ಧಾರವಾಡ: ಜುಲೈನಲ್ಲಿ ಸುರಿದ ಮಳೆಗೆ ಜಿಲ್ಲೆಯಲ್ಲಿನ ಸೋಯಾ ಗಯಾ ಮಾಡ್ತು…ಆಗಸ್ಟ್‌ನಲ್ಲಿ ಸುರಿದ ಮಳೆಗೆ ಜಿಲ್ಲೆಯ ಜೋವಿನಜೋಳ ಝಳ ಝಳ ಆಯ್ತು. ಸೆಪ್ಟೆಂಬರ್‌ನಲ್ಲಿ ಸುರಿದ ಹುಬ್ಬಿ ಮಳೆ ರೈತರನ್ನು ಗುಬ್ಬಿಯಂತಾಗಿಸಿತ್ತು. ಇದೀಗ ಅಕ್ಟೋಬರ್‌ನಲ್ಲಿ ಸತತ ನಾಲ್ಕು ದಿನದಿಂದ ಸುರಿಯುತ್ತಿರುವ ಮಳೆಗೆ ಭತ್ತ, ಕಬ್ಬು ಮಕಾಡೆ ಮಲಗಿದೆ.
ಹೊಲಕ್ಕೆ ಹೊಲಗಳೇ ತೇಲಿ ಹೋಗಿದ್ದ ನೋವನ್ನು ಹೇಗೋ ಮರೆತ ರೈತರು ಸುಧಾರಿಸಿಕೊಳ್ಳುವಷ್ಟೊತ್ತಿಗೆ, ಇದೀಗ ಕಬ್ಬು ಮತ್ತು ಭತ್ತ ಬಿತ್ತನೆ ಮಾಡಿದ್ದ ರೈತರನ್ನು ಮಳೆರಾಯ ಬೆನ್ನಿಗೆ ಬಿದ್ದು ಬೇತಾಳನಂತೆ ಕಾಡುತ್ತಿದ್ದಾನೆ. ಹಾಗೂ ಹೀಗೂ ಕಷ್ಟಪಟ್ಟು ಕೈಯಿಂದ ಬಾಯಲ್ಲಿ ಹಾಕಿದ್ದ ರೈತರ ಅಳಿದುಳಿದ ಬೆಳೆಯ ತುತ್ತು ಇದೀಗ ಬಾಯಲ್ಲಿದ್ದರೂ ನುಂಗದಂತೆ ಮಾಡಿಟ್ಟಿದೆ ಮಳೆ. ಬೀಜ ಮೊಳಕೆಯೊಡೆದು ತೆನೆಕಟ್ಟುವ ಹಂತದಲ್ಲಿದ್ದಾಗ ಹುಬ್ಬಿ ಮಳೆ ರೈತರ ಮೇಲೆ ಪ್ರಯೋಗಿಸಿದ ಬ್ರಹ್ಮಾಸ್ತ್ರಕ್ಕೆ ರೈತರು ಗುಬ್ಬಿಯಾಗಿ ಹೋಗಿದ್ದಾರೆ. ಅಳಿದುಳಿದ ಕಾಳು ಕಡಿಗಳನ್ನು ಒಕ್ಕಲು ಮಾಡಲು ಬಿಡದೇ ಹಿಂಗಾರಿ ಬಿತ್ತನೆಗೆ ಹದವನ್ನೂ ನೀಡದಂತೆ ಕಾಡುತ್ತಿರುವ ಮಳೆಯ ಹೊಡೆತಕ್ಕೆ ಜಿಲ್ಲೆಯ ಅನ್ನದಾತ ಅಕ್ಷರಶಃ ನಲುಗಿ ಹೋಗಿದ್ದಾನೆ.
ಜಿಲ್ಲೆಯಲ್ಲಿ ಬಿತ್ತನೆಯಾಗಿರುವ ದೇಶಿ ಭತ್ತ ಈ ವರ್ಷ ಉತ್ತಮ ಮಳೆಯಿಂದ ಎದೆ ಎತ್ತರಕ್ಕೆ ಬೆಳೆದು ನಿಂತು ಚೆನ್ನಾಗಿ ತೆನೆಕೂಡ (ಹೊಡಿ) ಹಿಡಿದು ನಿಂತಿತ್ತು ನಿಜ. ಆದರೆ ಕಳೆದ ಮೂರು ದಿನಗಳಿಂದ ಸುರಿದ ವರ್ಷಧಾರೆಗೆ ಭತ್ತ ಮಕಾಡೆ ಮಲಗಿದ್ದು ಇನ್ನೇನು ರೈತರ ಕೈಯಲ್ಲಿನ ತುತ್ತು ಬಾಯಿಗೆ ಬಂದೇ ಬಿಟು ಎನ್ನುವ ಹಂತದಲ್ಲೇ ಮರ್ಮಾಘಾತ ನೀಡಿದ್ದು, ರೈತರೆಲ್ಲ ತಮ್ಮ ಹೊಲದಲ್ಲಿನ ಭತ್ತ-ಕಬ್ಬಿನ ಬೆಳೆ ತೆಗೆದುಕೊಳ್ಳುವುದಾದರೂ ಹೇಗೆ?ಎಂಬ ಚಿಂತೆಯಲ್ಲಿದ್ದಾರೆ.
ಭತ್ತ ಮುಗ್ಗಿತು: ಸತತ ಮಳೆಯಿಂದ ಜಿಲ್ಲೆಯ ಧಾರವಾಡ ಮತ್ತು ಕಲಘಟಗಿ ತಾಲೂಕಿನಲ್ಲಿ ಬಿತ್ತನೆ ಮಾಡುವ ದೇಶಿ ಭತ್ತ ಈ ವರ್ಷದ ಮಳೆಗೆ ಚೆನ್ನಾಗಿ ಬೆಳೆದು ನಿಂತಿದೆ. 36 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿರುವ ದೇಶಿ ಭತ್ತ ದೀಪಾವಳಿ ನಂತರ ಕೊಯ್ಲಿಗೆ ಬರುತ್ತದೆ. ಪ್ರತಿ ಎಕರೆಗೆ ಈ ಬಾರಿ 20 ಕ್ವಿಂಟಲ್ ಇಳುವಳಿ ಬರಬಹುದೆಂದು ರೈತರು ಅಂದಾಜು ಮಾಡಿಕೊಂಡಿದ್ದರು. ಆದರೆ ಸತತ ರಭಸದ ಮಳೆಗೆ ಭತ್ತ ನೆಲಕ್ಕುರುಳಿ ಬೀಳುತ್ತಿದ್ದು ರೈತರು ಕಂಗೆಟ್ಟಿದ್ದಾರೆ. ಒಣಗಿ ನೆಲಕ್ಕೆ ಬಿದ್ದ ಭತ್ತದ ಬೆಳೆಗೆ ಮಳೆಯಿಂದ ಬಿದ್ದ ನೀರು ಹೊಕ್ಕರೆ ಭತ್ತದ ಕಾಳುಗಳು ಮುಗ್ಗುತ್ತವೆ ಅರ್ಥಾರ್ಥ ಅರ್ಧಂಬರ್ಧ ಕೊಳೆತ ಸ್ಥಿತಿ ತಲುಪುತ್ತವೆ. ಮಾರುಕಟ್ಟೆಯಲ್ಲಿ ಈ ಭತ್ತವನ್ನು ಯಾರೂ ಕೊಳ್ಳುವುದಿಲ್ಲ. ಇನ್ನು ಜಾನುವಾರುಗಳಿಗೆ ಈ ಭತ್ತದ ಹುಲ್ಲು ಉತ್ತಮ ಮೇವು. ಮಳೆಯಲ್ಲಿ ಬಿದ್ದ ಭತ್ತದ ಹುಲ್ಲು ಕೊಳೆಯುವುದರಿಂದ ಈ ಮೇವನ್ನು ಜಾನುವಾರುಗಳು ಕೂಡ ತಿನ್ನಲ್ಲ.
ಕಬ್ಬು ಕಡಿಯಲಾಗುತ್ತಿಲ್ಲ: ಇನ್ನು ಧಾರವಾಡ ಜಿಲ್ಲೆಯ ಧಾರವಾಡ ಮತ್ತು ಕಲಘಟಗಿ ತಾಲೂಕಿನಲ್ಲಿ 80 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆದು ನಿಂತಿರುವ ಲಕ್ಷ ಲಕ್ಷ ಟನ್ ಕಬ್ಬು ದಸರಾ-ದೀಪಾವಳಿ ಹಬ್ಬದಿಂದಲೇ ಕಟಾವಿಗೆ ಬರುತ್ತದೆ. ಆದರೆ ಈ ವರ್ಷ ಸುರಿಯುತ್ತಿರುವ ಮಳೆಯಿಂದ ಕಬ್ಬನ್ನೂ ಕೂಡ ಕಟಾವು ಮಾಡಲಾಗುತ್ತಿಲ್ಲ. ಕಬ್ಬಿನ ಗದ್ದೆಗಳಲ್ಲಿ ನೀರು ತುಂಬಿಕೊಳ್ಳುತ್ತಿದ್ದು, ಕಟಾವಿಗೆ ಅನುಕೂಲವೇ ಇಲ್ಲ. ಇನ್ನೊಂದೆಡೆ ಮುಂಗಡ ಹಣ ಕೊಟ್ಟಿದ್ದರಿಂದ ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ ಬರುವ ಕೂಲಿ ತಂಡಗಳು ಕುಟುಂಬ ಸಮೇತ ಮೊಕ್ಕಾಂ ಹೂಡುತ್ತಿವೆ. ಆದರೆ ಕಬ್ಬು ಕಡಿಯಲು ಮಳೆರಾಯ ಬಿಡುತ್ತಿಲ್ಲ. ಅವರ ಖರ್ಚುವೆಚ್ಚ ರೈತರೇ ಭರಿಸುತ್ತಿದ್ದಾರೆ. ಹರಸಾಹಸ ಪಟ್ಟು ಕಬ್ಬು ಕಡೆದರೂ ಅದನ್ನು ಸಾಗಿಸಲು ಕಷ್ಟವಾಗುತ್ತಿದೆ. ಕಬ್ಬು ಸಾಗಾಣಿಕೆ ಮಾಡಲು ಟ್ರಾಕ್ಟರ್ ಅಥವಾ ಲಾರಿಗಳು ರೈತರ ಹೊಲಗಳಲ್ಲಿ ಹೋಗಲು ಆಗದಷ್ಟು ಮಳೆಯಿಂದ ಭೂಮಿ ಹಸಿಯಾಗಿದ್ದು, ಕೆಲವು ಕಡೆ ರಸ್ತೆಗಳು ಕೊಚ್ಚಿಕೊಂಡು ಹೋಗಿವೆ. ಹೀಗಾಗಿ ಈ ವರ್ಷ ಕಬ್ಬು ಬೆಳೆಗಾರರನ್ನು ನೆಮ್ಮದಿಯಿಂದ ಇರದಂತೆ ಮಾಡಿಟ್ಟಿವೆ ಹಿಂಗಾರಿ ಮಳೆಗಳು.
ಬೆಳವಲದವರ ಹಿಂಗಾರಿಗೆ ಕೊಕ್ಕೆ: ಧಾರವಾಡ ತಾಲೂಕಿನ ಪೂರ್ವಭಾಗ, ಕುಂದಗೋಳ, ನವಲಗುಂದ ಮತ್ತು ಹುಬ್ಬಳ್ಳಿ ತಾಲೂಕಿನ ಹಳ್ಳಿಗಳಲ್ಲಿನ ಬೆಳವಲದ ಭೂಮಿಯಲ್ಲಿ ತಡವಾಗಿಯಾಗಿದರೂ ನಾಲ್ಕು ಕಾಳು ಬಿತ್ತನೆಯಾಗಿದ್ದ ಶೇಂಗಾ ಬೆಳೆ ತೆಗೆಯಲು ಮಳೆ ಬಿಡುತ್ತಿಲ್ಲ. ಅಷ್ಟೇಯಲ್ಲ ಈ ಎಲ್ಲಾ ತಾಲೂಕಿನಲ್ಲಿ ಮುಂಗಾರು ಮಳೆ ಏರುಪೇರಾಗಿದ್ದರಿಂದ ಬಿತ್ತನೆಯಾಗದೇ ರೈತರು ಕಷ್ಟ ಅನುಭವಿಸಿದ್ದರು. ಇದೀಗ ಹಿಂಗಾರಿ ಬಿತ್ತನೆ ಸಮಯ. ಗೋಧಿ, ಕಡಲೆ, ಹವಾದ ಜೋಳ, ಕುಸುಬಿಯನ್ನು ಬಿತ್ತನೆ ಮಾಡುವ ಸಮಯವಿದು. ಇಂತಹ ಸಂದರ್ಭದಲ್ಲೇ ಮಳೆ ಸುರಿದು ಪ್ರವಾಹ ಸೃಷ್ಟಿಸಿದ್ದರಿಂದ ಕರಿಭೂಮಿಯಲ್ಲಿ ವಿಪರೀತ ಹಸಿ ಹೆಚ್ಚಾಗಿ ಹೊಲದಲ್ಲಿ ಇನ್ನೂ 15 ದಿನಗಳ ಕಾಲ ಬಿತ್ತನೆಗೆ ಹದವೇ ಇಲ್ಲದಂತಾಗಿದೆ. ಮಳೆ ಹೀಗೆ ಮುಂದುವರಿದರೆ ಹಿಂಗಾರಿಗೂ ಕೊಕ್ಕೆ ಬೀಳಲಿದೆ.
-ಬಸವರಾಜ್ ಹೊಂಗಲ್