Advertisement
ಮಧ್ಯಾಹ್ನದ ವೇಳೆಗೆ ನೆರೆನೀರು ತಗ್ಗಿದ್ದು, ಗೌರಿ ಹೊಳೆ ಬದಿಯ ನಿವಾಸಿಗಳ ಆತಂಕ ಇನ್ನೂ ದೂರವಾಗಿಲ್ಲ. ಗೌರಿ ಹೊಳೆಯ ಬದಿಯಲ್ಲಿರುವ ಎಲ್ಲ ತೋಟಗಳಲ್ಲಿ ಕಳೆದ ಕೆಲ ದಿನಗಳಿಂದ ನೀರು ನಿಂತಿದ್ದು, ಕೃಷಿಕರು ಆತಂಕದಲ್ಲಿದ್ದಾರೆ. ಪುತ್ತೂರು-ದರ್ಬೆ ಹೆದ್ದಾರಿಯಲ್ಲಿ ಸವಣೂರು, ಕಾಣಿಯೂರು, ಸುಬ್ರಹ್ಮಣ್ಯ ಸಂಪರ್ಕಿಸುವ ಸರ್ವೆ ಎಂಬಲ್ಲಿರುವ ಸೇತುವೆಯಲ್ಲಿ ನೀರು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.
ಬೆಳಂದೂರು: ಕುಮಾರಧಾರಾ ನದಿಯಲ್ಲಿ ಧುಮ್ಮಿಕ್ಕಿ ನೀರು ಹರಿಯುತ್ತಿದ್ದು, ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ನದಿ ಪಾತ್ರದಲ್ಲಿರುವ ತೋಟಗಳು ಸಂಪೂರ್ಣ ಜಲಾವೃತಗೊಂಡಿವೆ. ನದಿ ದಡದಲ್ಲಿರುವ ದೇವಸ್ಥಾನ, ಮಸೀದಿ, ಮನೆಗಳಿಗೆ ನೆರೆ ನೀರು ನುಗ್ಗಿ ಜಲಾವೃತವಾಗಿದೆ. ಮಧ್ಯಾಹ್ನ ಅನಂತರ ನೀರಿನ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದ್ದು, ಜನತೆ ಭೀತಿಗೊಳಗಾಗಿದ್ದಾರೆ. ಕುದ್ಮಾರು ಗ್ರಾಮದ ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ವಠಾರ ಸಂಪೂರ್ಣ ಜಲಾವೃತಗೊಂಡಿದ್ದು, ದೇವಾಲಯದ ಕೆರೆ ನೀರಿನಿಂದ ಆವೃತವಾಗಿ, ಕುಸಿಯುವ ಹಂತದಲ್ಲಿದೆ. ದೇವಾಯಲದ ಸಭಾಭವನವೂ ಜಲಾವೃತವಾಗಿದೆ. 1974ರಲ್ಲಿ ಇದೇ ಪ್ರಮಾಣದಲ್ಲಿ ನೆರೆನೀರು ಬಂದಿತ್ತು. ಜನತೆ ಆತಂಕಗೊಂಡಿದ್ದು, ಜಿಲ್ಲಾಡಳಿತ ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ದೇವಾಲಯದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಆಗ್ರಹಿಸಿದರು.
Related Articles
Advertisement
ದ್ವೀಪದಂತಾದ ವೀರಮಂಗಲ, ಜನರ ಸ್ಥಳಾಂತರಕುಮಾರಧಾರಾ ನದಿಯ ನೀರಿನ ಮಟ್ಟ ಏರಿಕೆಯಾಗುತ್ತಲೇ ಇದ್ದು, ವೀರಮಂಗಲದ ಹಲವು ಮನೆಗಳು ಮುಳುಗಡೆಯ ಭೀತಿ ಎದುರಿಸುತ್ತಿವೆ. ಸುಳಿಮೇಲು ಎಂಬಲ್ಲಿ ನಾಲ್ಕು ಮನೆಗಳು ದ್ವೀಪದಂತಾಗಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಸುಳಿಮೇಲಿನ ಕೂಸಪ್ಪ ಗೌಡ, ಮೋನಪ್ಪ ಗೌಡ, ಅಚ್ಯುತ ಗೌಡ ಹಾಗೂ ಖಾಸೀಂ ಬ್ಯಾರಿ ಅವರ ಮನೆಗಳು ನೆರೆ ನೀರಿನಿಂದ ಆವೃತವಾಗಿವೆ. ಅಗ್ನಿಶಾಮಕ ದಳದವರು ನೆರೆ ಭೀತಿಗೆ ತುತ್ತಾದವರನ್ನು ಸುರಕ್ಷಿತ ಸ್ಥಳಕ್ಕೆ ಕರೆ ತಂದರು. ಪುತ್ತೂರು ತಹಶೀಲ್ದಾರ್ ಅನಂತಶಂಕರ ಹಾಗೂ ಪೊಲೀಸರು ಸ್ಥಳದಲ್ಲಿದ್ದು, ಮಾರ್ಗದರ್ಶನ ನೀಡಿದರು. ಅಡಿಕೆ ತೋಟದ ನಡುವೆ ಬೋಟ್ ತರಲು ಹರಸಾಹಸ ಮಾಡಬೇಕಾಯಿತು. ಇದಲ್ಲದೆ ಕೊಯಕ್ಕುಡೆ ಬಾಬು ಗೌಡ, ಮಾರಪ್ಪ ಗೌಡ, ಬೆಳಿಯಪ್ಪ ಗೌಡ, ಗಂಡಿ ಮನೆ ಶೇಷಪ್ಪ ಗೌಡರ ಮನೆಗಳೂ ನೆರೆ ಹಾವಳಿಗೆ ತುತ್ತಾಗಿವೆ.