Advertisement
ಮೇ 24ರಂದು ನಿಮ್ನ ಒತ್ತಡ ನಿರ್ಮಾಣಗೊಂಡು ತೀವ್ರತೆ ಪಡೆದಿದೆ. ಮೇ 25ರಂದು ಚಂಡ ಮಾರುತವಾಗಿ ಪರಿವರ್ತನೆಯಾಗಲಿದ್ದು, ಮೇ 26ರಂದು ಮತ್ತಷ್ಟು ತೀವ್ರತೆ ಪಡೆಯಲಿದೆ. ಮೇ ಅಂತ್ಯದವರೆಗೆ ಇದರ ಪ್ರಭಾವ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಈ ವೇಳೆ 45ರಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ.
ದ.ಕ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಮಂಗಳೂರು ಸಹಿತ, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿಯಲ್ಲಿ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಮೂಲ್ಕಿ, ಸುರತ್ಕಲ್ ಪರಿಸರದಲ್ಲಿ ಒಂದು ಗಂಟೆಗೂ ಹೆಚ್ಚು ಸಮಯ ಮಳೆಯಾಗಿದೆ. ಮುಕ್ಕ: ಮನೆಗಳು ಜಲಾವೃತ
ರಾತ್ರಿ ವೇಳೆ ಭಾರೀ ಮಳೆ ಸುರಿದ ಪರಿಣಾಮ ಮುಕ್ಕದ ಮಿತ್ರಪಟ್ಣದಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿದೆ. ತೋಡು ಮುಚ್ಚಿ ಹೋದ ಕಾರಣ ಇಲ್ಲಿ ದಿಢೀರ್ ನೀರು ಏರಿಕೆಯಾಯಿತು.
Related Articles
ಮಂಗಳೂರಿನಲ್ಲಿ ತಾಪಮಾನದಲ್ಲಿ ಅಲ್ಪ ಇಳಿಕೆಯಾಗಿದೆ. ಶುಕ್ರವಾರ 30 ಡಿ.ಸೆ. ಗರಿಷ್ಠ ತಾಪಮಾನ ದಾಖಲಾಗಿ ವಾಡಿಕೆಗಿಂತ 3.3 ಡಿ.ಸೆ. ಮತ್ತು 24.4 ಡಿ.ಸೆ. ಕನಿಷ್ಠ ತಾಪಮಾನ ದಾಖಲಾಗಿದೆ.
Advertisement
ಚೆಂಬು: ಅತ್ಯಾಡಿಯಲ್ಲಿ ಮರಬಿದ್ದು ರಸ್ತೆ ತಡೆಅರಂತೋಡು: ಚೆಂಬು ಗ್ರಾಮದ ಅತ್ಯಾಡಿಯಲ್ಲಿ ಭಾರೀ ಗಾತ್ರದ ಮರ ರಸ್ತೆಗೆ ಅಡ್ಡಲಾಗಿ ಬಿದ್ದ ಪರಿಣಾಮ ಸಂಚಾರಕ್ಕೆ ತಡೆ ಉಂಟಾಯಿತಲ್ಲದೇ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಯಿತು. ಆಬಳಿಕ ಸ್ಥಳೀಯರು ಸೇರಿ ಮರವನ್ನು ತೆರವು ಗೊಳಿಸಿದರು. ಈ ಸಂದರ್ಭ ರಸ್ತೆಯ ಎರಡೂ ಕಡೆ ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಮೂರು ದಿನ ಎಲ್ಲೋ ಅಲರ್ಟ್
ಹವಾಮಾನ ಇಲಾಖೆ ಮುನ್ಸೂಚನೆಯ ಪ್ರಕಾರ ಮೇ 25ರಿಂದ 27ರ ವರೆಗೆ ಕರಾವಳಿ ಭಾಗದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಗುಡುಗು-ಮಿಂಚು ಸಹಿತ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ಉಡುಪಿ ಜಿಲ್ಲೆಯಲ್ಲಿಯೂ ಉತ್ತಮ ಮಳೆ
ಉಡುಪಿ ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ ವೇಳೆಗೆ ಉತ್ತಮ ಮಳೆ ಸುರಿದಿದೆ. ಹಗಲಿನಲ್ಲಿ ವಿವಿಧೆಡೆ ಸಾಧಾರಣ ಮಳೆಯಾಗಿತ್ತು. ಉಡುಪಿ, ಮಣಿಪಾಲ, ಕಾಪು, ಉಚ್ಚಿಲ, ಪಡುಬಿದ್ರಿ ಪರಿಸರದಲ್ಲಿ ರಾತ್ರಿ ವೇಳೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಗುರುವಾರ ತಡರಾತ್ರಿಯಿಂದ ಸುರಿದ ಮಳೆಗೆ ಒಟ್ಟು 9,42,000 ರೂ.ಮೌಲ್ಯದ ಆಸ್ತಿ ನಷ್ಟ ಉಂಟಾಗಿದೆ ಎಂದು ಕಂದಾಯ ಅಧಿಕಾರಿಗಳು ತಿಳಿಸಿದ್ದಾರೆ. ಕುಂದಾಪುರ ಮತ್ತು ಕಾರ್ಕಳ ತಾಲೂಕಿನಲ್ಲಿ ಕೂಡ ಸಾಧಾರಣ ಮಳೆಯಾಗಿದೆ. ಬಜೆ ಅಣೆಕಟ್ಟು ಪರಿಸರದಲ್ಲಿ ಸಾಧಾರಣ ಮಳೆಯಾಗಿದ್ದು, ಇನ್ನು ಒಂದೆರಡು ದಿನಗಳಲ್ಲಿ ನೀರು ಹರಿದು ಬರುವ ನಿರೀಕ್ಷೆ ಇದೆ. ನೀರು ತುಂಬಿದ ಕೂಡಲೇ ಉಡುಪಿ ನಗರದ ನೀರಿನ ರೇಶನಿಂಗ್ ಸ್ಥಗಿತವಾಗಲಿದೆ. ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಕುಂದಾಪುರದಲ್ಲಿ 11 ಮನೆಗಳಿಗೆ ಭಾಗಶಃ ಹಾನಿ ಯಾಗಿದ್ದು, 2 ಕೊಟ್ಟಿಗೆಗಳಿಗೆ ಹಾನಿಯಾಗಿವೆ. ಬ್ರಹ್ಮಾವರದಲ್ಲಿ ಎರಡು ಮನೆಗಳು ಹಾನಿಯಾಗಿವೆ. ಬೈಂದೂರು ತಾ|: ಗಾಳಿ-ಮಳೆ; ಭಾರೀ ಹಾನಿ
ಬೈಂದೂರು: ಬೈಂದೂರು ತಾಲೂಕಿನ ವಿವಿಧೆಡೆ ಗುರುವಾರ ಸಂಜೆ ಮತ್ತು ರಾತ್ರಿ ಸುರಿದ ಧಾರಾಕಾರ ಮಳೆ ಮತ್ತು ಗಾಳಿಯಿಂದ ಭಾರೀ ಹಾನಿ ಸಂಭವಿಸಿದೆ. ಬೈಂದೂರು ಮೆಸ್ಕಾಂ ಸ್ಟೇಷನ್ ಟ್ರಾನ್ಸ್ ಫಾರ್ಮರ್ ಮೇಲೆ ಮರಬಿದ್ದು 50 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ. ಇದರಿಂದಾಗಿ ವಿದ್ಯುತ್ ಸರಬರಾಜು ಸ್ಥಗಿತಗೊಂಡಿದ್ದು, ಶುಕ್ರವಾರ ರಾತ್ರಿಯ ವೇಳೆ ದುರಸ್ತಿಯಾಯಿತು. ತಾಲೂಕಿನಲ್ಲಿ ಹಲವು ಮನೆ, ಕೊಟ್ಟಿಗೆಗಳಿಗೆ ಹಾನಿ ಉಂಟಾಗಿದೆ. ಬೈಂದೂರಿನಲ್ಲಿ ಹಲವು ಮನೆಗಳಿಗೆ ಸಿಡಿಲು ಹಾಗೂ ಗಾಳಿಯಿಂದ ಮರಬಿದ್ದು ಹಾನಿಯಾಗಿವೆ. ಗಾಳಿಯ ರಭಸಕ್ಕೆ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿದೆ. ವಿದ್ಯುತ್ ವ್ಯತ್ಯಯ: ವಿವಿಧೆಡೆ ವಿದ್ಯುತ್ ಕಂಬಗಳು ಮುರಿದು ಬಿದ್ದುದರಿಂದ ಮತ್ತು ಸಬ್ ಸ್ಟೇಶನ್ ಮೇಲೆ ಮರ ಬಿದ್ದು, ಶುಕ್ರವಾರ ಹಗಲಿಡೀ ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಯಿತು. ವಿದ್ಯುತ್ ಇಲ್ಲದೆ ಕೆಲವೆಡೆ ಇಂಟರ್‌ನೆಟ್ ಸೇವೆ ಕೂಡ ಸ್ಥಗಿತಗೊಂಡಿತು.