Advertisement
ಮಂಗಳೂರು ನಗರದಲ್ಲಿ ಗುರುವಾರ ಬೆಳಗ್ಗೆಯಿಂದ ದಿನವಿಡೀ ಸುರಿದ ಭಾರೀ ಮಳೆಗೆ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೊಟ್ಟಾರಚೌಕಿ ಬಳಿ ಕೃತಕ ನೆರೆಯಿಂದಾಗಿ ರಸ್ತೆಯಲ್ಲೇ ನೀರು ನಿಂತು ವಾಹನ ಸಂಚಾರಕ್ಕೆ ತೊಡಕುಂಟಾಯಿತು. ಪಡೀಲ್ ರಾಷ್ಟ್ರೀಯ ಹೆದ್ದಾರಿಯಲ್ಲಿ ನೆರೆ ನೀರು ನಿಂತು ಅಕ್ಕ ಪಕ್ಕದ ಪ್ರದೇಶಗಳಿಗೆ ನುಗ್ಗಿ 2 ಗಂಟೆ ಕಾಲ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ಥಗೊಂಡಿತು. ನಗರದ ಮಾಲೆಮಾರ್, ಕೆ.ಎಸ್. ರಾವ್. ರಸ್ತೆ, ಕೊಟ್ಟಾರ, ಕೂಳೂರು, ಕಣ್ಣೂರು, ಕುದ್ರೋಳಿ, ಅಳಕೆ, ಕೋಡಿಕಲ್, ಕದ್ರಿ ಕಂಬಳ, ಪಚ್ಚನಾಡಿ ಸೇರಿದಂತೆ ನಗರದ ಬಹುಭಾಗದಲ್ಲಿ ಕೃತಕ ನೆರೆ ಸೃಷ್ಟಿಯಾಯಿತು.
Related Articles
Advertisement
ಜಿಲ್ಲಾಧಿಕಾರಿ ಸೂಚನೆ :
ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಸೂಚನೆ ನೀಡಿದ್ದಾರೆ. ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರಬೇಕು. ವಿಪತ್ತು ನಿರ್ವಹಣೆಯನ್ನು ಕಡ್ಡಾಯವಾಗಿ ನಿರ್ವಹಿಸಬೇಕು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾದ ನೋಡಲ್ ಅಧಿಕಾರಿಗಳು ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತತ್‌ಕ್ಷಣ ಸ್ಪಂದಿಸಬೇಕು. ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಪ್ರವಾಸಿಗರು, ಸಾರ್ವಜನಿಕರು ನದಿ ತೀರಕ್ಕೆ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರ ತೆರೆದು ಸನ್ನದ್ಧ ಸ್ಥಿತಿಯಲ್ಲಿರಬೇಕು ಎಂದಿದ್ದಾರೆ.
ಎನ್ಡಿಆರ್ಎಫ್,ಎಸ್‌ಡಿಆರ್‌ಎಫ್ ಸನ್ನದ್ಧ:
ದ.ಕ. ಜಿಲ್ಲೆಯಲ್ಲಿ ಮಳೆಗಾಲದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ನಿರ್ವಹಿಸಲು ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಸನ್ನದ್ಧವಾಗಿವೆ. ರಾಷ್ಟ್ರೀಯ ವಿಪತ್ತು ನಿರ್ವಹಣ ದಳ (ಎನ್‌ಡಿಆರ್‌ಎಫ್)ದ 20 ಮಂದಿಯ ತಂಡ ಪಣಂಬೂರಿನಲ್ಲಿ ತಂಗಿದೆ. ಮತ್ತು ರಾಜ್ಯ ವಿಪತ್ತುದಳ (ಎಸ್‌ಡಿಆರ್‌ಎಫ್) ದ 86 ಮಂದಿಯ ತಂಡ ಪಾಂಡೇಶ್ವರದಲ್ಲಿ ಸನ್ನದ್ಧವಾಗಿದೆ.
ರಜೆಯ ಗೊಂದಲ :
ದ.ಕ. ಜಿಲ್ಲೆಯಲ್ಲಿ ಬುಧವಾರ ಮಧ್ಯರಾತ್ರಿಯಿಂದಲೇ ಬಿರುಸಿನ ಮಳೆ ಸುರಿದಿದ್ದು, ಗುರುವಾರ ಬೆಳಗ್ಗೆಯೂ ಮುಂದುವರಿದಿದ್ದು, ಬೆಳಗ್ಗೆ ಸುಮಾರು 8.30ರ ವೇಳೆಗೆ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಿತ್ತು. ಆ ವೇಳೆಗಾಗಲೇ ವಿದ್ಯಾರ್ಥಿಗಳು ಶಾಲೆಗೆ ತೆರಳಿದ್ದರು. ಮತ್ತೆ ಮನೆಗೆ ಆಗಮಿಸುವ ವೇಳೆ ಹಲವು ಕಡೆ ಕೃತಕ ನೆರೆ ಸಮಸ್ಯೆಯಿಂದ ತೊಂದರೆಗೆ ಒಳಗಾದರು.
ಕೂರ್ನಡ್ಕ–ಪಾಣತ್ತೂರು ಅಂತಾರಾಜ್ಯ ಸಂಪರ್ಕ ಕಡಿತ :
ಅರಂತೋಡು: ಆಲೆಟ್ಟಿ ಸನಿಹದ ಕಲ್ಲಪಳ್ಳಿ ಬಾಟೋಳಿಯಲ್ಲಿ ಕೇರಳ ಭಾಗದಲ್ಲಿ ರಸ್ತೆಯ ರಸ್ತೆಯ ಮೇಲೆ ಗುಡ್ಡದ ಭಾರೀ ಪ್ರಮಾಣದಲ್ಲಿ ಜರಿದು ಬಿದ್ದಿರುವ ಪರಿಣಾಮ ಕೂರ್ನಡ್ಕ-ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಸಂಪರ್ಕ ಕಡಿತಗೊಂಡಿದೆ. ಈ ಭಾಗದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದ್ದು ಕಾಮಗಾರಿ ಅರ್ಧದಲ್ಲಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಬೈಕಂಪಾಡಿ ಕೈಗಾರಿಕಾ ಪ್ರಾಂಗಣಕ್ಕೆ ಜಲ ದಿಗ್ಬಂಧನ: ಕೋಟ್ಯಂತರ ನಷ್ಟ :
ಪಣಂಬೂರು: ರಾಜ್ಯದ 2ನೇ ಅತೀ ದೊಡ್ಡ ಕೈಗಾರಿಕಾ ಪ್ರದೇಶ ಅಕ್ಷರಶಃ ಗುರುವಾರ ಜಲದಿಗ್ಬಂಧನಕ್ಕೊಳಗಾಯಿತು. ಕೈಗಾರಿಕಾ ಪ್ರದೇಶದ ಯಾವು ರಸ್ತೆ ನೋಡಿದರೂ ನೆರೆ ನೀರಿನಿಂದ ಹರಿಯುತ್ತಿದ್ದರೆ ಕೈಗಾರಿಕಾ ಕಟ್ಟಡಗಳ ಒಳಗೆ ನೀರು ನುಗ್ಗಿ ಯಂತ್ರಗಳು, ವಾಹನಗಳು ನೀರಿನಲ್ಲಿ ಮುಳುಗಿ ಕೋಟ್ಯಂತರ ರೂ. ನಷ್ಟವುಂಟಾಗಿದೆ.
ಅಡ್ಕ ಸಭಾಂಗಣ ರಸ್ತೆಯಲ್ಲಿರುವ ಗುರುದೇವ್ ಪ್ಲಾಸ್ಟಿಕ್ಸ್ ಕಂಪೆನಿಯ ಯಂತ್ರಗಳು ನೀರಿನಲ್ಲಿ ಮುಳುಗಿದ್ದು ಆಂದಾಜು 1.50 ಕೋ.ರೂ ನಷ್ಟವಾಗಿದೆ. ಇತರ ಕಂಪೆನಿಗಳ ನಷ್ಟದ ಲೆಕ್ಕಾಚಾರ ಹಾಕಲಾಗುತ್ತಿದೆ. ಪಣಂಬೂರು ಪೊಲೀಸ್ ಠಾಣೆಯ ರಸ್ತೆಯ ಉದ್ದಕ್ಕೂ ಇರುವ ಕಂಪೆನಿಗಳು ಮುಳುಗಡೆಯಾಗಿವೆ. 2018ರಲ್ಲಿ ಧಾರಾಕಾರ ಮಳೆಗೆ ನೆರೆಯಿಂದ 5 ಕೋಟಿ ರೂ.ಗೂ ಮಿಕ್ಕಿ ನಷ್ಟವಾಗಿತ್ತು.
ಮಳೆ ಎದುರಿಸಲು ಉಡುಪಿ ಜಿಲ್ಲಾಡಳಿತ ಸರ್ವ ಸನ್ನದ್ಧ
ಉಡುಪಿ/ ಕಾಪು: ಜಿಲ್ಲೆಯಾದ್ಯಂತ ಗುರುವಾರ ಭಾರೀ ಮಳೆಯಾಗಿದ್ದು, ಜಿÇÉೆಯಲ್ಲಿ ಮಳೆ ಹೆಚ್ಚಾಗಿ ನೆರೆ ಬಂದರೆ ಮುಂಜಾಗ್ರತಾ ಕ್ರಮವಾಗಿ ರಕ್ಷಣೆ ಕಾರ್ಯಕ್ಕೆ ಬೋಟ್‌ಗಳ ವ್ಯವಸ್ಥೆ, ಅಗತ್ಯ ಸಿಬಂದಿ ಹಾಗೂ ತರಬೇತಾದ ಸ್ವಯಂಸೇವಕರ ತಂಡ ಸಜ್ಜಾಗಿದೆ.
ಕಾಪು, ಪಡುಬಿದ್ರಿ, ಶಿರ್ವ, ಕಟಪಾಡಿ ಪರಿಸರದಲ್ಲಿ ಕೃಷಿ ಭೂಮಿ ಸಹಿತ ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಕೆಲವೆಡೆ ನೀರು ಸರಾಗವಾಗಿ ಹರಿದು ಹೋಗುವ ತೋಡುಗಳಲ್ಲಿ ಹೂಳು ತುಂಬಿದ್ದು ಕೃತಕ ನೆರೆಯ ಭೀತಿ ಉಂಟಾಗಿದೆ. ಉಚ್ಚಿಲದಲ್ಲಿ ರಾ.ಹೆ. 66ರ ಸರ್ವೀಸ್ ರಸ್ತೆಯ ವಿಳಂಬ ಕಾಮಗಾರಿಯಿಂದ ಕೃತಕ ನೆರೆ ಉಂಟಾಗಿ ಉಚ್ಚಿಲ ಪೇಟೆ ಜಲಾವೃತಗೊಂಡಿತು. ಪಡುಬಿದ್ರಿ ಯಲ್ಲಿ ಮಳೆ ನೀರು ಹೋಗಲು ರಚಿಸಿದ ಚರಂಡಿಯಲ್ಲಿ ನೀರು ಹೋಗದೆ ಸರ್ವೀಸ್ ರಸ್ತೆಯಲ್ಲಿಯೇ ನೀರು ಹೋಗುತ್ತಿರುವುದರಿಂದ ಸಾರ್ವಜನಿಕರು ಸಮಸ್ಯೆ ಅನುಭವಿಸುವಂತಾಗಿದೆ.
ಕುಂದಾಪುರ, ಬೈಂದೂರಿ ನಾದ್ಯಂತ ಧಾರಾಕಾರ ಮಳೆಯಾಗಿದ್ದು, ಹಲವೆಡೆ ಮನೆಗಳಿಗೆ ಹಾನಿಯಾಗಿದೆ. ಉದ್ಯಾವರ, ಮಲ್ಪೆ, ಕಾರ್ಕಳ, ಹೆಬ್ರಿ, ಉಡುಪಿ, ಮಣಿಪಾಲ, ಬ್ರಹ್ಮಾವರ, ಕೋಟ, ಸಾಲಿಗ್ರಾಮ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಮುಂದಿನ ಕೆಲವು ದಿನಗಳ ಕಾಲ ನಿರಂತರ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ನಗರದ ತಗ್ಗು ಪ್ರದೇಶಗಳಿಗೆ, ತೋಡುಗಳು ಹರಿಯುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದಾರೆ. ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ. ಸಹಾಯವಾಣಿಯನ್ನೂ ಆರಂಭಿಸ ಲಾಗಿದ್ದು, ಮೆಸ್ಕಾಂ ಸಂಬಂಧಿ ಸಮಸ್ಯೆಗಳನ್ನು ಪರಿಹರಿಸಲು ಪ್ರತ್ಯೇಕ ಹೆಲ್ಪ್ ಲೈನ್ ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ನಾಲ್ಕು ದಿನ “ಎಲ್ಲೋ ಅಲರ್ಟ್; ಜು. 4 ರಿಂದ “ರೆಡ್ ಅಲರ್ಟ್’ :
ಕರಾವಳಿಯಲ್ಲಿ ಜುಲೈ 1ರಿಂದ 4ರ ವರೆಗೆ ಉತ್ತಮ ಮಳೆ ಸುರಿಯುವ ನಿರೀಕ್ಷೆ ಇದ್ದು, “ಎಲ್ಲೋ ಅಲರ್ಟ್’ ಘೊಷಿಸಲಾಗಿದೆ. ಜುಲೈ 4ರಿಂದ 7ರ ವರೆಗೆ ಜಿಲ್ಲೆಯಾದ್ಯಂತ “ರೆಡ್ ಅಲರ್ಟ್’ ಇರುವ ಸಂಬಂಧ ಅತೀ ಹೆಚ್ಚು ಮಳೆಯಾಗುವ ಸಂಭವ ಇದೆ. ಪ್ರತೀ ತಾಲೂಕು ಘಟಕಗಳು/ತಾಲೂಕು ವಿಪತ್ತು ನಿರ್ವಹಣ ಸಮಿತಿ ಪೂರ್ವ ಸನ್ನದ್ಧರಾಗಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ
ಮಂಗಳೂರು ಮಹಾನಗರಪಾಲಿಕೆಯ ನಿಯಂತ್ರಣ ಕೊಠಡಿಗೆ 20ಕ್ಕೂ ಹೆಚ್ಚು ಸಹಾಯಕ್ಕಾಗಿ ಕರೆಗಳು ಬಂದರೆ, ಅಗ್ನಿಶಾಮಕ ಇಲಾಖೆಗೆ ಸುಮಾರು 5 ಕರೆಗಳು ಬಂದಿವೆ. ಅಲ್ಲಿಗೆ ತೆರಳಿ ನೆರವು ನೀಡಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಕೂಟರ್ ಮೇಲೆ ಗೆಲ್ಲು, ವಿದ್ಯುತ್ ಕಂಬ ಬಿದ್ದು ಸವಾರನಿಗೆ ಗಾಯ :
ಬಂಟ್ವಾಳ: ಮೂಡುಬಿದಿರೆ ರಸ್ತೆಯ ಬಂಟ್ವಾಳ ವಿದ್ಯಾಗಿರಿ ಸಮೀಪ ಮರದ ರೆಂಬೆ ಹಾಗೂ ವಿದ್ಯುತ್ ಕಂಬವೊಂದು ಅಂಗವಿಕಲ ವ್ಯಕ್ತಿ ಚಲಾಯಿಸುತ್ತಿದ್ದ ತ್ರಿಚಕ್ರ ಸ್ಕೂಟರ್‌ಗೆ ಬಿದ್ದು, ಸವಾರ ಗಾಯಗೊಂಡ ಘಟನೆ ಜೂ. 29ರ ಸಂಜೆ ಸಂಭವಿಸಿದೆ. ಗಾಯಾಳು ಗೋಳಿಪಡು³ ನಿವಾಸಿ ಇಸ್ಮಾಯಿಲ್ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮರದ ಗೆಲ್ಲು ಬಿದ್ದು 4 ವಿದ್ಯುತ್ ಕಂಬಗಳು ಧರೆಗುರುಳಿವೆ. ಒಂದು ಕಂಬ ಸ್ಕೂಟರ್ ಮೇಲೆ ಬಿದ್ದು ಜಖಂಗೊಂಡಿದೆ. ಬಂಟ್ವಾಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬಡಗುಂಡಿ ಸಮೀಪ ಹೆದ್ದಾರಿಗೆ ಗುಡ್ಡ ಕುಸಿತ :
ಬಂಟ್ವಾಳ: ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿಯ ನಾವೂರಿನ ಬಡಗುಂಡಿ ಸಮೀಪ ಗುಡ್ಡದ ಮಣ್ಣು ಕುಸಿದು 2 ವಿದ್ಯುತ್ ಕಂಬಗಳು ಹೆದ್ದಾರಿಗೆ ಬಿದ್ದ ಪರಿಣಾಮ ಸ್ವಲ್ಪ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು. ಹಿಚಾಚಿ ಮೂಲಕ ವಿದ್ಯುತ್ ಕಂಬಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಯಿತು. ಹೆದ್ದಾರಿ ಅಭಿವೃದ್ಧಿ ಕಾಮಗಾರಿ ವೇಳೆ ಗುಡ್ಡವನ್ನು ಅಪಾಯಕಾರಿ ರೀತಿಯಲ್ಲಿ ಅಗೆದ ಪರಿಣಾಮ ಈ ಸ್ಥಿತಿ ಉಂಟಾಗಿದ್ದು, ಮುಂದೆಯೂ ಕುಸಿಯುವ ಆತಂಕ ಎದುರಾಗಿದೆ.