ದೇವನಹಳ್ಳಿ: ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿದು ಜನ ಜೀವನ ಅಸ್ತವ್ಯಸ್ತವಾಗಿರುವ ಬೆನ್ನಲ್ಲೇ, ಬೆಂಗಳೂರು ಅಂತಾರಾಷ್ಟ್ರೀಯ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಸೋಮವಾರ ಸಂಜೆ ಸುರಿದ ಮಳೆಯಿಂದಾಗಿ ಸಂಚಾರ ಸಮಸ್ಯೆ ಎದುರಾಗಿದ್ದು ವಿಮಾನ ನಿಲ್ದಾಣದಲ್ಲಿನ ಪ್ರಯಾಣಿಕರು ಮತ್ತು ಕಾರು ಚಾಲಕರು ಸಾಕಷ್ಟು ಸಮಸ್ಯೆ ಎದುರಿಸುವಂತಾಯಿತು.
ವಿಮಾನ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸ್ಥಳಗಳಲ್ಲಿ ಮುಕ್ಕಾಲು ಅಡಿ ನೀರು ನಿಂತಿರುವುದರಿಂದ ಸಮಸ್ಯೆ ಸೃಷ್ಟಿಯಾಗಿತ್ತು. ಬೇಗೂರು ರಸ್ತೆ, ಕಾಳಮ್ಮ ಸರ್ಕಲ್, ಪಿಸೆವೆನ್ ಸಿಗ್ನಲ್ ರಸ್ತೆಯಲ್ಲಿ ಮಳೆ ನೀರು ಹೆಚ್ಚಾಗಿ ನಿಂತಿದ್ದರಿಂದ ವಾಹನಗಳು ಸಂಚರಿಸಲು ಸಾಧ್ಯವಾಗಲಿಲ್ಲ. ರನ್ ವೇನಲ್ಲಿ ಮಳೆ ನೀರಿನಿಂದ ಯಾವುದೇ ಸಮಸ್ಯೆ ಸೃಷ್ಟಿಸಲಿಲ್ಲ. ಕೆಲವೊಂದು ವಿಮಾನಗಳ ಪ್ರಯಾಣವನ್ನು ರದ್ದುಪಡಿಸಲಾಗಿದೆ.
ಅಲ್ಲದೇ, ಕೆಲವೊಂದು ವಿಮಾನಗಳ ಹಾರಾಟ ತಡವಾಗಿದೆ. ಹಾಗೆಯೇ ರಸ್ತೆಗಳಲ್ಲೇ ಹೆಚ್ಚು ನೀರು ನಿಂತಿದ್ದರಿಂದ ವಾಹನಗಳು ಕೆಟ್ಟು ನಿಂತಿದ್ದವು. ಹೀಗಾಗಿ ಸಂಚಾರ ಸಮಸ್ಯೆ ಎದುರಾಯಿತು. ದೂರದಿಂದ ವಿಮಾನ ಪ್ರಯಾಣಕ್ಕಾಗಿ ಆಗಮಿಸಿದ್ದವರು ನಿಲ್ದಾಣಕ್ಕೂ ಹೋಗದೇ, ಮನೆಯ ಕಡೆಗೂ ಸಾಗದೇ ಮಳೆಯಲ್ಲೇ ಪರದಾಡಿದರು. ದೇವನಹಳ್ಳಿ ಪಟ್ಟಣದಲ್ಲಿ ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು ಮಾರಾಟಕ್ಕೆ ಇಟ್ಟಿದ್ದ ವಸ್ತುಗಳು ನೀರುಪಾಲಾಗಿವೆ.
ಟ್ರ್ಯಾಕರ್‌ಗಳಲ್ಲಿ ಪ್ರಯಾಣಿಕರ ರವಾನೆ
ವಿಮಾನ ನಿಲ್ದಾಣದ ಬೇಗೂರು ರಸ್ತೆ ಸಂಪೂರ್ಣ ಜಲಾವೃತವಾಗಿದೆ. ಕಳೆದ 2 ಗಂಟೆ ಧಾರಾಕಾರ ಮಳೆ ಸುರಿದಿದ್ದರಿಂದ ಅವಘಡ ಸಂಭವಿಸಿತು. ವಿಮಾನ ನಿಲ್ದಾಣದ ಅಕ್ಕಪಕ್ಕದ ರೈತರ ಮೂಲಕ ಪ್ರಯಾಣಿಕರನ್ನು ಟ್ರ್ಯಾಕ್ಟರ್‌ಗಳ ಮೂಲಕ ಸುರಕ್ಷಿತ ಸ್ಥಳಗಳಿಗೆ ಕಳುಹಿಸಿಕೊಡಲಾಗುತ್ತಿದೆ.