Advertisement

ಉ.ಕ ಸಂತ್ರಸ್ತರಿಗೆ ಇನ್ನೂ ಸಿಕ್ಕಿಲ್ಲ ಸೂರು!

06:00 AM Aug 21, 2018 | |

ಹುನಗುಂದ: ವರುಣನ ಆರ್ಭಟಕ್ಕೆ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಸಾವು, ನೋವಿಗೆ ರಾಜ್ಯದ ಜನ ಮಿಡಿದ ಪರಿ ಶ್ಲಾಘನಾರ್ಹ. ನೊಂದ ಜೀವಗಳಿಗೆ ಸರ್ಕಾರ ಅಭಯ ನೀಡಿ ಧೈರ್ಯ ತುಂಬಿದೆ. ಅಂತಹದ್ದೇ ಸ್ಥಿತಿ 2009ರಲ್ಲಿ ಉತ್ತರ ಕರ್ನಾಟಕದಲ್ಲೂ ಎದುರಾಗಿತ್ತು. ಬದುಕು ಛಿದ್ರವಾಗಿ ಜನ ಕಂಗಾಲಾಗಿದ್ದರು. ಅಂದು ನೀರಿನಲ್ಲಿ ಮುಳುಗಿದ ಊರುಗಳ ಜನರು ಈಗಲೂ ತಾತ್ಕಾಲಿಕ ಶೆಡ್‌ನ‌ಲ್ಲಿ ವಾಸವಾಗಿದ್ದಾರೆ!

Advertisement

2009ರಲ್ಲಿ ಮಹಾಮಳೆಗೆ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳು ಉಕ್ಕಿ ಹರಿದಿದ್ದವು. ನದಿಗಳ ರಭಸದ ಹರಿವಿನ ಜತೆಗೆ 2 ತಿಂಗಳ ಕಾಲ ಎಡಬಿಡದೆ ಸುರಿದ ಮಳೆಗೆ ಬಾಗಲಕೋಟೆ, ಗದಗ, ವಿಜಯಪುರ, ಬೆಳಗಾವಿ, ಯಾದಗಿರಿ, ರಾಯಚೂರು ಜಿಲ್ಲೆಗಳು ನಲುಗಿದ್ದವು. ನಾರಾಯಣಪುರ ಹಿನ್ನೀರಿನಿಂದ ಹುನಗುಂದ ತಾಲೂಕಿನ ಕೆಂಗಲಕಡಪಟ್ಟಿ-236, ಬಿಸನಾಳ-121, ಬಿಸನಾಳಕೊಪ್ಪ-183, ಕಮದತ್ತ-121, ಎಮ್ಮೆಟ್ಟಿ-259, ಖಜಗಲ್‌-126, ವರಗೋಡದಿನ್ನಿ-313, ಅಡಿಹಾಳ-407, ಅನಪಕಟ್ಟಿ-384, ಕೆಸರಪೆಂಟಿ-114, ಇದ್ದಲಗಿ-1136 ಸೇರಿ ಒಟ್ಟು 3,432 ಮನೆಗಳು ಪ್ರವಾಹಕ್ಕೆ ಸಿಲುಕಿ ನೆಲಸಮಗೊಂಡಿದ್ದವು. ಈ ಎಲ್ಲ ಮನೆಗಳ ಸಂತ್ರಸ್ತರಿಗೆ ಆಯಾ ಗ್ರಾಮಗಳ ಪಕ್ಕದಲ್ಲೇ ಜಿಲ್ಲಾಡಳಿತ ತಾತ್ಕಾಲಿಕ ಶೆಡ್‌ ನಿರ್ಮಿಸಿ ಆಶ್ರಯ ಒದಗಿಸಿತ್ತು. ಆದರೆ, ಸರ್ಕಾರದ ಗೊಂದಲದ ನೀತಿಯಿಂದ ಇಂದಿಗೂ ವಾಸಿಸಲು ಶಾಶ್ವತ ಮನೆ ಕಲ್ಪಿಸಿಲ್ಲ. ತಾತ್ಕಾಲಿಕ ಶೆಡ್‌ನ‌ಲ್ಲಿ ಕಾಯಂ ವಾಸವಾಗಿದ್ದಾರೆ.

ಭೂಸ್ವಾಧೀನದಲ್ಲೇ ಕಾಲ ಕಳೆದರು:
ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕೈಗೊಳ್ಳಲು ಕಂದಾಯ ಇಲಾಖೆಗೆ ಸೂಚಿಸಿತ್ತು. 2009ರಿಂದ 2013ರವರೆಗೆ ಕಂದಾಯ ಇಲಾಖೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ತಾತ್ಕಾಲಿಕ ಶೆಡ್‌ ನಿರ್ಮಿಸಿದ ಜಾಗೆಯಲ್ಲಿ ಸಂತ್ರಸ್ತರಿಗೆ ಮನೆ ನಿರ್ಮಿಸಿ ಕೊಡಲು ಭೂಸ್ವಾಧೀನ ಪ್ರಕ್ರಿಯೆಯಲ್ಲೇ ಕಾಲ ಕಳೆದಿತ್ತು.

ಹಲವು ಹೋರಾಟ, ಸಂತ್ರಸ್ತರ ಒತ್ತಾಯದ ಬಳಿಕ ಸರ್ಕಾರ ಈ ಗ್ರಾಮಗಳ ಸಂತ್ರಸ್ತರಿಗೆ ಶಾಶ್ವತ ಪುನರ್ವಸತಿ ಕಲ್ಪಿಸುವ ಹೊಣೆಯನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ಪುನರ್ವಸತಿ ಹಾಗೂ ಪುನರ್‌ ನಿರ್ಮಾಣ ಕಚೇರಿಗೆ ವಹಿಸಿತು. ಆಗ ಈ ಇಲಾಖೆಯಿಂದ ಮತ್ತೆ ಮೊದಲಿನಿಂದ ಕೆಲಸ ಆರಂಭಿಸಿತು. ಹೀಗಾಗಿ 8 ವರ್ಷ ಕಳೆದರೂ ಅವರೆಲ್ಲ ಸರ್ಕಾರದ ಸೂರು ಕಾಣದೇ ಶೆಡ್‌ನ‌ಲ್ಲಿ ವಾಸಿಸುವ ಪರಿಸ್ಥಿತಿ ಬಂದೋದಗಿದೆ. ಸದ್ಯ ಕೊಡಗು ಜಿಲ್ಲೆಯಲ್ಲಿನ ಸ್ಥಿತಿ ಕಂಡು 8 ವರ್ಷಗಳ ಹಿಂದಿನ ಕಹಿ ಅನುಭವ ನೆನಪಿಗೆ ಬರುತ್ತಿದೆ. ಸೂರು ಕಲ್ಪಿಸುವುದಾಗಿ ಹೇಳಿದ್ದ ಸರ್ಕಾರ ಇಂದಿಗೂ ಶೆಡ್‌ನ‌ಲ್ಲೇ ಬಿಟ್ಟಿದ್ದಕ್ಕೆ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭೂಸ್ವಾಧೀನ ಪ್ರಕ್ರಿಯೆಗೆ ಕೆಲವರು ನ್ಯಾಯಾಲಯಕ್ಕೆ ಹೋಗಿ ತಡೆಯಾಜ್ಞೆ ತಂದಿದ್ದರಿಂದ ತಡವಾಗಿದೆ. ಸದ್ಯ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ನಿವೇಶನ ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ.
– ಪಿ.ಎ. ಮೇಘಣ್ಣವರ, ಆಯುಕ್ತರು, ಯುಕೆಪಿ

Advertisement

– ಮಲ್ಲಿಕಾರ್ಜುನ ಬಂಡರಗಲ್ಲ

Advertisement

Udayavani is now on Telegram. Click here to join our channel and stay updated with the latest news.

Next