Advertisement

ಬಂಗಾಲಕೊಲ್ಲಿ ವಾಯುಭಾರ ಕುಸಿತ: ಕರಾವಳಿಯಾದ್ಯಂತ ಸಿಡಿಲು, ಮಳೆ

10:56 PM Jan 06, 2021 | Team Udayavani |

ಮಂಗಳೂರು/ಉಡುಪಿ: ಬಂಗಾಲಕೊಲ್ಲಿ ಹಾಗೂ ಅರಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಉಂಟಾಗಿರುವ ಪರಿಣಾಮ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಬುಧವಾರವೂ ಸಿಡಿಲು ಸಹಿತ ಮಳೆಯಾಗಿದೆ. ಕಾಸರಗೋಡಿನ ಕೆಲವು ಪ್ರದೇಶಗಳಲ್ಲೂ ರಾತ್ರಿ ಮಳೆ ಸುರಿದಿದೆ.

Advertisement

ಚಾರ್ಮಾಡಿ, ಮುಂಡಾಜೆ, ಶಿಬಾಜೆ, ಗುರುವಾಯನಕೆರೆ, ಧರ್ಮಸ್ಥಳ, ಶಿಶಿಲ, ಅರಸಿನಮಕ್ಕಿ, ಮಡಂತ್ಯಾರು, ಮದ್ದಡ್ಕ, ಬಂಟ್ವಾಳ, ಪುತ್ತೂರು, ಉಪ್ಪಿನಂಗಡಿ, ಕಲ್ಲೇರಿ, ಕರಾಯ, ಸುಬ್ರಹ್ಮಣ್ಯ, ಸುಳ್ಯ, ಕೊಮ್ಮಮೊಗ್ರು, ಏನೆಕಲ್ಲು, ನೂಜಿಬಾಳ್ತಿಲ, ಬಿಳಿಮಲೆ, ಹರಿಹರ ಪಳ್ಳತ್ತಡ್ಕ, ಕಡಬ, ಸುಬ್ರಹ್ಮಣ್ಯ ಸಹಿತ ಸೇರಿದಂತೆ ಕರಾವಳಿ ಭಾಗದ ಹಲವೆಡೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದ ಕೆಲವೆಡೆ ರಾತ್ರಿ ವೇಳೆ ಸಾಧಾರಣ ಮಳೆಯಾಗಿದೆ.

ಉಡುಪಿ: ಉತ್ತಮ ಮಳೆ
ಕಾರ್ಕಳ, ಉಡುಪಿ,ಕಾಪು, ಬ್ರಹ್ಮಾವರ, ಕೋಟ, ಹೆಬ್ರಿ, ಕುಂದಾಪುರಕ್ಕೆ ಸೇರಿದ ವಿವಿಧ ಭಾಗದಲ್ಲಿ ಮಳೆಯಾಗಿದೆ. ಮಳೆಯ ನಿರೀಕ್ಷೆಯಲ್ಲಿ ಇರದ ಸಾರ್ವಜನಿಕರು ಸಂಜೆ ವೇಳೆಯಲ್ಲಿ ಮನೆಗೆ ಹೋಗಲು ಪರದಾಡಿದ ದೃಶ್ಯ ಉಡುಪಿ-ಮಣಿಪಾಲದಲ್ಲಿ ಕಂಡು ಬಂತು.

ಕಾರ್ಕಳ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಒಂದು ತಾಸಿಗೂ ಅಧಿಕ ಹೊತ್ತು ಮಳೆಯಾಗಿದೆ. ರಸ್ತೆಯಲ್ಲಿ ನೀರು ಹರಿದು ಹೋಗುವಷ್ಟು ಮಳೆಯಾಗಿತ್ತು. ದಿಢೀರನೆ ಸುರಿದ ಮಳೆಗೆ ಜನಜೀವನ ಕೆಲ ಹೊತ್ತು ಅಸ್ತವ್ಯಸ್ತಗೊಂಡಿತ್ತು. ನಗರವಲ್ಲದೆ ನಕ್ರೆ, ಸಾಣುರು, ನಿಟ್ಟೆ, ಮಿಯಾರು, ಬಜಗೋಳಿ, ಮಾಳ, ಈದು, ತೆಳ್ಳಾರು,ಹಿರ್ಗಾನ, ಅಜೆಕಾರು, ಬೈಲೂರು ಮುಂತಾದ ಕಡೆಗಳಲ್ಲಿ ಉತ್ತಮ ಮಳೆಯಾಗಿತ್ತು.

ಸುಮಾರು ಅರ್ಧ ಗಂಟೆಗೂ ಹೆಚ್ಚು ಮಳೆ ಬಂದಿದ್ದು ಅಡಿಕೆ ಕೃಷಿಕರಿಗೆ ಸಂಕಷ್ಟ ಉಂಟಾಗಿದೆ. ಅಂಗಳದಲ್ಲಿ ಒಣಗಲು ಹಾಕಿದ ಅಡಿಕೆ ಮಳೆಯಿಂದ ಹಾನಿಯಾಗುವಂತಾಗಿದೆ. ಕುಂದಾಪುರ ತಾಲೂಕಿನ ವಿವಿಧೆಡೆ ಬುಧವಾರ ಸಂಜೆ ಮಳೆಯಾಗಿದೆ. ಕುಂದಾಪುರ ನಗರ, ಬಸ್ರೂರು, ತೆಕ್ಕಟ್ಟೆ, ಬಿದ್ಕಲ್‌ಕಟ್ಟೆ, ಮೊಳಹಳ್ಳಿ ಸುತ್ತಮುತ್ತ ಸಾಧಾರಣ ಮಳೆಯಾದರೆ, ಸಿದ್ದಾಪುರ,ಹೊಸಂಗಡಿ, ಯಡಮೊಗೆ, ಹಳ್ಳಿಹೊಳೆ, ಆಜ್ರಿ, ಅಂಪಾರು, ಶಂಕರನಾರಾಯಣ, ಗೋಳಿಯಂಗಡಿ, ಹಾಲಾಡಿ, ಬೆಳ್ವೆ, ಮಡಾಮಕ್ಕಿ, ಹೆಂಗವಳ್ಳಿ, ಅಮಾಸೆಬೈಲು, ಉಳ್ಳೂರು 74 ಪರಿಸರದಲ್ಲಿ ಗುಡುಗು ಮಿಂಚು ಸಹಿತ ಉತ್ತಮ ಮಳೆಯಾಗಿದೆ.

Advertisement

ಎರಡು ದಿನ ಮಳೆ ಸಾಧ್ಯತೆ
ಪೂರ್ವದಿಕ್ಕಿನಿಂದ ಗಾಳಿ ಬೀಸುವ ಕಾರಣದಿಂದಾಗಿ ಚಳಿಗಾಲದಲ್ಲಿಯೂ ಮಳೆ ಸುರಿಯುತ್ತಿದೆ. ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಕರಾವಳಿ ಭಾಗದ ಅನೇಕ ಕಡೆಗಳಲ್ಲಿ ಮುಂದಿನ ಎರಡು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next