ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಲ್ಪ ವಿರಾಮ ನೀಡಿದ ಪುನರ್ವಸು ಮಳೆ ಮತ್ತೆ ತನ್ನ ಆರ್ಭಟವನ್ನು ಮುಂದುವರಿಸಿದೆ. ಭದ್ರಾ ನದಿ ನೀರಿನ ಮಟ್ಟ ಏರಿಕೆಯಾಗಿದ್ದು ಮುಳುಗು ಸೇತುವೆ ಎಂದು ಖ್ಯಾತಿ ಪಡೆದಿರುವ ಹೆಬ್ಬಾಳೆ ಸೇತುವೆ ಭದ್ರಾ ನದಿ ನೀರಿನಲ್ಲಿ ಎರಡನೇ ಬಾರಿ ಮುಳುಗಿದೆ.
ಸೇತುವೆ ಮುಳುಗಿರುವ ಪರಿಣಾಮ ಕಳಸ-ಹೊರನಾಡು ಸಂಪರ್ಕ ಮತ್ತೊಮ್ಮೆ ಕಡಿತ ಗೊಂಡಿದೆ. ಕಳಸ ಹೊರನಾಡು ಸೇರಿ ಹತ್ತಾರು ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಕುದುರೆಮುಖ ಘಟ್ಟ ಪ್ರದೇಶದಲ್ಲಿ ಬಾರೀ ಮಳೆಯಾದ ಹಿನ್ನಲೆ ಭದ್ರಾನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಕೊಪ್ಪ ಭಾಗದಲ್ಲಿ ಮಳೆಯಾಗುತ್ತಿದ್ದು, ಗುಡ್ಡೇತೋಟ ಸಮೀಪದ ಶಾಂತಿ ಗ್ರಾಮದಲ್ಲಿ ಮನೆಯೊಂದು ನೋಡನೋಡುತ್ತಿದ್ದಂತೆ ಉರುಳಿ ಬಿದ್ದಿದೆ. ಮನೆ ಬೀಳುವ ದೃಶ್ಯ ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದೆ. ಮನೆಯಲ್ಲಿ ಯಾರು ಇಲ್ಲದ ಹಿನ್ನೆಲೆ ಅನಾಹುತ ತಪ್ಪಿದೆ. ಶೃಂಗೇರಿ ತಾಲೂಕಿನ ನೆಮ್ಮಾರ್ ಎಸ್ಟೇಟ್ ಬಳಿ ರಾಷ್ತ್ರೀಯ ಹೆದ್ದಾರಿ ಬಿರುಕು ಬಿಟ್ಟಿದೆ. ಶೃಂಗೇರಿ ಕಾರ್ಕಳ ಸಂಪರ್ಕಿಸುವ ಹೆದ್ದಾರಿ ಇದಾಗಿದ್ದು, ತುಂಗಾನದಿ ಸಮೀಪದಲ್ಲೇ ರಸ್ತೆ ಬಿರುಕು ಕಾಣಿಸಿಕೊಂಡಿದ್ದು ವಾಹನ ಸವಾರರು ಆತಂಕದಲ್ಲಿ ಚಲಿಸುವಂತಾಗಿದೆ. ಕಳಪೆ ಕಾಮಗಾರಿಯಿಂದ ರಸ್ತೆ ಬಿರುಕು ಬಿಟ್ಟಿದೆ ಎಂದು ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ.
ಮಳೆ ಅಬ್ಬರಿಸುತ್ತಿದ್ದು ಮೀನು ಬೇಟೆಯೂ ಜೋರಾಗಿ ನಡೆಯುತ್ತಿದೆ. ಭದ್ರಾ ಹಿನ್ನೀರಿನಲ್ಲಿ ಭಾರೀ ಗಾತ್ರದ ಮೀನುಗಳು ಕಾಣಿಸಿಕೊಳ್ಳುತ್ತಿದ್ದು ನರಸಿಂಹರಾಜಪುರ ಮೀನು ಮಾರುಕಟ್ಟೆಯಲ್ಲಿ ಮೀನು ಕೊಂಡುಕೊಳ್ಳಲು ಜನರು ಮುಗಿಬಿದ್ದಿದ್ದಾರೆ.
ಶೃಂಗೇರಿ ತಾಲೂಕು ವ್ಯಾಪ್ತಿಯಲ್ಲಿ ತುಂಗಾನದಿ ನೆರೆ ಬಂದಿದ್ದು, ನದಿಪಾತ್ರದ ತೋಟಗಳಿಗೆ ನದಿನೀರು ನುಗ್ಗಿದೆ. ನದಿಯ ಪ್ರವಾಹ ಕಡಿಮೆಯಾಗುವಂತೆ ಸ್ಥಳೀಯರು ನದಿಗೆ ಪೂಜೆ ಸಲ್ಲಿದ್ದಾರೆ.
ಮಲೆನಾಡಿನಲ್ಲಿ ಹರಿಯುವ ಸಣ್ಣ ಸಣ್ಣ ಹಳ್ಳಗಳು ಜಲಪಾತದಂತೆ ಭೋರ್ಗರೆಯುತ್ತಿವೆ. ಮೂಡಿಗೆರೆ ತಾಲೂಕಿನ ಹಬ್ಬಿಹಳ್ಳ ಜಲಪಾತದ ರೂಪ ಪಡೆದುಕೊಂಡು ಹಾಲ್ನೋರೆಯಂತೆ ಧುಮ್ಮಿಕ್ಕುತ್ತಿದೆ.
ಗುರುವಾರ ರಾತ್ರಿಯಿಂದ ಬಿಡುವು ನೀಡಿದ್ದ ವರುಣ ಚಿಕ್ಕಮಗಳೂರು ಸುತ್ತಮುತ್ತ ಮತ್ತೆ ಆರ್ಭಟಿಸಲು ಶುರುಮಾಡಿದ್ದಾನೆ. ಕಡೂರು, ತರೀಕೆರೆ, ಅಜ್ಜಂಪುರ ಭಾಗದಲ್ಲೂ ಮಳೆಯಾಗುತ್ತಿದೆ. ಒಟ್ಟಾರೆ ಆರ್ಭಟಿಸುತ್ತಿರುವ ಮಳೆಗೆ ಜಿಲ್ಲೆಯ ಜನರು ಸುಸ್ತಾಗಿದ್ದಾರೆ.