Advertisement

Rain ಕಾಸರಗೋಡಿನಾದ್ಯಂತ ಬಿರುಸಿನ ಮಳೆ: ಇಬ್ಬರ ಸಾವು

11:21 PM May 22, 2024 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ಬಿರುಸಿನ ಮಳೆಯಾಗುತ್ತಿದ್ದು, ಬುಧವಾರ ದುರ್ಘ‌ಟನೆಗಳಲ್ಲಿ ಇಬ್ಬರು ಮೃತಪಟ್ಟಿದ್ದಾರೆ.

Advertisement

ಮಡಿಕೈ ಬಂಗಳದಲ್ಲಿ ಸಿಡಿಲು ಬಡಿದು ಬಂಗಳಂ ಪುದಿಯ ಕಂಡಂ ನಿವಾಸಿ ಬಾಲನ್‌ (70) ಮೃತಪಟ್ಟರೆ, ತುಂಬಿ ಹರಿಯುತ್ತಿರುವ ಚೆರ್ವತ್ತೂರಿನ ಮೀನ್‌ಕಡವು ಹೊಳೆಗೆ ಬಿದ್ದು ಚೆರ್ವತ್ತೂರು ಅಚ್ಚಾಂತುರ್ತಿ ನಿವಾಸಿ ಪುದಿಯಪುರ ವಳಪ್ಪಿಲ್‌ ವೆಳ್ಳಚ್ಚಿ (81) ಮೃತಪಟ್ಟಿದ್ದಾರೆ.

ಬುಧವಾರ ಸಂಜೆ ಗುಡುಗು ಸಿಡಿಲಿನೊಂದಿಗೆ ಮಳೆಯಾಗಿತ್ತು. ಈ ಸಂದರ್ಭ ಮನೆಯ ಹಿತ್ತಿಲಿನಲ್ಲಿ ಇದ್ದ ಬಾಲನ್‌ ಅವರಿಗೆ ಸಿಡಿಲು ಬಡಿಯಿತು. ಕೂಡಲೇ ಕಾಂಞಂಗಾಡ್‌ನ‌ ಜಿಲ್ಲಾ ಆಸ್ಪತ್ರೆಗೆ ಸಾಗಿಸಿದರೂ ದಾರಿ ಮಧ್ಯೆ ಸಾವು ಸಂಭವಿಸಿತು.

ಮೀನ್‌ಕಡವಿನ ಸಹೋದರಿಯ ಮನೆಯಲ್ಲಿ ವಾಸಿಸುತ್ತಿದ್ದ ವೆಳ್ಳಚ್ಚಿ ಬುಧವಾರ ಮಧ್ಯಾಹ್ನ ನಾಪತ್ತೆಯಾಗಿದ್ದರು. ಶೋಧ ನಡೆಸಿದಾಗ ಹೊಳೆಯ ನೀರಿನಲ್ಲಿ ಶವ ಪತ್ತೆಯಾಯಿತು. ಮೃತದೇಹವನ್ನು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಜಿಲ್ಲೆಯಲ್ಲಿ ಬುಧವಾರ ಮಧ್ಯಾಹ್ನ 3 ಗಂಟೆಗೆ ಆರಂಭವಾದ ಬಿರುಸಿನ ಮಳೆ ರಾತ್ರಿಯ ವರೆಗೂ ಸುರಿದಿದೆ. ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರೋಡ್‌ನ‌ಲ್ಲಿ ಅಲ್ಲಲ್ಲಿ ಮಳೆ ನೀರು ನಿಂತು ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು. ದ್ವಿಚಕ್ರ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಯಿತು.

Advertisement

ಉರುಳಿದ ತೆಂಗಿನ ಮರ
ಆದೂರು ಪಳ್ಳದಲ್ಲಿ ಸುಂಟರ ಗಾಳಿಯಿಂದ ತೆಂಗಿನ ಮರ ವಿದ್ಯುತ್‌ ತಂತಿ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್‌ ಕಂಬ ಅಬ್ದುಲ್‌ ಖಾದರ್‌ ಅವರ ಅಂಗಡಿ ಮೇಲೆ ಬಿದ್ದಿದೆ. ವಿದ್ಯುತ್‌ ಸಂಪರ್ಕ ಮೊಟಕುಗೊಂಡ ಸಂದರ್ಭದಲ್ಲಿ ವಿದ್ಯುತ್‌ ಕಂಬ ಅಂಗಡಿಯ ಮೇಲೆ ಬಿದ್ದ ಕಾರಣದಿಂದ ಸಂಭವನೀಯ ದುರಂತ ತಪ್ಪಿದೆ. ಅಂಗಡಿಯ ಹೆಂಚು ಸಹಿತ ವಿವಿಧ ಸಾಮಗ್ರಿಗಳು ಹಾನಿಗೀಡಾಗಿವೆ.

ಎಲ್ಲೋ ಅಲರ್ಟ್‌
ಮೇ 25ರ ವರೆಗೆ ಬಿರುಸಿನ ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕೇಂದ್ರ ಹವಾಮಾನ ಇಲಾಖೆ ಕಾಸರಗೋಡು ಜಿಲ್ಲೆಯಲ್ಲಿ ಮೇ 23ರಂದು ಎಲ್ಲೋ ಅಲರ್ಟ್‌ ಘೋಷಿಸಿದೆ. 24 ಗಂಟೆಗಳಲ್ಲಿ 115.6ರಿಂದ 204.4 ಮಿ.ಮೀ. ತನಕ ಮಳೆಯಾಗುವ ಸಾಧ್ಯತೆಯಿದೆ. ಗುಡ್ಡಗಾಡು ಪ್ರದೇಶದಲ್ಲಿ ಗುಡ್ಡೆ ಕುಸಿಯುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜಾಗ್ರತೆ ವಹಿಸುವಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಮುಂದಿನ ಸೂಚನೆ ನೀಡುವ ತನಕ ಸಮುದ್ರದಲ್ಲಿ ಮೀನಗಾರಿಕೆಗೆ ತೆರಳದಂತೆ ತಿಳಿಸಲಾಗಿದೆ.

ಮುನ್ನೆಚ್ಚರಿಕೆ
ಮಳೆಯ ಸಂದರ್ಭ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆಯ ಹಿನ್ನೆಲೆಯಲ್ಲಿ ಜನರು ಜಾಗ್ರತೆ ವಹಿಸಬೇಕೆಂದು ಜಿಲ್ಲಾ ವೈದ್ಯಾಧಿಕಾರಿ ಡಾ| ಎ.ವಿ. ರಾಮದಾಸ್‌ ಮುನ್ನೆಚ್ಚರಿಕೆ ನೀಡಿದ್ದಾರೆ. ಜ್ವರದ ಲಕ್ಷಣ ಕಂಡುಬಂದಲ್ಲಿ ಸ್ವಯಂ ಚಿಕಿತ್ಸೆ ನಡೆಸದೆ ಹತ್ತಿರದ ಆಸ್ಪತ್ರೆ, ಆರೋಗ್ಯ ಕೇಂದ್ರಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ನೀಡಿದ್ದಾರೆ.

ಸಿಡಿಲು ಬಡಿದು ಮೂವರಿಗೆ,
ಮನೆ ಕುಸಿದು ಇಬ್ಬರಿಗೆ ಗಾಯ
ಕಾಸರಗೋಡು: ಸಿಡಿಲು ಬಡಿದು ಮನೆ ಹಾನಿಗೀಡಾಗಿ ಮೂವರು ಹಾಗೂ ಮನೆ ಕುಸಿದು ಬಿದ್ದು ಇಬ್ಬರು ಗಾಯಗೊಂಡಿದ್ದಾರೆ. ಮೂವರು ಅಪಾಯದಿಂದ ಪಾರಾಗಿದ್ದಾರೆ.

ಪೈವಳಿಕೆ ಪಂಚಾಯತ್‌ನ ಕಯ್ನಾರು ಬೊಳಂಪಾಡಿಯಲ್ಲಿ ಸಿಡಿಲು ಬಡಿದು ಹೊಸದಾಗಿ ನಿರ್ಮಿಸಿದ ಕಾಂಕ್ರೀಟ್‌ ಮನೆ ಹಾಗೂ ಅದರ ಪರಿಸರದಲ್ಲಿದ್ದ ಹೆಂಚಿನ ಛಾವಣಿಯ ಅಡುಗೆ ಮಾಡುವ ಕೊಠಡಿ ಹಾನಿಗೊಂಡಿದ್ದು ದಿ| ಸಂಜೀವ ಅವರ ಪತ್ನಿ ಯಮುನಾ (60), ಮಕ್ಕಳಾದ ಪ್ರಮೋದ್‌ (28) ಮತ್ತು ಸುಧೀರ್‌ (21) ಗಾಯಗೊಂಡಿದ್ದಾರೆ. ಅವರನ್ನು ಉಪ್ಪಳದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಮನೆಯ ಗೋಡೆ ಬಿರುಕು ಬಿಟ್ಟಿದ್ದು, ವಿದ್ಯುತ್‌ ವಯರಿಂಗ್‌ ಪೂರ್ತಿ ಉರಿದು ನಾಶವಾಗಿದೆ.

ಬಂದಡ್ಕ ಕಕ್ಕೆಚಾಲ್‌ನ ಮಾಧವಿ ಅವರ ಮನೆ ಗಾಳಿ ಮಳೆಗೆ ಕುಸಿದು ಬಿದ್ದು ಮಾಧವಿ ಮತ್ತು ಅವರ ಮೊಮ್ಮಗ ವಿಶಾಖ್‌ (9) ಗಾಯಗೊಂಡಿದ್ದಾರೆ. ಮೇಲ್ಛಾವಣಿ ಕುಸಿದಿದೆ. ಗಾಯಾಳುಗಳನ್ನು ಹೊಸದುರ್ಗದ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸರ್ವೀಸ್‌ ರಸ್ತೆ ಜಲಾವೃತ
ಮಳೆಯಿಂದಾಗಿ ಉಪ್ಪಳ ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್‌ ರೋಡ್‌ ಸಂಪೂರ್ಣ ಜಲಾವೃತಗೊಂಡಿದೆ. ರಸ್ತೆಯಲ್ಲಿ ಮಳೆ ನೀರು ಕಟ್ಟಿ ನಿಂತಿರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಮಳೆ ನೀರು
ಅಂಗಡಿಗೆ ನುಗ್ಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next