ಕಳೆದ 40 ವರ್ಷಗಳಲ್ಲೇ ಭೀಕರವಾದ ಜುಲೈ ಮಳೆಯು ವಾಣಿಜ್ಯ ನಗರಿಯನ್ನು ಆಘಾತಕ್ಕೆ ತಳ್ಳಿದೆ. ಶುಕ್ರವಾರ ಪಶ್ಚಿಮ ಮಹಾರಾಷ್ಟ್ರ ಮತ್ತು ಕೊಂಕಣ ಕರಾವಳಿ ಪ್ರದೇಶಗಳಲ್ಲಿ ಸಂಭವಿಸಿದ ಸರಣಿ ಭೂಕುಸಿತ ಪ್ರಕರಣಗಳು ಹಾಗೂ ಮಳೆ ಸಂಬಂಧಿ ಘಟನೆಗಳು ಕೇವಲ 48 ಗಂಟೆಗಳಲ್ಲಿ ಕನಿಷ್ಠ 136 ಜನರು ಸಾವಿಗೀಡಾಗಿದ್ದಾರೆ. ಭೂಕುಸಿತದಿಂದಾಗಿ 24ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಏರಿಕೆಯಾಗುವ ಭೀತಿಯಿದೆ.
Advertisement
ರಾಯಗಢ ಜಿಲ್ಲೆಯ ಮಹಾಡ್ ತೆಹ್ಸಿಲ್ ನಲ್ಲಿ ಗುರುವಾರ ರಾತ್ರಿ ಸಂಭವಿಸಿದ ಭೂಕುಸಿತದಿಂದಾಗಿ 38 ಮಂದಿ ಅಸುನೀಗಿದ್ದಾರೆ. ಇದಲ್ಲದೇ ಸತಾರಾ ಜಿಲ್ಲೆಯ ಮಿರ್ ಗಾಂವ್, ಪಟಾನ್‌ನ ಅಂಬೇಗರ್ ನಲ್ಲೂ ಭೂಕುಸಿತ ಉಂಟಾಗಿದೆ. ಇನ್ನು ಮನೆ ಕುಸಿತ, ಪ್ರವಾಹದಲ್ಲಿ ಕೊಚ್ಚಿ ಹೋಗಿ ಹಲವರು ಸಾವಿಗೀಡಾದ ಘಟನೆಗಳೂ ವರದಿಯಾಗಿವೆ ಎಂದು ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರ ಹೇಳಿದೆ. ಅತೀದೊಡ್ಡ ರಕ್ಷಣ ಕಾರ್ಯಾಚರಣೆ ಎಂಬಂತೆ ಮಹಾರಾಷ್ಟ್ರಕ್ಕೆ ಧಾವಿಸಿರುವ ಸೇನೆ, ನೌಕಾಪಡೆ, ವಾಯುಪಡೆ, ಕರಾವಳಿ ರಕ್ಷಕ ಪಡೆ, ಎನ್‌ಡಿಆರ್ ಎಫ್, ಮಹಾರಾಷ್ಟ್ರ ಸರಕಾರದ ಸಂಸ್ಥೆಗಳು ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿವೆ.
ಮಳೆಯಿಂದಾಗಿ ರಸ್ತೆ, ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಿದೆ. ಮುಂಬಯಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರ ಸ್ಥಗಿತಗೊಂಡಿದೆ. ಬೆಳಗಾವಿಯಲ್ಲಿ ರಸ್ತೆಗಳು ಜಲಾವೃತಗೊಂಡ ಕಾರಣ, ಸುರಕ್ಷತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳನ್ನು ಕೊಲ್ಹಾಪುರ ಪೊಲೀಸರು ತಡೆದಿದ್ದಾರೆ. ಶಾ- ಉದ್ಧವ್ ಮಾತುಕತೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಮಳೆ, ಪ್ರವಾಹ, ಭೂಕುಸಿತದ ಪರಿಸ್ಥಿತಿ ಕುರಿತು ಮಾಹಿತಿ ಪಡೆದಿದ್ದು, ಸರಕಾರಕ್ಕೆ ಎಲ್ಲ ರೀತಿಯ ನೆರವು ನೀಡುವುದಾಗಿ ಶಾ ಘೋಷಿಸಿದ್ದಾರೆ.
Related Articles
ರತ್ನಗಿರಿಯ ಚಿಪುನ್ ನಗರದ ಶೇ.50ರಷ್ಟು ಭಾಗ ಸಂಪೂರ್ಣ ಜಲಾವೃತವಾಗಿದೆ. ಇಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ಯುವತಿಯೊಬ್ಬಳನ್ನು ರಕ್ಷಿಸಲು ನಡೆಸಿದ ಯತ್ನ ವಿಫಲವಾಗಿದೆ. ಹಗ್ಗವೊಂದರ ಸಹಾಯದಿಂದ ಯುವತಿಯನ್ನು ಸ್ಥಳೀಯರು ಕಟ್ಟಡದ ಮೇಲಕ್ಕೆತ್ತುತ್ತಿದ್ದರು. ಇನ್ನೇನು ಆಕೆ ಮೇಲೆ ಬಂದುಬಿಟ್ಟಳು ಎನ್ನುವಷ್ಟರಲ್ಲಿ ಹಗ್ಗವು ಸಡಿಲಗೊಂಡು ಆಕೆ ಕೆಳಕ್ಕೆ ಬಿದ್ದಿದ್ದಾಳೆ. 11 ಸೆಕೆಂಡ್‌ಗಳ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
Advertisement
ಸದ್ಯಕ್ಕಿಲ್ಲ ಮಳೆಯಿಂದ ಮುಕ್ತಿ
ವರುಣನ ಅಬ್ಬರ ಸದ್ಯಕ್ಕಂತೂ ಕಡಿಮೆಯಾಗುವ ಲಕ್ಷಣಗಳು ಗೋಚರಿಸುತ್ತಿಲ್ಲ. ಇನ್ನೂ ಕೆಲವು ದಿನಗಳ ಕಾಲ ದೇಶದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಪಶ್ಚಿಮ ಕರಾವಳಿ, ಪೂರ್ವ, ದಕ್ಷಿಣ, ಕೇಂದ್ರ ಮತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಜು.26ರವರೆಗೂ ಧಾರಾಕಾರ ಮಳೆಯಾಗಲಿದೆ. 25 ಮತ್ತು 26ರಂದು ಹಿಮಾಚಲಪ್ರದೇಶ ಮತ್ತು ಉತ್ತರಾಖಂಡದ ಹಲವು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಲಿದೆ ಎಂದೂ ಹೇಳಿದೆ.
ತೆಲಂಗಾಣದಲ್ಲಿ ರಕ್ಷಣ ಕಾರ್ಯತೆಲಂಗಾಣದಲ್ಲಿ ಗೋದಾವರಿ ನದಿಯ ಪ್ರವಾಹದಿಂದ ಹಲವು ಪ್ರದೇಶಗಳು ಜಲಾವೃತವಾಗಿವೆ. ಸವೇಲ್ ಗ್ರಾಮದ ಧಾರ್ಮಿಕ ಆಶ್ರಮದಲ್ಲಿ ಸಿಲುಕಿದ್ದ 7 ಮಂದಿಯನ್ನು ಎನ್‌ಡಿಆರ್‌ಎಫ್ ರಕ್ಷಿಸಿದೆ. ಮುಲ್ಲವಗು ಕೆರೆಯಲ್ಲಿ 14 ಮೀನುಗಾರರನ್ನು ರಕ್ಷಿಸಲಾಗಿದೆ. ಗೌತಮೇಶ್ವರ ದೇವಾಲಯದಲ್ಲಿ ಅತಂತ್ರರಾಗಿದ್ದ 32 ಮಂದಿಯನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಗೋವಾದ ಹಲವು ಭಾಗಗಳಲ್ಲೂ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಒಬ್ಬ ವ್ಯಕ್ತಿ ಮೃತಪಟ್ಟು, ಸಾವಿರಕ್ಕೂ ಅಧಿಕ ಮನೆಗಳಿಗೆ ಹಾನಿಯಾಗಿದೆ.