Advertisement

ವಿಜಯಪುರ; ಬಿರುಗಾಳಿಗೆ ಹಾರಿಹೋದ ಶಾಲಾ‌ ಮೇಲ್ಛಾವಣಿ, ನೆಲಕ್ಕುರುಳಿದ ಮರಗಳು

04:50 PM Apr 28, 2022 | keerthan |

ವಿಜಯಪುರ: ಜಿಲ್ಲೆಯಲ್ಲಿ ಗುರುವಾರ ಮಧ್ಯಾಹ್ನದಿಂದ ಭಾರಿ ಬಿರುಗಾಳಿ, ಗುಡುಗು, ಸಿಡಿಲಿನ ಸಹಿತ ಆಲಿಕಲ್ಲು ಮಳೆಯಾಗಿದೆ. ಅಲ್ಲಲ್ಲಿ ಮರಗಳು ನೆಲಕುರುಳಿದ್ದು, ರಸ್ತೆ ಸಂಚಾರಕ್ಕೂ ಸಮಸ್ಯೆ ಆಗಿದೆ. ವಿದ್ಯುತ್ ಕೈಕೊಟ್ಟಿದೆ.

Advertisement

ಗುರುವಾರ ಮಧ್ಯಾಹ್ನದಿಂದಲೇ ಭಾರೀ ಗಾಳಿ ಬೀಸಲು ಆರಂಭಿಸಿದ್ದು, ತಿಕೋಟಾ ಭಾಗದ ಹೊನವಾಡ ಭಾಗದಲ್ಲಿ ಮರಗಳು ನೆಲಕ್ಕೆ ಉರುಳಿವೆ. ಹೆದ್ದಾರಿ ಪಕ್ಕದ ಬೃಹತ್ ಗಾತ್ರದ ಕೆಲ ಮರಗಳು ರಸ್ತೆಗೆ ಉರುಳಿದ್ದು, ತಿಕೋಟಾ ಮಾರ್ಗದ ವಿಜಯಪುರ-ಅಥಣಿ ಮಾರ್ಗವಾಗಿ ಸಂಚರಿಸುವ ಬೆಳಗಾವಿ ಮಾರ್ಗದಲ್ಲಿ ಸಂಚಾರಕ್ಕೆ ವ್ಯತ್ಯಯವಾಗಿದೆ. ಈ ಮಾರ್ಗವಾಗಿ ಸಂಚರಿಸುವ ನೂರಾರು ವಾಹನಗಳು ಎರಡೂ ಬದಿಯಲ್ಲಿ ಸಾಲುಗಟ್ಟಿ ನಿಂತಿವೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಸ್ಥಳೀಯರ ಸಹಾಯದಿಂದ ಮರಗಳನ್ನು ತೆರವು ಮಾಡಿ, ಸುಗಮ‌ ಸಂಚಾರಕ್ಕೆ ವ್ಯವಸ್ಥೆ ಕಲ್ಪಿಸುವಲ್ಲಿ ನಿರತರಾಗಿದ್ದಾರೆ.

ಬಿರುಗಾಳಿಯ ಪರಿಣಾಮ ಜಿಲ್ಲೆಯ ಬಹುತೇಕ‌ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

Advertisement

ಇದನ್ನೂ ಓದಿ:ಆಸ್ಪತ್ರೆಗಳು ಖಾಲಿಯಾಗಿದ್ದರೆ ನನಗೆ ಸಂತೋಷ: ಅಸ್ಸಾಂನಲ್ಲಿ ಪ್ರಧಾನಿ ಮೋದಿ

ಮತ್ತೊಂದೆಡೆ ಭಾರಿ ಗುಡುಗು, ಸಿಡಿಲು ಸಹಿತ ಆಲಿಕಲ್ಲು ಮಳೆ ಸುರಿದಿದೆ. ಮಳೆ ದೊಡ್ಡ ಮಟ್ಟದಲ್ಲಿ ಇಲ್ಲದಿದ್ದರೂ ಸುರಿದಿರುವ ಅಳಿಕಲ್ಲು ಮಳೆಗೆ ಮಾವು, ಬಾಳೆ ಸೇರಿದಂತೆ ರೈತರ ತೋಟಗಾರಿಕೆ ಬೆಳೆಗಳಿಗೆ ಹಾನಿ ಆಗಿರುವ ಮಾಹಿತಿ ಲಭ್ಯವಾಗಿದೆ.

ತಿಕೋಟಾ ಭಾಗದ ಘೋಣಸಗಿ, ಕಳ್ಳಕವಟಗಿ, ಬಾಬಾನಗರ, ಬಿಜ್ಜರಗಿ ಸೋಮದೇವರಹಟ್ಟಿ, ಹುಬನೂರ, ಟಕ್ಕಳಕಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಭಾರಿ ಪ್ರಮಾಣದ ಆಲಿಕಲ್ಲು ಮಳೆಯಾಗಿದ್ದು, ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗಿದೆ.

ಭಾರಿ ಬಿರುಗಾಳಿಗೆ ಜಿಲ್ಲೆಯ ಹಲವು ಕಡೆಗಳಲ್ಲಿ ಮನೆ ಹಾಗೂ ಶಾಲೆಗಳ ಮೇಲ್ಛಾವಣಿ ಹಾರಿಹೋಗಿದ್ದು, ಭಾರಿ ಪ್ರಮಾಣದ ಹಾನಿಯಾಗಿರುವ ಮಾಹಿತಿ ಇದೆ. ಬಸವನಬಾಗೇವಾಡಿ ತಾಲೂಕಿನ ಇಂಗಳೇಶ್ವರ ಗ್ರಾಮದ ಕೆಜಿಎಸ್ ಶಾಲೆಯ ಮೇಲ್ಛಾವಣಿ ಹಾರಿಹೋಗಿದೆ.

ರಾಜ್ಯದ ಹವಾಮಾನ ಇಲಾಖೆ ವಿಜಯಪುರ ಜಿಲ್ಲೆ ಸೇರಿದಂತೆ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಗಂಟೆಗೆ 40 ಕಿ.ಮೀ. ವೇಗದಲ್ಲಿ ಬಿರುಗಾಳಿ ಬೀಸುವ ಮುನ್ಸೂಚನೆ ನೀಡಿತ್ತು.

ಬೆಳಗಾವಿ, ಗದಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಲ್ಲೂ ಇದೇ ಪರಿಸ್ಥಿತಿ ಇರಲಿದೆ ಎಂದು ಆಯಾ ಜಿಲ್ಲಾಡಳಿತಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು ಎಂಬುದನ್ನು ವಿಜಯಪುರ ಜಿಲ್ಲಾಡಳಿತ ಮಾಧ್ಯಮಗಳಿಗೆ ಮಾಹಿತಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next