ಭಟ್ಕಳ: ಶನಿವಾರ ರಾತ್ರಿಯಿಂದ ಸುರಿದ ಭಾರೀ ಮಳೆಯಿಂದಾಗಿ ನಗರ ಹಾಗೂ ಗ್ರಾಮೀಣ ಪ್ರದೇಶದ ಅನೇಕ ತಗ್ಗು ಪ್ರದೇಶಗಳು ಜಲಾವೃತವಾಗಿದ್ದಲ್ಲದೇ ರಾಷ್ಟ್ರೀಯ ಹೆದ್ದಾರಿ ಮೇಲೆ 2-3 ಅಡಿಗಳಷ್ಟು ನೀರು ನಿಂತು ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಅನೇಕ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದ್ದು ರವಿವಾರ ಸಂಜೆ ನಂತರ ಮಳೆ ಸ್ವಲ್ಪ ಬಿಡುವು ಪಡೆದುಕೊಂಡಿದ್ದು ಜನ ನಿಟ್ಟುಸಿರು ಬಿಡುವಂತಾಗಿದೆ.
ದಾಖಲೆಯ 209 ಮಿಮೀ ಮಳೆಗೆ ನದಿ, ಹೊಳೆ, ಹಳ್ಳಗಳು ತುಂಬಿ ತುಳುಕಿದರೆ, ಸಮುದ್ರ ಭೋರ್ಗೆರೆಯುತ್ತಿದ್ದು, ಅಲೆಗಳ ಆರ್ಭಟವೂ ಹೆಚ್ಚಿದೆ. ಮಳೆಗೆ ಈಗಾಗಲೇ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು ನಗರದ ಹೃದಯಭಾಗ ಸಂಶುದ್ದೀನ ವೃತ್ತ, ರಂಗೀಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಳೆಯಿಂದಾಗಿ ಕೆಲ ಹೊತ್ತು ವಾಹನಗಳ ಸಂಚಾರಕ್ಕೆ ತೀರಾ ತೊಂದರೆ ಉಂಟಾಯಿತು. ಇಲ್ಲಿ ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡದೇ ಇರುವುದರಿಂದಲೇ ವರ್ಷಂಪ್ರತಿ ಮಳೆಗಾಲದಲ್ಲಿ ರಸ್ತೆ ಹೊಳೆಯಾಗಲು ಕಾರಣವಾಗಿದೆ. ಹೆದ್ದಾರಿಯಲ್ಲಿ ಸಂಚರಿಸುವ ವಾಹನಿಗರು ರಸ್ತೆಯಲ್ಲಿ ನೀರು ಹರಿಯುವುದನ್ನು ಕಂಡು ಒಮ್ಮೆ ಹೌಹಾರಿದರೆ, ನಿರುಪಾಯರಾಗಿ ಅದೇ ನೀರಿನಲ್ಲಿ ವಾಹನ ತೆಗೆದುಕೊಂಡು ಹೋಗುತ್ತಿರುವುದು ಸಾಮಾನ್ಯವಾಗಿತ್ತು.
ರಂಗೀಕಟ್ಟೆಯಲ್ಲಿ ಸುಮಾರು 200 ಮೀಟರ್ ಉದ್ದಕ್ಕೆ ರಸ್ತೆ ನೀರಿನಲ್ಲಿ ಮುಳುಗಿದ್ದು ರಸ್ತೆ ಎಲ್ಲಿದೆ ಎಂದು ಹುಡುಕಾಡುವಂತಾಗಿತ್ತು. ಪಾದಾಚಾರಿಗಳೂ ಸಹ ತೊಂದರೆಪಟ್ಟರು. ರಸ್ತೆಯಲ್ಲಿ ವಾಹನಗಳ ಸಾಲೇ ನಿಂತಿದ್ದು, ಒಂದಾದರ ಬಳಿಕ ಒಂದು ವಾಹನ ಸಂಚಾರ ಮಾಡುವಂತಾಯಿತು. ವ್ಯಾಪಕ ಮಳೆಯಿಂದಾಗಿ ಶರಾಬಿ ಹೊಳೆಯಲ್ಲಿ ಒಮ್ಮೇಲೆ ನೀರು ಉಕ್ಕಿದ್ದರಿಂದ ಮುಂಡಳ್ಳಿಗೆ ಹೋಗುವ ರಸ್ತೆ ಮೇಲೂ ನೀರು ಬಂದು ಕೆಲ ಹೊತ್ತು ಸಂಚಾರ ಸ್ಥಗಿತಗೊಳಿಸಲಾಗಿತ್ತು. ಚೌತನಿಯ ಕುದುರೆ ಬೀರಪ್ಪ ದೇವಸ್ಥಾನಕ್ಕೂ ನೀರು ನುಗ್ಗಿದೆ. ಸನಿಹದ ಹತ್ತಾರು ಮನೆಗಳಿಗೂ ನೀರು ನುಗ್ಗಿ ಜನರು ತೊಂದರೆ ಅನುಭವಿಸುವಂತಾಯಿತು. ಹೊಳೆ ಸನಿಹದ ಐದಕ್ಕೂ ಅಧಿ ಕ ಮನೆಗಳ ಜನರು ಮನೆ ಬಿಡುವಂತಾಯಿತು.
ಮುಂಡಳ್ಳಿ, ಮೂಡಭಟ್ಕಳ, ಮುಟ್ಟಳ್ಳಿ, ಶಿರಾಲಿಯ ಸಾರದೊಳೆ ಮುಂತಾದ ಕಡೆ ಅನೇಕ ಮನೆಗಳಿಗೆ ನೀರು ನುಗ್ಗಿದ್ದು, ಜನರು ತೊಂದರೆಗೆ ಸಿಲುಕಿದ್ದಾರೆ. ಶಿರಾಲಿಯಲ್ಲೂ ಹೆದ್ದಾರಿಯಲ್ಲಿ ನೀರು ನಿಂತಿದ್ದರಿಂದ ಜನರು ಹಾಗೂ ವಾಹನ ಸಂಚಾರಕ್ಕೆ ತೀರಾ ತೊಂದರೆ ಪಡುವಂತಾಯಿತು. ಹೆದ್ದಾರಿಯಲ್ಲಿ ನೀರು ಹರಿದು ಹೋಗಲು ಸರ್ಮಪಕ ಗಟಾರದ ವ್ಯವಸ್ಥೆ ಮಾಡದಿರುವುದರಿಂದಲೇ ನೀರು ನಿಲ್ಲಲು ಕಾರಣ ಎಂದು ಜನರು ಆರೋಪಿಸಿದ್ದಾರೆ. ತಾಲೂಕಿನಲ್ಲಿ ಕಳೆದ ಮೂರ್‍ನಾಲ್ಕು ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ನೂರಾರು ಎಕರೆ ಕೃಷಿ ಭೂಮಿಗಳಿಗೆ ನೀರು ನುಗ್ಗಿದ ಬಗ್ಗೆ ವರದಿಯಾಗಿದೆ. ನೀರು ನುಗ್ಗಿದ್ದರಿಂದ ನಾಟಿ ಮಾಡಿದ ಗದ್ದೆಗಳು ಕಾಣದಂತಾಗಿವೆ.
ಗ್ರಾಮೀಣ ಭಾಗದಲ್ಲಿ ಹೊಳೆ ಸನಿಹದಲ್ಲಿರುವ ಕೆಲವು ಅಡಕೆ ತೋಟಕ್ಕೂ ನೀರು ನುಗ್ಗಿದೆ. ಇದರಿಂದ ಅಡಕೆಗೆ ಕೊಳೆ ರೋಗ ಬರುವ ಸಾಧ್ಯತೆ ಇದೆ. ತಾಲೂಕು ಆಡಳಿತದ ವತಿಯಿಂದ ಮುಟ್ಟಳ್ಳಿ, ಪುರವರ್ಗ, ಮುಂಡಳ್ಳಿ ಹಾಗೂ ಶಿರಾಲಿಯಲ್ಲಿ ಕಾಳಜಿ ಕೇಂದ್ರ ತೆರೆಯಲಾಗಿತ್ತು.
ಮೀನುಗಾರರ ರಕ್ಷಣೆ: ವ್ಯಾಪಕ ಮಳೆಗೆ ಸಮುದ್ರದಲ್ಲಿ ಅಲೆಗಳ ಆರ್ಭಟ ಜೋರಾಗಿದ್ದು, ಭಾನುವಾರ ಬೆಳಗ್ಗೆ ಮೀನು ಹಿಡಿಯಲು ಪಾತಿ ದೋಣಿ ಮೂಲಕ ಸಮುದ್ರಕ್ಕೆ ಹೋಗಿದ್ದ ಮಾವಿನಕುರ್ವೆ ಬಂದರು, ಮುಂಡಳ್ಳಿ ಮುಂತಾದ ಭಾಗದ ಸಂಕಷ್ಟಕ್ಕೆ ಸಿಲುಕಿದ ಮೀನುಗಾರರನ್ನು ರಕ್ಷಣೆ ಮಾಡಲಾಗಿದೆ. ಭಾರೀ ಮಳೆಗೆ ಮತ್ತೆ ಕಡಲ್ಕೊರೆತದ ಭೀತಿಯೂ ಎದುರಾಗಿದೆ.