ಬೀದರ/ಹುಲಸೂರು: ಸತತತ ಮೂರು ದಿನಗಳಿಂದ ಆರ್ಭಟಿಸುತ್ತಿರುವ ಮಳೆಗೆ ಗಡಿ ಜಿಲ್ಲೆ ಬೀದರ ತತ್ತರಿಸಿದೆ. ಬುಧವಾರ ರಾತ್ರಿಯಿಂದ ಗುರುವಾರ ರಾತ್ರಿವರೆಗೆ ಸುರಿದ ಧಾರಾಕಾರ ಮಳೆಗೆ ಜಿಲ್ಲೆಯ ಬಹುತೇಕ ತಾಲೂಕುಗಳು ನಲುಗಿ ಹೋಗಿವೆ. ಹಳ್ಳ- ಕೊಳ್ಳಗಳು ತುಂಬಿ ಹರಿಯುತ್ತಿವೆ. ಸಾವಿರಾರು ಹೇಕ್ಟರ್ ಪ್ರದೇಶದ ಬೆಳೆಗಳು ನೀರು ಪಾಲಾಗಿದ್ದರೆ, ಅನೇಕ ಸೇತುವೆಗಳು ಮುಳುಗಡೆಯಾಗಿ ರಸ್ತೆ ಸಂಪರ್ಕ ಕಡಿತವಾಗಿವೆ. ಮನೆಗಳು ಭಾಗಶ: ಕುಸಿದು ಜನರ ಬದುಕನ್ನು ಅತಂತ್ರಗೊಳಿಸಿದೆ.
ಜಿಲ್ಲೆಯಲ್ಲಿ ಬುಧವಾರ ಬೆಳಿಗ್ಗೆಯಿಂದ ಗುರುವಾರ ಬೆಳಿಗ್ಗೆವರೆಗೆ 31 ಮಿಮಿನಷ್ಟು (ವಾಡಿಗೆ ಮಳೆ 6 ಮಿಮಿ) ಮಳೆ ಬಿದ್ದಿದೆ. ಹುಲಸೂರು ತಾಲೂಕಿನಲ್ಲಿ ಅತಿ ಹೆಚ್ಚು 50 ಮಿಮಿ ಮಳೆ ಬಿದ್ದರೆ, ಕಮಲನಗರದಲ್ಲಿ 10 ಮಿಮಿ ಮಳೆಯಾಗಿದೆ. ಬೀದರ 47 ಮಿಮಿ, ಬಸವಕಲ್ಯಾಣ 35 ಮಿಮಿ, ಚಿಟಗುಪ್ಪ 32 ಮಿಮಿ, ಔರಾದ ತಾಲೂಕಿನಲ್ಲಿ 14 ಮಿಮಿ ಮಳೆ ಸುರಿದಿದೆ. ಜಿಲ್ಲೆಯಲ್ಲಿ ಜನೆವರಿಯಿಂದ ಈವರೆಗೆ 65೦ ಮಿಮಿ ವಾಡಿಕೆ ಮಳೆಗಿಂತ 797 ಮಿಮೀ ಮಳೆ ಬಂದಿದೆ.
ತಾಲೂಕು ಕೇಂದ್ರ ಹುಲಸೂರ ಸಮೀಪದ ಕಾಮಶೆಟ್ಟಿ ಕೆರೆ ಒಡೆದು ಸುತ್ತಲಿನ ಜಮೀನು ಮಾತ್ರವಲ್ಲ, ಪಟ್ಟಣದ ಕೆಲ ಪ್ರದೇಶ ಜಲಾವೃತಗೊಂಡಿದ್ದು, ಸಾಕಷ್ಟು ಪ್ರಮಾಣದಲ್ಲಿ ಕೈಗೆ ಬಂದಿದ್ದ ಬೆಳೆ ಮಣ್ಣು ಪಾಲಾಗಿದೆ. ಪಟ್ಟಣದ ಹತ್ತಾರು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ಥಗೊಳಿಸಿದೆ. ಕಳೆದ ಬೆಸಿಗೆಯಲ್ಲಿ ಕೆರೆಯ ಹೂಳು ತೆಗೆದಿದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರಿನ ಸಂಗ್ರಹ ಆಗಿತ್ತು. ಕಮಲನಗರ- ಔರಾದ ಸಂಪರ್ಕ ರಸ್ತೆ ಸೇರಿ ತಾಲೂಕಿನ ಹಕ್ಯಾಳ-ರಂಡ್ಯಾಳ್, ಖೇಡ್-ಸಂಗಮ್, ಬಳತ್- ಕುಶನೂರ, ಕಮಲನಗರ- ರಾಂಪುರ್, ಬೆಳಕುಣಿ- ಡೊಣಗಾಂವ್ ಸೇತೆವೆಗಳು ಮುಳುಗಿ, ಸುತ್ತಲಿನ ಅನೇಕ ಗ್ರಾಮಗಳ ಸಂಪರ್ಕ ಕಡಿತಗೊಂಡಿವೆ.
ಬೀದರ, ಭಾಲ್ಕಿ ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ ಭಾರಿ ಮಳೆ ಸುರಿದಿದ್ದು, ಜಮೀನುಗಳಿಗೆ ನೀರು ಜಲಾವೃತಗೊಂಡು ರಾಶಿಗೆ ಬಂದಿದ್ದ ಉದ್ದು, ಹೆಸರು ಬೆಳೆ ಹಾನಿಯಾಗಿದೆ. ಸೋಯಾ ಮತ್ತು ಕಬ್ಬು ಸಹ ನೆಲಸಮಗೊಂಡಿದ್ದು, ರೈತರನ್ನು ಕಣ್ಣೀರಲ್ಲಿ ಕೈತಳೆಯುವಂತೆ ಮಾಡಿದೆ. ಜಿಲ್ಲೆಯ ಅನೇಕ ಕೆರೆಗಳು ಅಪಾಯದ ಮಟ್ಟ ಮೀರಿ ತುಂಬಿರುವುದರಿಂದ ಸುತ್ತಲಿನ ಜಮೀನುಗಳಿಗೆ ನೀರು ಆವರಿಸಿ, ಬೆಳೆಗಳಿಗೆ ಧಕ್ಕೆ ತಂದಿದೆ. ಬೀದರ ತಾಲೂಕಿನ ಮನ್ನಳ್ಳಿ ಬಳಿ ದೊಡ್ಡ ಕೆರೆ ತುಂಬಿ ತುಳುಕಿ ರಸ್ತೆಗೆ ಇಳಿದಿದ್ದು ಸಂಚಾರಕ್ಕೆ ತೊಡಕಾಗಿದೆ. ಹುಮನಾಬಾದ ಮತ್ತು ಹುಲಸೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸತತ ಮಳೆಯಿಂದ ಮನೆಗಳು ಶಿಥತಲಗೊಂಡು ಭಾಗಶ: ಕುಸಿದಿವೆ. ಮಾಂಜ್ರಾ ನದಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಹಿನ್ನಲೆ ನದಿ ಪಾತ್ರದ ಜಮೀನುಗಳಲ್ಲೂ ನೀರು ಸಂಗ್ರಹವಾಗಿ ಬೆಳೆಗಳು ಸುಟ್ಟು ಹೋಗಿದ್ದು, ಗ್ರಾಮಸ್ಥರಲ್ಲಿ ಈಗ ನೆರೆ ಆತಂಕ ಶುರುವಾಗಿದೆ.
ಮಳೆ ಅಬ್ಬರದಿಂದ ಬೀದರ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಗುರುವಾರ ಮಧ್ಯಾಹ್ನ ಎರಡು ಗಂಟೆಗಳ ಕಾಲ ಮಳೆ ಆರ್ಭಟದಿಂದ ತಗ್ಗು ಪ್ರದೇಶದ ಅಂಗಡಿ ಮುಗ್ಗಟ್ಟು, ಮನೆಗಳಿಗೆ ನೀರು ನುಗ್ಗಿ ಅನಾಹುತ ಸೃಷ್ಟಿಸಿತ್ತು. ಅವೈಜ್ಞಾನಿಕ ಚರಂಡಿಗಳು, ಹೂಳು ತೆಗೆಯದೇ ನಿರ್ಲಕ್ಷಸಿರುವುದರಿಂದ ನೀರು ಸರಾಗವಾಗಿ ಸಾಗಲು ಸಾಧ್ಯವಾಗದೇ ನೀರು ರಸ್ತೆಯಲ್ಲೇ ಜಲಾವೃತಗೊಂಡಿತ್ತು.