ಬೆಂಗಳೂರು: ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್, ಜಕ್ಕೂರು ಬಳಿಯ ಡೈನಸ್ಟಿ ಬಡಾವಣೆಗಳು ಸೋಮವಾರದ ಮಳೆಯಿಂದಾಗಿ ಇನ್ನೂ ದ್ವೀಪದಂತಾಗಿದ್ದು, ದಾಸರಹಳ್ಳಿ, ಮಹದೇವಪುರ ವಲಯಗಳ ಕೆಲವು ಬಡಾವಣೆಗಳಲ್ಲಿ ಕೆರೆಯಂತೆ ತುಂಬಿರುವ ನೀರನ್ನು ತೆರೆವುಗೊಳಿಸುವ ಕಾರ್ಯ ನಡೆಯುತ್ತಿದೆ.
ಬೆಂಗಳೂರಿನ ಯಲಹಂಕ ವ್ಯಾಪ್ತಿಯ ಚೌಡೇಶ್ವರಿಯಲ್ಲಿ ಸೋಮವಾರ ರಾತ್ರಿ 12 ರಿಂದ ಮುಂಜಾನೆ 6 ಗಂಟೆಯವರೆಗೆ ಬರೋಬ್ಬರಿ 15 ಸೆಂ. ಮೀ.ಗೂ ಅಧಿಕ ಮಳೆ ಸುರಿದ ಪರಿಣಾಮ ದ್ವೀಪದಂತಾಗಿದ್ದ ಯಲಹಂಕದ ಕೇಂದ್ರೀಯ ವಿಹಾರ್ ಅಪಾರ್ಟ್‌ಮೆಂಟ್ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ. ಇಲ್ಲಿನ ಕಾರುಗಳು ಅರ್ಧ ನೀರಿನಲ್ಲಿ ಮುಳುಗಿ ಹೋದರೆ, ಅಪಾರ್ಟ್‌ಮೆಂಟ್ ನಿವಾಸಿಗಳ ವಸ್ತುಗಳೆಲ್ಲ ನೀರಿನಲ್ಲಿ ಕೊಚ್ಚಿ ಹೋಗಿವೆ.
ಇಲ್ಲಿನ ನಿವಾಸಿಗಳಿಗೆ ಊಟ, ಉಪಾಹಾರ ನೀಡುತ್ತಿರುವ ಬಿಬಿಎಂಪಿಯು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದು ರಕ್ಷಣೆ ನೀಡಿದೆ. ಇನ್ನು ಈ ಅಪಾರ್ಟ್‌ಮೆಂಟ್‌ನ ನೀರು ತೆರವುಗೊಳಿಸಿ ಸಹಜ ಸ್ಥಿತಿಗೆ ಬರಲು ಇನ್ನೂ ಒಂದು ವಾರಗಳೇ ಉರುಳಬಹುದು ಎನ್ನುತ್ತಾರೆ ಅಧಿಕಾರಿಗಳು. ಇದರ ಜೊತೆಗೆ ಜಕ್ಕೂರು ಬಳಿಯ ಡೈನಸ್ಟಿ ಬಡಾವಣೆಗಳು ಜಲಾವೃತಗೊಂಡಿದ್ದು, ಇಲ್ಲೂ ಬಿಬಿಎಂಪಿ ಕಾರ್ಯಾಚರಣೆ ಮುಂದುವರಿಸಿದೆ.
ಇನ್ನು ಮಹದೇವಪುರದ ಸಾಯಿ ಲೇಔಟ್ ಹಾಗೂ ವಡ್ಡರಪಾಳ್ಯದಲ್ಲಿ ನೀರನ್ನು ಹೊರ ಹಾಕುವ ಕಾರ್ಯ ಸಕ್ರಿಯವಾಗಿ ನಡೆಯುತ್ತಿದೆ. ಇಲ್ಲಿ ಬಡಾವಣೆಯೊಳಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಇನ್ನೂ ನೀರಿನ ತೆರವು ಕಾರ್ಯ ನಡೆಯುತ್ತಿದೆ. ಇಲ್ಲಿ ನೆಲೆಸಿರುವ ಮನೆಗಳಲ್ಲಿ ಅಪಾರ ಪ್ರಮಾಣದ ವಸ್ತುಗಳು ನೀರು ಪಾಲಾಗಿದೆ. ಇಲ್ಲಿನ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದ್ದು, ಇಲ್ಲಿ ಸಂಪೂರ್ಣ ನೀರು ತೆರವಾದ ಬಳಿಕವೇ ಇಲ್ಲಿಗೆ ಅವರನ್ನು ಕಳುಹಿಸಲಾಗುವುದು ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.
ಇನ್ನು ಆರ್‌ಜಿಎ ಟೆಕ್ ಪಾರ್ಕ್ ರಸ್ತೆ ಕೆರೆಯಂತಾಗಿದೆ. ಮೇಲ್ಸೇತುವೆ ಕೆಳಭಾಗ ಸಂಪೂರ್ಣ ಜಲಾವೃತವಾಗಿದ್ದು, ಜನ ರಸ್ತೆಯಲ್ಲಿ ಸಂಚರಿಸಲಾಗದೆ ಪರದಾಡುತ್ತಿದ್ದಾರೆ. ಬೆಂಗಳೂರು ನಗರದ ಯಲಹಂಕ, ಮಹದೇವಪುರ, ದಾಸರಹಳ್ಳಿ ವಲಯಗಳಲ್ಲಿ ಭಾರೀ ಮಳೆಯಾಗಿದ್ದು, ಇದರಿಂದ ಕೆರೆಗಳೆಲ್ಲಾ ತುಂಬಿ ಕೋಡಿಗಳಲ್ಲಿ ಹೆಚ್ಚು ನೀರು ಹರಿದಿರುವ ಪರಿಣಾಮ ವಿವಿಧ ಪ್ರದೇಶಗಳು ಜಲಾವೃತವಾಗಿರುತ್ತದೆ. ಇನ್ನೂ ಎರಡು ದಿನ ಮಳೆಯ ಮುನ್ಸೂಚನೆ ಇರುವುದರಿಂದ ಬಾಧಿತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು, ನಿರ್ವಹಿಸಲು ಹಾಗೂ ಯಾವುದೇ ತುರ್ತು ಪರಿಸ್ಥಿತಿಗಳಿಗೆ ತ್ವರಿತವಾಗಿ ಪ್ರತಿಕ್ರಿಯಿಸುವ ಸಲುವಾಗಿ ಪಾಲಿಕೆಯ ಅಧಿಕಾರಿ, ನೌಕರರ ತಂಡಗಳ ಜೊತೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಅಗ್ನಿ ಶಾಮಕ ದಳ ಹಾಗೂ ಸಿವಿಲ್ ಡಿಫೆನ್ಸ್ ತಂಡಗಳು ಕಾರ್ಯನಿರ್ವಹಿಸುತ್ತಿವೆ ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.
ಇನ್ನು ದಾಸರಹಳ್ಳಿ ವಲಯ ನಿಸರ್ಗ ಲೇಔಟ್, ಪಾರ್ವತಿ ಬಡಾವಣೆ, ಮಿತ್ರಾ ಬಡಾವಣೆ, ಪೀಣ್ಯ ಕೈಗಾರಿಕಾ ಪ್ರದೇಶ, ಬೆಲ್ಮಾರ್ಗ್ ಲೇಔಟ್, ಮಹದೇವಪುರದ ಬೆಸ್ಲಿಂಗ್ ಗಾರ್ಡನ್, ಮಧುರಾನಗರ, ಚೆನ್ನಪ್ಪನಹಳ್ಳಿ, ಸಪ್ತಗಿರಿ ಲೇಔಟ್, ಚಿನ್ನಸಂದ್ರ ಮುಖ್ಯ ರಸ್ತೆ, ಗ್ರೀನ್ ಲೇಔಟ್‌ನಲ್ಲಿ ನೀರು ತೆರವುಗೊಳಿಸಲಾಗಿದೆ. ಮಹದೇವಪುರ ವಲಯದ ಸಾಯಿ ಲೇಔಟ್‌ನಲ್ಲಿ ಸುಮಾರು 300 ಜನ ನಾಗರಿಕರಿಗೆ ಬೆಳಗಿನ ಉಪಾಹಾರ. ಮಧ್ಯಾಹ್ನ ಊಟ, ರಾತ್ರಿಯ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.