ಬೆಳ್ತಂಗಡಿ : ದಿನವಿಡೀ ವಿಪರೀತವಾಗಿ ಸುರಿದ ಮಳೆಯ ಪರಿಣಾಮ ಬೆಳ್ತಂಗಡಿ ತಾಲೂಕಿನಲ್ಲಿ ಸೋಮವಾರ ನದಿ ನೀರು ಹೆಚ್ಚಳವಾಗಿ ತಗ್ಗು ಪ್ರದೇಶಗಳ ಕೃಷಿ ತೋಟಗಳಿಗೆ ನುಗ್ಗಿದ ಘಟನೆ ನಡೆದಿದೆ.
ಮುಂಜಾನೆಯಿಂದ ನಿರಂತರ ಭಾರೀ ಮಳೆಯಾದ ಪರಿಣಾಮ ಕೆಲವೆಡೆ ನದಿ ನೀರು ಹೆಚ್ಚಳವಾಗಿ ಸಂಪರ್ಕ ಕಡಿತಗೊಂಡಿತ್ತು. ದಿಡುಪೆಯಿಂದ ಎಳನೀರು ಸಾಗುವ ರಸ್ತೆಯಲ್ಲಿ ಅಧಿಕ ನೀರು ಹರಿದು ಬಂದಿದ್ದು, ರಸ್ತೆ ಸಂಚಾರ ಕಡಿತಗೊಂಡಿತ್ತು.
ಮುಂಡಾಜೆ ಗ್ರಾಮದ ಕಾಯರ್ತೋಡಿ ನರಸಿಂಹ ಪ್ರಭು ಅವರ ತೋಟಕ್ಕೆ ನುಗ್ಗಿದ ನೇತ್ರಾವತಿ ನದಿ ನೀರಿನಿಂದ ಪಂಪು ಶೆಡ್ಡು ಜಲಾವೃತವಾಗಿದೆ. ನೆರಿಯ ಅಣಿಯೂರು ಹೊಳೆಯಲ್ಲಿ ಭಾರೀ ನೀರು ಹರಿದಿದ್ದು, ಅಣಿಯೂರು- ಕಾಟಾಜೆ- ಪರ್ಪಳ ರಸ್ತೆ ಸಂಪೂರ್ಣ ಮುಳುಗಡೆಯಾಗಿದೆ. ಕೃಷಿ, ತೋಟ, ಗದ್ದೆಗಳಿಗೆ ನೀರು ನುಗ್ಗಿದ್ದು ಸಂಚಾರ ಕಡಿತಗೊಂಡಿತ್ತು. ಸಂಜೆಯಾಗುತ್ತಲೆ ಮಳೆ ಕಡಿಮೆಯಾದ ಪರಿಣಾಮ ನೀರಿನ ಹರಿವು ತಗ್ಗಿದ್ದರಿಂದ ಸಂಚಾರ ಸುಗಮವಾಗಿದೆ.
ಅಧಿಕ ಮಳೆಯ ಪರಿಣಾಮ ಧರ್ಮಸ್ಥಳದಿಂದ ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಬಸ್ ಪಟ್ರಮೆ ಸಮೀಪದ ಕೋಡಿಮಜಲು ಎಂಬಲ್ಲಿ ಹೊಸದಾಗಿ ನಿರ್ಮಿಸಿದ ತಡೆಗೋಡೆ ಸಮೀಪ ಜಖಂಗೊಂಡಿತ್ತು. ನೆರಿಯ ಗ್ರಾ. ಪಂ. ವ್ಯಾಪ್ತಿಯ ಗಂಡಿಬಾಗಿಲು ನೆರಿಯಕಾಡು ಜೋಸೆಫ್ ಮೇನಾಚೇರಿ ಅವರ ಮನೆಯ ಚಾವಡಿ ಗೋಡೆ ಭಾಗಶಃ ಕುಸಿದಿದೆ.
ನೇತ್ರಾವತಿ, ಮೃತ್ಯುಂಜಯ ನದಿಗಳು, ಉಪನದಿಗಳು ಹಳ್ಳಗಳಲ್ಲಿ ಒಂದೇ ಸಮನೆ ನೀರು ಏರಿಕೆಯಾಗಿದ್ದರಿಂದ ಧರ್ಮಸ್ಥಳ ಸ್ನಾನ ಘಟ್ಟದಲ್ಲೂ ನೀರಿನ ಪ್ರಮಾಣ ಹೆಚ್ಚಿತ್ತು.
ಇದನ್ನೂ ಓದಿ : ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ : ಬಂಧಿತರಿಬ್ಬರಿಗೆ ಪಿಎಫ್‌ಐ, ಎಸ್‌ಡಿಪಿಐ ನಂಟು?