Advertisement
ಶಾಲೆ ಬಿಟ್ಟು ಓಡಿದ ಮಕ್ಕಳುಸಂಜೆ ವೇಳೆ ಶಾಲೆ ಬಿಡುವ ಮುನ್ನವೇ ಮಳೆ – ಗಾಳಿ ಪ್ರಾರಂಭವಾಗಿತ್ತು. ಶರವೂರು ಶಾಲೆಯ ಮಕ್ಕಳು ತರಗತಿ ಕೋಣೆಗಳಲ್ಲಿದ್ದರು. ಶಾಲೆಯ ಸಮೀಪದ ಮರ ಛಾವಣಿ ಮೇಲೆ ಬಿದ್ದ ಪರಿಣಾಮ ಹಂಚುಗಳು ತುಂಡಾಗಿ ತರಗತಿಯೊಳಗೆ ಬಿದ್ದವು. ಜೊತೆಗೆ ಜೋರಾಗಿ ಗಾಳಿಯೂ ಬೀಸಿದ ಪರಿಣಾಮ ಮಕ್ಕಳು ಹೆದರಿ ಕಂಗಾಲಾಗಿದ್ದರು. ಕೆಲವು ಮಕ್ಕಳು ತರಗತಿಯಿಂದ ಓಡಿ ಪಕ್ಕದ ಮನೆ ಹಾಗೂ ರಂಗ ಮಂದಿರದಲ್ಲಿ ಆಶ್ರಯ ಪಡೆದರು.
ಶರವೂರು ನಿವಾಸಿ ಕೇಪು ಅಜಿಲ ಅವರ ಮನೆಗೆ ಬೃಹತ್ ಗಾತ್ರದ ಹಲಸಿನ ಮರ ಬಿದ್ದು ಹಾನಿಯಾಗಿದೆ. ಮನೆಯ ಯಜಮಾನ ಕೇಪು ಅಜಿಲ ಮತ್ತು ಮನೆಯ ಹಿರಿಯ ಮಗ ಮನೋಹರ್ ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಇತ್ತ ಸೋಮವಾರದ ಭಾರಿ ಗಾಳಿ ಮನೆಯನ್ನು ನಾಶ ಮಾಡಿದೆ. ಇದರಿಂದಾಗಿ ಕುಟುಂಬದ ಸಂಕಷ್ಟ ಮತ್ತಷ್ಟು ತೀವ್ರವಾಗಿದೆ. ಧರೆಗುರುಳಿದ ಅಡಿಕೆ ಮರ, ವಿದ್ಯುತ್ ಕಂಬ
ಶರವೂರು, ಕಕ್ವೆ, ನಗ್ರಿ ವ್ಯಾಪ್ತಿಯ 15ಕ್ಕೂ ಅಧಿಕ ವಿದ್ಯುತ್ ಕಂಬಗಳು ಮರ ಬಿದ್ದ ಪರಿಣಾಮ ಧರೆಗುರುಳಿವೆ. ಇದರ ಪರಿಣಾಮ ಮುಂದಿನ ಕೆಲ ದಿನ ವಿದ್ಯುತ್ ಅಭಾವ ಉಂಟಾಗಲಿದೆ.ಸುಮಾರು ಹತ್ತು ಸಾವಿರ ಅಡಿಕೆ ಮರಗಳು ನಾಶವಾಗಿದೆ. ಶರವೂರು ಪರಮೇಶ್ವರ ಗೌಡ, ಕಂದ್ಲಾಜೆ ಗಣೇಶ್ ದೇವಾಡಿಗ ಅವರ ಹಟ್ಟಿ ಹಾಗೂ ಕೊಟ್ಟಿಗೆಗೆ ಮರ ಬಿದ್ದು ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಶರವೂರು ನಡಿಮಾರು ನಿವಾಸಿ ಸೀತಾರಾಮ ಅವರ ಅಟೋ ರಿಕ್ಷಾದ ಮೇಲೂ ಮರ ಬಿದ್ದು ರಿಕ್ಷಾ ಜಖಂಗೊಂಡಿದೆ.
Related Articles
ಮರಗಳು ಗಾಳಿಗೆ ನೆಲಕ್ಕುರುಳಿದ ಪರಿಣಾಮ ಕಂದ್ಲಾಜೆ, ಆಲಂಕಾರು ಸಂಪರ್ಕ ರಸ್ತೆ ಬಂದ್ ಆಗಿತ್ತು. ಸಮಸ್ಯೆ ಬಗ್ಗೆ ಮಾಹಿತಿ ಪಡೆದುಕೊಂಡ ಆಲಂಕಾರಿನ ನಿವಾಸಿಗಳು ತಕ್ಷಣ ಸ್ಪಂದಿಸಿ ಮರ ತೆರವು ಮಾಡಿದರು. ಜೇಸಿಬಿ ಬಳಸಿ ಮರಗಳನ್ನು ರಸ್ತೆಯಿಂದ ಸರಿಸಲಾಯಿತು. ನೆಕ್ಕರೆ ಅಬೂಬಕ್ಕರ್ ಮರ ಕಟಾವು ಕಾರ್ಯದಲ್ಲಿ ಸಹಕರಿಸಿದರು. ಕಡಬ ಕಂದಾಯ ನಿರೀಕ್ಷಕ ಕೊರಗಪ್ಪ ಹೆಗ್ಡೆ, ಆಲಂಕಾರು ಗ್ರಾ.ಪಂ. ಸದಸ್ಯ ಕೇಶವ ಗೌಡ ಆಲಡ್ಕ, ಯಾದವೇಂದ್ರ ರಾವ್, ಗ್ರಾಮಕರಣಿಕ ಸಹಾಯಕ ವಿಶ್ವನಾಥ ಭೇಟಿ ನೀಡಿ ನಷ್ಟ ಪರಿಶೀಲಿಸಿದರು.
Advertisement
ಉಪ್ಪಿನಂಗಡಿಯಲ್ಲೂ ಮಳೆಸೋಮವಾರ ಸಾಯಂಕಾಲ ಭಾರಿ ಗಾಳಿ – ಮಳೆಗೆ ಹಲವೆಡೆ ಮರದ ಗೆಲ್ಲುಗಳು ಮುರಿದು ಬಿದ್ದು, ವಿದ್ಯುತ್ ಸಂಪರ್ಕ ಅಸ್ತವ್ಯಸ್ತವಾಗಿತ್ತು. ನೆಲ್ಯಾಡಿ, ಗೋಳಿತೊಟ್ಟು ಹಾಗೂ ಬಜತ್ತೂರು ಪರಿಸರದಲ್ಲಿ ವಿದ್ಯುತ್ ಕಂಬಗಳು ಹಾನಿಗೊಂಡಿದ್ದು, ವಿದ್ಯುತ್ ಸರಬರಾಜು ಸ್ಥಗಿತಗೊಂಡಿದೆ. ಕೆಲವೆಡೆ ಕೃಷಿಯೂ ಹಾನಿಗೀಡಾಗಿದೆ. ಉಪ್ಪಿನಂಗಡಿ ಪರಿಸರದಲ್ಲಿ ತಾತ್ಕಾಲಿಕವಾಗಿ ಆಳವಡಿಸಲಾಗಿದ್ದ ಟೆಂಟ್, ಶೀಟ್, ಹೊದಿಕೆಗಳು ಗಾಳಿಗೆ ಹಾರಿ ಹೋಗಿವೆ.