Advertisement

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

12:02 AM Jul 09, 2024 | Team Udayavani |

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಮವಾರ ದಿನವಿಡೀ ಧಾರಾಕಾರ ಮಳೆಯಾಗಿದ್ದು, ಕೆಲವೆಡೆ ಹಾನಿ ಸಂಭವಿಸಿದೆ. ಉಜಿರೆಯಲ್ಲಿ ದಾಖಲೆಯ 142 ಮಿ.ಮೀ. ಮಳೆಯಾಗಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಜು.9ರಂದು ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ, ಪ್ರೌಢ, ಪದವಿಪೂರ್ವ ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿದೆ.

Advertisement

ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಕಲ್ಲೇರಿಯಲ್ಲಿ ಶಾಲೆಯ ತಡೆಗೋಡೆ ಕುಸಿದಿದೆ. ನಾವೂರಿನಲ್ಲಿ ದೇವಸ್ಥಾನದ ಆವರಣ ಗೋಡೆಯ ಬದಿ ಕುಸಿದಿದೆ. ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಂಗಳೂರಿನಲ್ಲಿ ದಿನವಿಡೀ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆಗೆ ಕಾರಣವಾಯಿತು. ಬಲ್ಲಾಳ್‌ಬಾಗ್‌ ಬಳಿ ಮನೆಯೊಂದಕ್ಕೆ ಹಾನಿಯಾಗಿದೆ.

ಬೈಕಂಪಾಡಿ ಕೈಗಾರಿಕ ಪ್ರದೇಶದಲ್ಲಿ ನೆರೆ ನೀರು ನುಗ್ಗಿತ್ತು. ವರುಣಮಿತ್ರ ಮಾಹಿತಿಯಂತೆ ಉಜಿರೆಯಲ್ಲಿ 142 ಮಿ.ಮೀ. ಮಳೆ, ಬಾಳ 109 ಮಿ.ಮೀ., ಅಮಾrಡಿ 75, ರಾಯಿ 80, ಬಾಳ್ತಿಲ 81.5, ಮಂಚಿ 78, ಇರಾ 68, ತುಂಬೆ 83, ಇಡಿRದು 68, ಕೆದಿಲ 67, ವಿಟ್ಲ ಪಟ್ನೂರು 66, ಅಂಡಿಂಜೆ 83, ಹೊಸಂಗಡಿ 83, ದೇಲಂತಬೆಟ್ಟು 56, ಪಟ್ರಮೆ 76, ಗುರುಪುರ 98, ಬಜ್ಪೆ 80, ಎಕ್ಕಾರು 84, ಅಲಂಕಾರು 51, ಕಲ್ಮಡ್ಮ 46.5, ಪಡುಪಣಂಬೂರು 80, ಕಿಲ್ಪಾಡಿ 71, ಕೆಂಬ್ರಾಲ 77, ಐಕಳ 63, ಮುನ್ನೂರು 58.5, ಕೋಟೆಕಾರ್‌ 73 ಮಿ.ಮೀ. ಮಳೆಯಾದ ವರದಿಯಾಗಿದೆ.

ರಜೆ ಘೋಷಣೆ; ಹರಿದಾಡಿದ ಸುಳ್ಳು ಸುದ್ದಿ
“ಭಾರೀ ಮಳೆ ಹಿನ್ನಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜು.9ರಂದು ರಜೆ ಘೋಷಿಸಲಾಗಿದೆ’ ಎಂಬ ಜಿಲ್ಲಾಧಿಕಾರಿಗಳ ನಕಲಿ ಆದೇಶ ಪ್ರತಿ ಸೋಮವಾರ 7 ಗಂಟೆ ಸುಮಾರಿಗೆ ಹರಿದಾಡಿತ್ತು. ಹಲವಾರು ಮಂದಿ ಈ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿದ ಘಟನೆಯೂ ನಡೆಯಿತು. ಈ ಕ್ಷಣಕ್ಕೆ ರಜೆ ಘೊಷಣೆಯಾಗಿಲ್ಲ ಎಂದು ವಾರ್ತಾ ಇಲಾಖೆಯಿಂದ ಸ್ಪಷ್ಟನೆ ನೀಡಲಾಗಿತ್ತು. ರಾತ್ರಿ 8 ಗಂಟೆಯ ಬಳಿಕ ಜಿಲ್ಲಾಧಿಕಾರಿಗಳು ಅಧಿಕೃತವಾಗಿ ರಜೆ ಘೋಷಿಸಿದರು.

ಎಚ್ಚರ ವಹಿಸಿ: ಡಿಸಿ
ನೀರು ಇರುವ ತಗ್ಗು ಪ್ರದೇಶ, ಕೆರೆ, ನದಿ ತೀರ, ಸಮುದ್ರ ತೀರಕ್ಕೆ ಸಾರ್ವಜನಿಕರು/ಪ್ರವಾಸಿಗರು ತೆರಳದಂತೆ ಜಾಗ್ರತೆ ವಹಿಸಬೇಕು. ಮೀನುಗಾರರು ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಬಾರದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ. ಸಂಭಾವ್ಯ ಪ್ರವಾಹ/ಭೂಕುಸಿತ ಪ್ರದೇಶಗಳನ್ನು ಗುರುತಿಸಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ವಿಪರೀತ ಮಳೆ ಸುರಿಯುತ್ತಿರುವುದರಿಂದ ಸಾರ್ವಜನಿಕರು ನದಿಗಳ/ತೋಡುಗಳ ಸಮೀಪ ಹೋಗದಂತೆ ಎಚ್ಚರಿಕೆ ವಹಿಸಬೇಕು.

Advertisement

ಪ್ರಾಕೃತಿಕ ವಿಕೋಪದಿಂದ ಯಾವುದೇ ರೀತಿಯ ಘಟನೆ ಸಂಭವಿಸಿದಲ್ಲಿ ಅಥವಾ ಸಂಭವಿಸಬಹುದಾದ ಸೂಚನೆ ಇದ್ದಲ್ಲಿ ಸಾರ್ವಜನಿಕರು ಕೂಡಲೇ ಸಂಬಂಧಪಟ್ಟ ಪಂಚಾಯತ್‌/ಸಂಸ್ಥೆಗಳಿಗೆ ಮಾಹಿತಿ ನೀಡಬೇಕು. ವಿದ್ಯಾರ್ಥಿಗಳ ಹಾಜರಾತಿ ಕಡ್ಡಾಯ ಮಾಡುವಂತಿಲ್ಲ. ದುರ್ಬಲ/ಶಿಥಿಲ ಕಟ್ಟಡಗಳು ಇದ್ದಲ್ಲಿ ಅಂತಹ ಕಟ್ಟಡಗಳನ್ನು ಪಾಠ ಪ್ರವಚನಗಳಿಗೆ ಬಳಸುವಂತಿಲ್ಲ. ಈ ನಿಟ್ಟಿನಲ್ಲಿ ಶಾಲಾ-ಕಾಲೇಜುಗಳ ಮುಖ್ಯಸ್ಥರು ಕಟ್ಟಡಗಳ ಸುಸ್ಥಿತಿ ಬಗ್ಗೆ ಗಮನಹರಿಸಬೇಕು ಎಂದು ಅವರು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗಿನವರೆಗೆ “ರೆಡ್‌ ಅಲರ್ಟ್‌’
ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಜು.9 ರ ಬೆಳಗ್ಗೆ 8.30ರ ವರೆಗೆ ಕರಾವಳಿ ಭಾಗದಲ್ಲಿ “ರೆಡ್‌ ಅಲರ್ಟ್‌’ ಘೋಷಿಸಲಾಗಿದೆ. ಬಳಿಕ “ಆರೆಂಜ್‌ ಅಲರ್ಟ್‌’ ಇರಲಿದೆ. ಜು.10 ಮತ್ತು 11ರಂದು ಎಲ್ಲೋ ಅಲರ್ಟ್‌ ಮತ್ತು ಜು.12ರಂದು ಮತ್ತೆ ಆರೆಂಜ್‌ ಅಲರ್ಟ್‌ ಇದೆ. ಈ ದಿನಗಳಲ್ಲಿ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಾಗಿರಲಿದೆ ಎಂದು ತಿಳಿಸಿದೆ.

ಪ್ರಾಕೃತಿಕ ವಿಕೋಪ ತುರ್ತು ಸಮಸ್ಯೆಗೆ ದೂರವಾಣಿ ಸಂಖ್ಯೆ
ಜಿಲ್ಲಾ ತುರ್ತು ಸೇವೆಗೆ 24×7 ಕಂಟ್ರೋಲ್‌ ರೂಂ: 1077/0824-2442590
ಮಂಗಳೂರು ಪಾಲಿಕೆ: 0824-2220306/2220319

ಉಳ್ಳಾಲ: ಮರ ಬಿದ್ದು ಕಾರಿಗೆ ಹಾನಿ
ಉಳ್ಳಾಲ: ಕಾರಿನ ಮೇಲೆ ಮರ ಬಿದ್ದ ಘಟನೆ ಸೋಮವಾರ ಮಧ್ಯಾಹ್ನ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪಿಲಾರು ರಂಗೋಲಿ ಕೇಟರರ್ಸ್‌ ಬಳಿ ನಡೆದಿದೆ. ಪಿಲಾರಿನ ಬಾಡಿಗೆ ಮನೆಯಲ್ಲಿ ನೆಲೆಸಿರುವ ಆಶಿಶ್‌ ಎಂಬವರು ಕಾರನ್ನ ಮನೆಯ ಹೊರಗಡೆಯ ಖಾಸಗಿ ಕಾಲಿ ಪ್ರದೇಶದಲ್ಲಿ ನಿಲ್ಲಿಸಿ ಮನೆಯೊಳಗೆ ತೆರಳಿದಾಕ್ಷಣವೇ ಭಾರೀ ಗಾತ್ರದ ಮರವೊಂದು ಮುರಿದು ಕಾರಿನ ಮೇಲೆ ಬಿದ್ದಿದೆ. ಘಟನೆ ಸಂದರ್ಭ ಕಾರಿನೊಳಗೆ ಯಾರೂ ಇರಲಿಲ್ಲ.

ಕಾಸರಗೋಡು: ಸಿಡಿಲು ಸಹಿತ ಮಳೆ ಸಾಧ್ಯತೆ
ಕಾಸರಗೋಡು: ಕಾಸರಗೋಡು ಸಹಿತ ಕೇರಳದ ವಿವಿಧೆಡೆ ಜು.12 ರ ವರೆಗೆ ಸಿಡಿಲು ಸಹಿತ ಬಿರುಸಿನ ಮಳೆಯಾಗುವ ಸಾಧ್ಯತೆ
ಯಿದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.

 

Advertisement

Udayavani is now on Telegram. Click here to join our channel and stay updated with the latest news.

Next