Advertisement

ಮುಂದುವರಿದ ಮಳೆಯ ಅವಾಂತರ; ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತ

08:33 PM Aug 05, 2022 | Team Udayavani |

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಶುಕ್ರವಾರವೂ ಮಳೆ ಮುಂದುವರಿದಿದ್ದು, ಕಾವೇರಿ ನದಿ ತೀರದ ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

Advertisement

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಗುಳಕಾಯಿಹೊಸಹಳ್ಳಿ ಗ್ರಾಮದ ಸೇತುವೆ ಬಳಿ ಗುರುವಾರ ಮಧ್ಯಾಹ್ನ ನೀರಿನಲ್ಲಿ ಕೊಚ್ಚಿಹೋಗಿದ್ದ ಬೊಲೆರೋ ಗೂಡ್ಸ್‌ ವಾಹನ ಶುಕ್ರವಾರ ಬೆಳಿಗ್ಗೆ ಪತ್ತೆಯಾಗಿದ್ದು, ಚಾಲಕ ಆಶ್ಚರ್ಯಕರ ರೀತಿಯಲ್ಲಿ ಪಾರಾಗಿದ್ದಾನೆ.

ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕಿನ ಬಾಗೂರು ಹೊಬಳಿ ವಡ್ಡರಹಟ್ಟಿ ಗ್ರಾಮದಲ್ಲಿ ಮಳೆಯಿಂದ ಗೋಡೆ ಕುಸಿದ ಪರಿಣಾಮ ಪ್ರಜ್ವಲ್‌(13) ಎಂಬ ಬಾಲಕ ಮೃತಪಟ್ಟಿದ್ದಾನೆ.

ಕೃಷ್ಣರಾಜ ಸಾಗರ ಜಲಾಶಯದಿಂದ 85 ಸಾವಿರ ಕ್ಯೂಸೆಕ್‌ ಅಧಿಕ ನೀರನ್ನು ಕಾವೇರಿ ನದಿಗೆ ಹರಿಸಲಾಗುತ್ತಿದ್ದು, ಕಾವೇರಿ ನದಿ ತೀರದ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಪ್ರಮುಖ ಪ್ರವಾಸಿ ತಾಣಗಳಾದ ರಂಗನತಿಟ್ಟು ಪಕ್ಷಿಧಾಮದಲ್ಲಿ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ. ಪಿಂಡಪ್ರದಾನ ಮಾಡಲಾಗುವ ಪಶ್ಚಿಮವಾಹಿನಿ ಮಂಟಪಗಳು ಜಲಾವೃತವಾಗಿದ್ದು ಪೊಲೀಸರನ್ನು ನಿಯೋಜಿಸಲಾಗಿದೆ.

ಉಕ್ಕಿ ಹರಿಯುತ್ತಿರುವ ಕಾವೇರಿ ನದಿ ನೀರಿನಿಂದಾಗಿ ಧಾರ್ಮಿಕ ಸ್ಥಳ ಗೋಸಾಯಿಘಾಟ್‌ ಬಳಿ ಇರುವ ಆಂಜನೇಯಸ್ವಾಮಿ ದೇವಸ್ಥಾನ ಸೇರಿ ಶಿವನ ದೇವಾಲಯಗಳ ಮಂಟಪ ಭಾಗಶಃ ಮುಳುಗಡೆಯಾಗಿದೆ.

Advertisement

ಮಾರ್ಕೋನಹಳ್ಳಿ ಜಲಾಶಯಕ್ಕೆ ಪ್ರವಾಸಿಗರ ನಿರ್ಬಂಧ

ಕುಣಿಗಲ್‌ ಹಾಗೂ ತುರುವೇಕೆರೆ ತಾಲೂಕಿನಾದ್ಯಂತ ಹೆಚ್ಚು ಮಳೆಯಾಗುತ್ತಿದ್ದು, ಮಾರ್ಕೋನಹಳ್ಳಿ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಹೆಚ್ಚಾಗಿರುವುದರಿಂದ ಜಲಾಶಯಕ್ಕೆ ಪ್ರವಾಸಿಗರ ಭೇಟಿ ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ತಹಶೀಲ್ದಾರ್‌ಗೆ ಸಚಿವ ಅಶೋಕ್‌ ತರಾಟೆ
ಶುಕ್ರವಾರ ಕಂದಾಯ ಸಚಿವ ಆರ್‌. ಅಶೋಕ್‌ ಯಳಂದೂರು ತಾಲೂಕಿನ ಗಣಿಗನೂರು ಗ್ರಾಮದ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿದ್ದರು. ಈ ವೇಳೆ ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ತಹಶೀಲ್ದಾರ್‌ ಅವರನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಸುವರ್ಣಾವತಿ ನದಿದಡದಲ್ಲಿ ಉಂಟಾಗಿರುವ ಪ್ರವಾಹದ ಹಿನ್ನೆಲೆಯಲ್ಲಿ ಶಾಲೆಯಲ್ಲಿ ತೆರೆಯಲಾಗಿರುವ ಕಾಳಜಿ ಕೇಂದ್ರಕ್ಕೆ ಸಚಿವರು ಭೇಟಿ ನೀಡಿದ್ದ ವೇಳೆ ಊಟದ ಬಗ್ಗೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದರು.

ಕೇವಲ ಅನ್ನ ಸಾಂಬಾರ್‌ ಮಾಡಿಕೊಡಲಾಗುತ್ತಿದೆ. ತರಕಾರಿಯೂ ಇರುವುದಿಲ್ಲ ಎಂದು ಸಚಿವರ ಮುಂದೆ ಅಳಲು ತೋಡಿಕೊಂಡರು. ಇದರಿಂದ ಕೆಂಡಾಮಂಡಲವಾದ ಅಶೋಕ್‌, ತಹಶೀಲ್ದಾರ್‌ ಅನಂದಪ್ಪ ನಾಯಕ್‌ ಅವರನ್ನು ತರಾಟೆ ತೆಗೆದುಕೊಂಡರು.

“ಮೆನು ಪ್ರಕಾರ ಊಟ ನೀಡಲು ನಿಮಗೇನು ತೊಂದರೆ? ನಿಮ್ಮ ಕೈಲೇನಾದ್ರೂ ದುಡ್ಡು ಕೊಡ್ತೀರಾ? ಅನ್ನ, ಸಾಂಬಾರ್‌ ಕೊಟ್ಟಿರುವುದು ಯಾಕೆ? ನೀನೂ ಅದನ್ನೇ ತಿಂತೀಯಾ? ಹಣ ನೀಡಿದ್ರೂ ಸರಿಯಾದ ಊಟ ಕೊಡೋಕೆ ಸಾಯ್ತಿàರಲ್ಲ, ಇವನನ್ನು ಓಡಿಸಿ ಬಿಡ್ರಿ’ ಎಂದು ಶಾಸಕ ಎನ್‌.ಮಹೇಶ್‌ಗೆ ಸಲಹೆ ನೀಡಿದರು. ನಂತರ ಹೋಟೆಲ್‌ನಿಂದ ತಂದಿದ್ದ ಊಟವನ್ನು ಸ್ಥಳೀಯರೊಂದಿಗೆ ಸೇವಿಸಿ ಸಚಿವರು ತೆರಳಿದರು.

ಕಾಫಿನಾಡಲ್ಲಿ ಮತ್ತೆ ಮಳೆ ಅಬ್ಬರ
ಕಾಫಿನಾಡಿನಲ್ಲಿ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಪ್ರಾರಂಭಿಸಿದೆ. ಮಲೆನಾಡು ಭಾಗದಲ್ಲಿ ಹರಿಯುವ ತುಂಗಾ, ಭದ್ರಾ, ಹೇಮಾವತಿ ನದಿಗಳ ನೀರಿನ ಹರಿವು ಹೆಚ್ಚಳಗೊಂಡಿದೆ. ಶುಕ್ರವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಕಡೂರು ತಾಲೂಕು ನಿಡುವಳ್ಳಿ ಗ್ರಾಮದ ಸುತ್ತಮುತ್ತ ಗುರುವಾರ ರಾತ್ರಿ ಎಡಬಿಡದೆ ಸುರಿದ ಭಾರೀ ಮಳೆಯಿಂದ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಮನೆಯಲ್ಲಿರಿಸಿದ್ದ ದವಸ-ಧಾನ್ಯಗಳು ನೀರು ಪಾಲಾಗಿವೆ. ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಮನೆಗಳಿಗೆ ನೀರು ನುಗ್ಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದು, ಮುಖ್ಯರಸ್ತೆಯನ್ನು ಬಗೆದು ನೀರು ಹೊರಹಾಕಿದ್ದಾರೆ.

ಚಿಕ್ಕಮಗಳೂರು, ಮೂಡಿಗೆರೆ, ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲೂಕು ವ್ಯಾಪ್ತಿಯಲ್ಲಿ ಮಳೆ ಜೋರಾಗಿದ್ದು, ಬಯಲು ಪ್ರದೇಶಗಳಾದ ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲೂ ಮಳೆಯಾಗುತ್ತಿದೆ. ಮಳೆಯಿಂದ ಹಳ್ಳಕೊಳ್ಳಗಳಲ್ಲಿನ ನೀರಿನ ಹರಿವು ಹೆಚ್ಚಳಗೊಂಡಿದೆ. ಅಲ್ಲಲ್ಲಿ ಗುಡ್ಡ ಕುಸಿದ ಘಟನೆಗಳು ನಡೆದಿದ್ದು, 24 ಗಂಟೆಯಲ್ಲಿ 13 ಮನೆಗಳಿಗೆ ಹಾನಿಯಾಗಿದೆ. 24 ವಿದ್ಯುತ್‌ ಕಂಬಗಳು ಧರೆಗುರುಳಿದ್ದು, 0.48 ಕಿಮೀ ವಿದ್ಯುತ್‌ ಲೈನ್‌ಗೆ ಹಾನಿಯಾಗಿದೆ. ಜೂನ್‌ ತಿಂಗಳಿಂದ ಇಲ್ಲಿವರೆಗೂ ಜಿಲ್ಲೆಯಲ್ಲಿ 530 ಮನೆಗಳಿಗೆ ಹಾನಿಯಾಗಿದೆ.

ಕುಕ್ಕೆ: ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ಸುಬ್ರಹ್ಮಣ್ಯ ಪರಿಸರ ಹಾಗೂ ಘಟ್ಟ ಪ್ರದೇಶದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದು ಸ್ನಾನಘಟ್ಟ ಶುಕ್ರವಾರ ಮುಳುಗಡೆಗೊಂಡಿದೆ. ಯಾತ್ರಾರ್ಥಿಗಳು ತೀರದಲ್ಲೇ ತೀರ್ಥಸ್ನಾನ ನೆರವೇರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next