Advertisement

ಕತ್ತಲಲ್ಲಿ ಮುಳುಗಿದ ನೂರಾರು ಗ್ರಾಮ! 

03:12 PM Jul 24, 2023 | Team Udayavani |

ಸಕಲೇಶಪುರ: ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಸಕಲೇಶಪುರ ತಾಲೂಕಿನ ಯಸಳೂರು ಭಾಗದಲ್ಲಿ ಒಂದೇ ದಿನ 83.8 ಮಿ.ಮೀ. ಮಳೆ ಬಿದ್ದಿರುವ ವರದಿಯಾಗಿದೆ. ತಾಲೂಕಿನ ಗ್ರಾಮೀಣ ಭಾಗದಲ್ಲಿ ಮಳೆಯ ಅಬ್ಬರ ಜೋರಾಗಿದ್ದು ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ತಾಲೂಕಿನ ಬಹುತೇಕ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು, ಮುಂಗಾರು ಮಳೆ ಆರಂಭದ ನಂತರ ಇದೆ ಮೊದಲ ಬಾರಿಗೆ ಬಹುತೇಕ ನದಿಗಳು ತುಂಬಿ ಹರಿಯುತ್ತಿವೆ. ಹೆತ್ತೂರಿನಲ್ಲಿ 62.4 ಮಿ.ಮೀ., ಸಕಲೇಶಪುರ 48 ಮೀ.ಮೀ. ಮಳೆಯಾಗಿದೆ. ಕಳೆದ ನಾಲ್ಕು ದಿನದಿಂದ ವಿದ್ಯುತ್‌ ಇಲ್ಲದೆ ನೂರಾರು ಗ್ರಾಮಗಳು ಕತ್ತಲಲ್ಲಿ ಇವೆ. ಹೆತ್ತೂರು ಹೋಬಳಿಯ ಕಾಗಿನೆರೆ, ಹೊಂಗಡಹಳ್ಳ ಬಿಸಿಲೆ, ಹೆತ್ತೂರು ಕೂಡ ರಸ್ತೆ ಬಾಣಗೇರಿ ಸುತ್ತಮುತ್ತ ಭಾರೀ ಮಳೆಯಿಂದ ನೂರಾರು ವಿದ್ಯುತ್‌ ಕಂಬಗಳು, ಧರೆಗುರುಳಿದ್ದು, ಪಶ್ಚಿಮ ಘಟ್ಟದ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಮೂರು ದಿನಗಳಿಂದ ವಿದ್ಯುತ್‌ ಇಲ್ಲದೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ಉಂಟಾಗಿದೆ.

ಕೆಇಬಿ ಲೈನ್‌ಮ್ಯಾನ್‌ಗಳು ಈ ಪ್ರದೇಶಗಳಿಗೆ ವಿದ್ಯುತ್‌ ಸೇವೆ ನೀಡಲು ಹರ ಸಾಹಸ ಪಡುತ್ತಿದ್ದಾರೆ. ಮಳೆಯ ಜೊತೆ ಭಾರೀ ಗಾಳಿ ಇರುವುದರಿಂದ ಮರಗಳು ದಾರಿ ಉದ್ದಕ್ಕೂ ಬೀಳುತ್ತಿದ್ದು, ವಿದ್ಯುತ್‌ ನೀಡಲು ಸಾಧ್ಯವಾಗುತ್ತಿಲ್ಲ.

ರಸ್ತೆ ಸಂಚಾರ ಅಸ್ತವ್ಯಸ್ತ: ಬಿಸಿಲೆ, ಕುಕ್ಕೆ ಸುಬ್ರಹ್ಮಣ್ಯ ರಸ್ತೆ ಸಂಚಾರ ಅಸ್ತವ್ಯಸ್ತ ಆಗಿದ್ದು, ಶುಕ್ರವಾರ ರಾತ್ರಿ ಸುರಿದ ಭಾರೀ ಮಳೆಗೆ ರಾಜ್ಯ ಹೆದ್ದಾರಿ 87 ಜಾಲಸೂರು ಕೂಡ ರಸ್ತೆ ಕುಕ್ಕೆ ಸುಬ್ರಮಣ್ಯ ರಸ್ತೆಯ ಬಿಸಿಲೆಯ ಅಡ್ಡ ನದಿ ಸಮೀಪ ಭಾರೀ ಗಾತ್ರದ ಮರವೊಂದು ಬಿದ್ದು ಈ ಭಾಗದಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ ಹಾಗೂ ಇತರ ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಬಿಸಿಲೆ ಗ್ರಾಮಸ್ಥರು ಹಾಗೂ ಲೋಕೋ ಪಯೋಗಿ ಇಲಾಖೆ ಸಿಬ್ಬಂದಿ ಭಾರೀ ಮಳೆಯ ನಡುವೆ ರಸ್ತೆಗೆ ಬಿದ್ದಿದ್ದ ಮರಗಳನ್ನು ತೆರವು ಗೊಳಿಸಿ ಸಂಚಾರಕ್ಕೆ ಅನುವು ಮಾಡಿ ಕೊ ಟ್ಟರು. ಹೆತ್ತೂರು ಎ ಬ್ಲಾಕ್‌ನಲ್ಲಿ ಕೆಂಚಯ್ಯ ದೊಡ್ಡಮ್ಮ ಎಂಬು ವರ ಮನೆ ಮಳೆಯಿಂದ ಬಿದ್ದು ಹೋಗಿದೆ.

ಮಳೆಯ ಅಬ್ಬರ: ವೀಕೆಂಡ್‌ ಆಗಿರುವುದರಿಂದ ಸಾವಿರಾರು ಪ್ರವಾಸಿಗರು ಸಕಲೇಶಪುರ ಭಾಗಕ್ಕೆ ಬಂದಿದ್ದು, ಕೆಲವು ಹೋಂಸ್ಟೇ, ರೆಸಾರ್ಟ್‌ಗಳಲ್ಲಿ ತಂಗಿರುವ ಪ್ರವಾಸಿಗರು, ಮಳೆಯ ಅಬ್ಬರಕ್ಕೆ ಪ್ರವಾಸಿ ತಾಣಕ್ಕೆ ಭೇಟಿ ನೀಡದೆ ರೆಸಾರ್ಟ್‌ಗಳಲ್ಲಿ ನೆಲೆಸಿದ್ದಾರೆ. ಒಟ್ಟಾರೆ ಸತತ ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ಭಾಗದಲ್ಲಿ ಜನಜೀವನ ಅಸ್ತವ್ಯಸ್ತವಾಗಿದೆ.

Advertisement

ಮಳೆ ನಡುವೆ ಕಾಡಾನೆಗಳ ಹಾವಳಿ: ಭಾರೀ ಮಳೆ ಮತ್ತು ವಿಪರೀತ ಗಾಳಿಯಿಂದ ಮಲೆನಾಡು ಜನರು ತತ್ತರಿಸುತ್ತಿರುವ ನಡುವೆ ಕಾಡಾನೆಗಳ ಹಾವಳಿಯೂ ಮುಂದುವರಿದಿದ್ದು, ಗ್ರಾಮೀಣರನ್ನು ಆತಂಕಕ್ಕೀಡು ಮಾಡಿದೆ. ಹೊಸಳ್ಳಿ, ಕರಡಿಗಾಲ ಸುತ್ತಮುತ್ತ ಕಾಫಿ ತೋಟದಲ್ಲಿ ಸಂಚರಿಸುತ್ತಿರುವ ಕಾಡಾನೆಗಳ ಹಿಂಡು. ಅಪಾರ ಪ್ರಮಾಣದ ಕಾಫಿ, ಬಾಳೆ, ಅಡಕೆ ಸೇರಿ ವಿವಿಧ ಬೆಳೆಗಳನ್ನು ತುಳಿದು ಹಾಳು ಮಾಡಿವೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿದ್ದು, ಕಾಡಾನೆಗಳನ್ನು ಓಡಿಸಲು ಹರಸಾಹಸ ಪಡುತ್ತಿದ್ದಾರೆ.

ಹೆದ್ದಾರಿ 75ರಲ್ಲಿ ಭೂಕುಸಿತದ ಆತಂಕ:

ಸಕಲೇಶಪುರ: ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿಘಾಟ್‌ ರಸ್ತೆಯಲ್ಲಿ ಅಲ್ಲಲ್ಲಿ ಭೂಕುಸಿತವಾಗುತ್ತಿದೆ. ತಾಲೂಕಿನ ಆನೆಮಹಲ್‌ ಸಮೀಪ ತಡೆಗೋಡೆ ನಿರ್ಮಾಣ ಮಾಡದೆ ರಸ್ತೆ ಅಗಲೀಕರಣ ಕೆಲಸ ಮಾಡುತ್ತಿರುವುದರಿಂದ ಮಣ್ಣು ಕುಸಿಯುತ್ತಿದ್ದು, ಯಾವುದೇ ಸಂದರ್ಭದಲ್ಲಿ ಅನಾಹುತ ಸಂಭವಿಸುವ ಸಾಧ್ಯತೆ ಇದೆ.

ಮಳೆ ಆರ್ಭಟಿಸುತ್ತಿದ್ದು, ಬಂಡೆ, ಮರಗಳು ರಸ್ತೆಗೆ ಉರುಳುವ ಭೀತಿ ಎದುರಾಗಿದೆ. ಅವೈಜ್ಞಾನಿಕ ಕಾಮಗಾರಿ ಯಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ಪ್ರತಿನಿತ್ಯ ಶಿರಾಡಿಘಾಟ್‌ ರಸ್ತೆಯಲ್ಲಿ ಸಾವಿರಾರು ವಾಹನ ಗಳು ಸಂಚರಿಸುವುದರಿಂದ ಅನಾಹುತ ಸಂಭವಿ ಸುವ ಮುನ್ನ ಅಧಿಕಾರಿಗಳು ಸೂಕ್ರ ಕ್ರಮ ಕೈಗೊಳ್ಳಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next