸಚಿವರು ಮಾಹಿತಿ ನೀಡಿದ್ದಾರೆ.

ಕಳೆದ 24 ಗಂಟೆಗಳಲ್ಲಿ ರಾಮನಗರದಲ್ಲಿ ಇಬ್ಬರು, ಬಳ್ಳಾರಿಯಲ್ಲಿ ಒಬ್ಬರು ಅಸುನೀಗಿದ್ದಾರೆ. ಮೂವರು ನಾಪತ್ತೆಯಾಗಿದ್ದಾರೆ. 9,950 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದರು.

Advertisement

ಡಬಲ್‌ ಹಣ:
ಮಳೆ ಹಾನಿಗೆ ರಾಜ್ಯ ಸರ್ಕಾರದ ವತಿಯಿಂದ ಡಬಲ್‌ ಹಣ ನೀಡಲಾಗುತ್ತದೆ ಎಂದು ಹೇಳಿದ ಕಂದಾಯ ಸಚಿವರು, ಕೇಂದ್ರ ಸರ್ಕಾರದಿಂದಲೂ ಸಾಕಷ್ಟು ಅನುದಾನ ಬರುತ್ತಿದೆ ಎಂದರು. ಹಿಂದಿನ ಮಳೆ ಅನಾಹುತಕ್ಕೆ 1012.5 ಕೋಟಿ ರೂ. ಪರಿಹಾರ ಕೋರಲಾಗಿದೆ ಎಂದೂ ಆರ್‌. ಅಶೋಕ ಮಾಹಿತಿ ನೀಡಿದರು.

ಹಾವೇರಿಯಲ್ಲಿ ಇಬ್ಬರ ಸಾವು:
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ವರದಾ ನದಿಯಲ್ಲಿ ಎತ್ತುಗಳ ಮೈ ತೊಳೆಯಲು ಹೋಗಿದ್ದ ಯುವಕ ನೀರು ಪಾಲಾಗಿದ್ದಾನೆ. ನೀರಿನ ಮಟ್ಟ ಹೆಚ್ಚಾಗಿದ್ದ ಅವಧಿಯಲ್ಲಿಯೇ ಆತ ಹೊಳೆಗೆ ಇಳಿದಿದ್ದಾನೆ. ಆತನಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಇದೇ ವೇಳೆ, ನಿರಂತರ ಮಳೆಯಿಂದಾಗಿ ಹಾನಗಲ್ಲ ತಾಲೂಕಿನ ತುಮರಿಕೊಪ್ಪ ಗ್ರಾಮದಲ್ಲಿ ಮನೆ ಗೋಡೆ ಕುಸಿದು ನಿಂಬವ್ವ ನೆಗಳೂರು (55) ಎಂಬುವರು ಮೃತಪಟ್ಟಿದ್ದಾರೆ. ಮಳೆಯಿಂದಾಗಿ ಜಿಲ್ಲೆಯ ಅಲ್ಲಲ್ಲಿ ಮನೆಗಳು ಕುಸಿದು ಹೋಗಿವೆ ಮತ್ತು ಜನರ ಜೀವನಕ್ಕೆ ತೊಂದರೆ ಉಂಟಾಗಿದೆ. ಮನೆಗಳಿಗೆ ನೀರು ನುಗ್ಗಿದ್ದರಿಂದ ಮನೆಯಲ್ಲಿನ ಗೃಹೋಪಯೋಗಿ ವಸ್ತುಗಳು ಹಾಗೂ ದವಸ ಧಾನ್ಯಗಳು ನೀರು ಪಾಲಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಯುವಕ ಸಾವು:
ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಹರಿಸಂದ್ರ ಗ್ರಾಮದ ಕೆರೆ ಕೋಡಿ ನೀರಿನಲ್ಲಿ ಮೀನು ಹಿಡಿಯಲು ಸೋಮವಾರ ಸಂಜೆ ತೆರಳಿದ್ದ ಯುವಕ ನೀರಿನಲ್ಲಿ ಹೋಗಿ ಕೊಚ್ಚಿ ಹೋಗಿದ್ದು, ಯುವಕನ ಶವ ಮಂಗಳವಾರ ಕೆರೆಯ ಬಳಿ ಪತ್ತೆಯಾಗಿದೆ. ಸೋಮವಾರ ಬಿಡದಿಯಲ್ಲಿ ಆಲದ ಮರ ಬಿದ್ದು 50 ವರ್ಷದ ವ್ಯಕ್ತಿ ಅಸುನೀಗಿದ್ದರು.

ಮಂಡ್ಯದಲ್ಲಿ:
ಜಿಲ್ಲೆಯಲ್ಲಿ ದಾಖಲೆಯ ಮಳೆಯಾಗಿರುವ ಹಿನ್ನೆಲೆಯಲ್ಲಿ ಹಲವು ಸ್ಥಳಗಳಿಂದ ತುಂಬದ ಕೆರೆಗಳು ಭರ್ತಿಯಾಗಿವೆ. ಮಂಡ್ಯ ತಾಲೂಕಿನ ಹಳೇಬೂದನೂರು ಕೆರೆ ಸುಮಾರು 20 ವರ್ಷಗಳ ನಂತರ ಭರ್ತಿಯಾಗಿದೆ. ನಾಗಮಂಗಲ ತಾಲೂಕಿನ ಬಿಂಡಿಗನವಿಲೆ ಕೆರೆ 10 ವರ್ಷಗಳ ಬಳಿಕ ಭರ್ತಿಯಾಗಿ ಕೋಡಿ ಒಡೆದಿದೆ. ದಿತ್ತು. ಶ್ರೀರಂಗಪಟ್ಟಣದಲ್ಲಿ 3-4 ದಿನಗಳಿಂದ ಸುರಿದ ಧಾರಾಕಾರ ಮಳೆಯಿಂದಾಗಿ ಲೋಕಪಾವನಿ ನದಿ ಉಕ್ಕಿ ಹರಿದ ಪರಿಣಾಮವಾಗಿ ತೀರ ಪ್ರದೇಶದ ಕೃಷಿ ಜಮೀನು ಜಲಾವೃತವಾಗಿದೆ.

ಗ್ರಾಮಗಳು ಜಲಾವೃತ:
ತುಮಕೂರು ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ತುಮಕೂರು ನಗರ, ಮಧುಗಿರಿ, ಪಾವಗಡ, ಕೊರಟಗೆರೆ, ತುರುವೇಕೆರೆ ಸೇರಿದಂತೆ ಜಿಲ್ಲೆಯ ವಿವಿಧೆಡೆ ವರುಣ ರೌದ್ರಾವತಾರ ತೋರಿದ್ದು, ಹಲವೆಡೆ ಮನೆಗಳು ಕುಸಿದಿವೆ. ತೋಟಗಳು, ಕೃಷಿ ಜಮೀನುಗಳು, ರಸ್ತೆಗಳು ಹಾಗೂ ಕೆಲವೆಡೆ ಗ್ರಾಮಗಳು ಸಂಪೂರ್ಣ ಜಲಾವೃತಗೊಂಡಿವೆ. ತುಮಕೂರು ರಸ್ತೆಯಲ್ಲಿ ನೀರು ಉಕ್ಕಿ ಹರಿದ ಪರಿಣಾಮ ವಾಹನಗಳು ನೀರಿನಲ್ಲಿ ತೇಲಾಡಿವೆ.

ಪೊಲೀಸ್‌ ಠಾಣೆಗೆ ನುಗ್ಗಿದ ನೀರು
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಅಗರ-ಮಾಂಬಳ್ಳಿ ಗ್ರಾಮದ ಪೊಲೀಸ್‌ ಠಾಣೆಗೆ ಪ್ರವಾಹದ ನೀರು ನುಗ್ಗಿದೆ. ಹೀಗಾಗಿ, ಇಲ್ಲಿನ ಸಿಬ್ಬಂದಿ ಪರದಾಡುವಂತಾಯಿತು. ಸುವರ್ಣಾವತಿ ನದಿಯ ನೀರು ನುಗ್ಗಿದ್ದರಿಂದ ಠಾಣೆಯ ಕಪಾಟುಗಳಲ್ಲಿ ಇಡಲಾಗಿದ್ದ ಕಡತಗಳನ್ನು ಜೋಪಾನ ಮಾಡಿ ಇರಿಸಲು ಪೊಲೀಸರು ಪರದಾಡಿದ್ದಾರೆ. ಮೊಣಕಾಲಿನ ವರೆಗೆ ನದಿ ನೀರು ಬಂದು, ಪೀಠೊಪಕರಣಗಳು ಮುಳುಗಿದ್ದವು. ಠಾಣೆಯ ಆವರಣದಲ್ಲಿ ನಿಲ್ಲಿಸಿದ್ದ ವಾಹನಗಳು ತೇಲಾಡುತ್ತಿದ್ದವು.

ಮಳೆ ನಷ್ಟ
5.80 ಲಕ್ಷ ಹೆಕ್ಟೇರ್‌ ಜಮೀನು- ಹಾನಿಗೆ ಒಳಗಾಗಿರುವುದು
1,471- ಸೇತುವೆಗಳಿಗೆ ಹಾನಿ
499- ಕೆರೆಗಳಿಗೆ ತೊಂದರೆ
7,647 ಕೋಟಿ ರೂ.- ಅಂದಾಜು ನಷ್ಟ
920 ಕೋಟಿ ರೂ.- ಪರಿಹಾರ ಕಾರ್ಯಚರಣೆಗೆ ಬಿಡುಗಡೆಯಾದ ಮೊತ್ತ

ರಾಜ್ಯದ 27 ಜಿಲ್ಲೆಗಳಲ್ಲಿ ಮಳೆಯಾಗಿದೆ ಮತ್ತು 187 ಹಳ್ಳಿಗಳಲ್ಲಿ ಹೆಚ್ಚಿನ ಹಾನಿಯಾಗಿದೆ. ಪರಿಹಾರ ಕಾರ್ಯಗಳಿಗೆ 920 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಕೇಂದ್ರದಿಂದಲೂ ಹೆಚ್ಚಿನ ಅನುದಾನಕ್ಕಾಗಿ ಮನವಿ ಮಾಡಿದ್ದೇವೆ.
-ಆರ್‌. ಅಶೋಕ, ಕಂದಾಯ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next