Advertisement

20 ವರ್ಷ ನಂತರ 1008 ಮಿಮೀ ದಾಖಲೆ ಮಳೆ

04:54 PM Sep 03, 2022 | Team Udayavani |

ಮಂಡ್ಯ: ಪ್ರಸ್ತುತ ವರ್ಷ ಜಿಲ್ಲಾದ್ಯಂತ ದಾಖಲೆ ಪ್ರಮಾಣದ ಮಳೆ ಆಗಿದ್ದು, ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಮೇ ನಿಂದ ಸೆ.2ರವರೆಗೂ 20 ವರ್ಷ ನಂತರ ಸರಾಸರಿ 1008 ಮಿ.ಮೀ. ಮಳೆಯಾಗಿದೆ.

Advertisement

ಪ್ರತಿ ವರ್ಷ ವಾಡಿಕೆಯಂತೆ ಸರಾಸರಿ 740 ಮಿ.ಮೀ. ಮಳೆ ಆಗುತ್ತಿತ್ತು. ಆದರೆ, ಜನವರಿ ತಿಂಗಳಿನಿಂದ ಸೆ.2ರವರೆಗೆ 1008 ಮಿ.ಮೀ. ಮಳೆ ಆಗಿರುವ ವರದಿಯಾಗಿದೆ. ಇದು ಪ್ರಸ್ತುತ ವರ್ಷದ ದಾಖಲೆಯಾಗಿದೆ.

ತಾಲೂಕುವಾರು ಮಳೆ ವಿವರ: ಜಿಲ್ಲಾದ್ಯಂತ ಜನವರಿಯಿಂದ ಇದುವರೆಗೂ ಶೇ.181 ಹೆಚ್ಚುವರಿ ಮಳೆಯಾಗಿದೆ. ಜಿಲ್ಲೆಯಲ್ಲಿಯೇ ಮಳೆಯಾಶ್ರಿತ ಪ್ರದೇಶ ನಾಗಮಂಗಲ ತಾಲೂಕಿನಲ್ಲಿ ಅತಿ ಹೆಚ್ಚು ಅಂದರೆ ಸರಾಸರಿ 1077.3 ಮಿ.ಮೀ. ಮಳೆಯಾ ಗಿದೆ. ಕೆ.ಆರ್‌ .ಪೇಟೆ ತಾಲೂಕಿನಲ್ಲಿ 1075.9 ಮಿ.ಮೀ., ಮದ್ದೂರಿನಲ್ಲಿ 1032.1 ಮಿ.ಮೀ., ಮಳವಳ್ಳಿಯಲ್ಲಿ 841 ಮಿ.ಮೀ., ಮಂಡ್ಯ ತಾಲೂಕಿ ನಲ್ಲಿ 1149.3 ಮಿ.ಮೀ., ಪಾಂಡವಪುರದಲ್ಲಿ 989.6 ಮಿ.ಮೀ., ಶ್ರೀರಂಗಪಟ್ಟಣದಲ್ಲಿ 990.7 ಮಿ.ಮೀ. ಮಳೆ ದಾಖಲಾಗಿದೆ. ಕಳೆದ ಏಳು ದಿನಗಳಲ್ಲಿ ಸರಾಸರಿ 100 ಮಿ.ಮೀ. ಮಳೆ ವರದಿ ಆಗಿದ್ದರೆ, ಜೂನ್‌ ನಿಂದ ಸೆ.2ರವರೆಗೂ ಶೇ.225 ಹೆಚ್ಚುವರಿ ಮಳೆಯಾಗಿದೆ. ಕೆ.ಆರ್‌.ಪೇಟೆ 606.3 ಮಿ.ಮೀ., ಮದ್ದೂರು 709.8 ಮಿ.ಮೀ., ಮಳವಳ್ಳಿ 487.5 ಮಿ.ಮೀ., ಮಂಡ್ಯ 784.6 ಮಿ.ಮೀ., ನಾಗಮಂಗಲ 711.9 ಮಿ.ಮೀ., ಪಾಂಡವಪುರ 585.6 ಮಿ.ಮೀ., ಶ್ರೀರಂಗಪಟ್ಟಣ 591.1 ಮಿ.ಮೀ. ಮಳೆ ಬಿದ್ದಿರುವ ವರದಿಯಾಗಿದೆ.

ಮಳೆಯಿಂದಾಗಿ ಕಬ್ಬು, ಭತ್ತ, ರಾಗಿ ಬಿತ್ತನೆ ಕುಂಠಿತ: ನಿರಂತರ ಸುರಿಯುತ್ತಿರುವ ಮಳೆಯಿಂದ ರೈತರ ಬಿತ್ತನೆಗೆ ಅಡ್ಡಿಯಾಗಿದೆ. ಆಗಸ್ಟ್‌ ಹಾಗೂ ಸೆಪ್ಟೆಂಬರ್‌ ತಿಂಗಳು ಭತ್ತ ಬಿತ್ತನೆ ಕಾಲವಾಗಿದೆ. ಜಿಲ್ಲಾದ್ಯಂತ 1.90 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಲಾಗಿತ್ತು. ಆದರೆ, ಮಳೆಯಿಂದ ಹಿನ್ನಡೆಯಾಗಿದೆ. ಈಗಾಗಲೇ ಭತ್ತ ಬಿತ್ತನೆಗೆ ಒಟ್ಲು ಹಾಕಲಾಗಿತ್ತು. ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ಕಬ್ಬು ಬೆಳೆ ನಾಟಿ ಮಾಡಲಾಗಿತ್ತು. ಆದರೆ, ಮಳೆ ನೀರಿನಿಂದ ಜಲಾವೃತಗೊಂಡು ಕಬ್ಬು ಕೊಳೆಯುವ ಸ್ಥಿತಿ ತಲುಪಿದೆ. ಅಲ್ಲದೆ, ರಾಗಿ ಬಿತ್ತನೆಗೂ ಮಳೆ ಅಡ್ಡಿಯಾಗಿದೆ. ಜತೆಗೆ ಬಿತ್ತನೆಗೆ ಭೂಮಿ ಹದ ಮಾಡಿಕೊಂಡಿದ್ದ ರೈತರು, ಮತ್ತೆ ಉಳುಮೆ ಮಾಡಿ ಹದ ಮಾಡಿ ಮತ್ತೂಮ್ಮೆ ನಾಟಿ ಮಾಡಬೇ ಕಾದ ಅನಿವಾರ್ಯತೆ ಎದುರಾಗಿದೆ. ಇದರಿಂದ ರೈತರಿಗೆ ಮತ್ತಷ್ಟು ಆರ್ಥಿಕ ಹೊರೆ ಬೀಳಲಿದೆ.

20 ಟನ್‌ ಆಹಾರ ಉತ್ಪಾದನೆ ಕುಂಠಿತ: ವಿಪರೀತ ಮಳೆಯಿಂದ ಈಗಾಗಲೇ ಸಾಕಷ್ಟು ಬೆಳೆ ನಾಶ ವಾಗಿದೆ. ಇದರಿಂದ ಉತ್ಪಾದನೆ ಕುಂಠಿತವಾಗುವ ಎಲ್ಲಾ ಸಾಧ್ಯತೆಗಳಿವೆ. ಒಂದೆಡೆ ಮಳೆಯಿಂದ ಬಿತ್ತನೆ ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನೊಂದೆಡೆ ನಾಟಿ ಮಾಡಿರುವ ಬಿತ್ತನೆ ಹಾಳಾಗುತ್ತಿದೆ. ಇದರಿಂದ ಉತ್ಪಾದನೆ ಕುಂಠಿತ ಆಗುವ ಆತಂಕವೂ ಎದುರಾಗಲಿದೆ. ಪ್ರತಿ ವರ್ಷ ಜಿಲ್ಲೆಯಲ್ಲಿ 20 ಟನ್‌ ಆಹಾರ ಉತ್ಪಾದನೆ ಆಗುತ್ತಿತ್ತು. ಆದರೆ, ಈ ಬಾರಿ 17ರಿಂದ 18 ಟನ್‌ ಉತ್ಪಾದನೆ ಆಗುವ ಸಾಧ್ಯತೆ ಇದೆ.

Advertisement

ಕೃಷಿ ಬೆಳೆ ನಾಶ : ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಗೆ ಕೃಷಿ, ತೋಟಗಾರಿಕೆ ಬೆಳೆ ನಾಶವಾಗಿದೆ. ಕೋಟಿ ರೂ.ಗೂ ಹೆಚ್ಚು ತೋಟಗಾರಿಕೆ, 3 ಕೋಟಿ ರೂ. ಹೆಚ್ಚು ಕೃಷಿ ಬೆಳೆ ನಾಶವಾಗಿದೆ. ಅಲ್ಲದೆ, ಮನೆಗಳಿಗೂ ಹಾನಿಯಾಗಿದೆ. ಪ್ರಾಣ ಹಾನಿ, ಜಾನುವಾರು ಸಾವನ್ನಪ್ಪಿರುವ ಬಗ್ಗೆ ವರದಿ ಆಗಿದೆ.

ಪ್ರಸಕ್ತ ವರ್ಷ ದಾಖಲೆ ಮಳೆ ಸುರಿದಿದೆ. ರೈತರ ಬಿತ್ತನೆಗೆ ಅಡ್ಡಿಯಾಗಿದೆ. ಆಹಾರ ಉತ್ಪಾದನೆಯೂ ಕಡಿಮೆ ಆಗಿದೆ. ರೈತರ ಮೇಲೆ ಆರ್ಥಿಕ ಹೊರೆ ಬೀಳುವ ಸಾಧ್ಯತೆ ಇದೆ. ಭತ್ತ, ಕಬ್ಬು ನಾಟಿಗೆ ಹಿನ್ನಡೆಯಾಗಿದ್ದು, ಇದಕ್ಕೆ ಪರಿಹಾರ ಕೊಡಲು ಸಾಧ್ಯವಿಲ್ಲ. ಹಾಲಿ ಇರುವ ಬೆಳೆ ಸಾಕಷ್ಟು ನಷ್ಟ ಸಂಭವಿಸಿದೆ. ● ವಿ.ಎಸ್‌.ಅಶೋಕ್‌, ಕೃಷಿ ಜಂಟಿ ನಿರ್ದೇಶಕ, ಮಂಡ್ಯ

ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next