ಬೆಂಗಳೂರು: ದೆಹಲಿಯಲ್ಲಿ ಶಂಕಿತ ಉಗ್ರರ ಬಂಧನ ಹಾಗೂ ಇತ್ತೀಚೆಗೆ ಕೆಲ ಸಂಘಟನೆಗಳ ನಿಷೇಧ ಬೆನ್ನಲ್ಲೇ ಗಣರಾಜ್ಯೋತ್ಸವ ಸಂದರ್ಭದಲ್ಲಿ ಅಹಿತಕರ ಘಟನೆ ನಡೆಯುವ ಸಾಧ್ಯತೆ ಮೇರೆಗೆ ಕೇಂದ್ರ ಗುಪ್ತಚರ ಇಲಾಖೆಗಳ ಮಾಹಿತಿ ಮೇರೆಗೆ ಪೊಲೀಸರು ಬೆಂಗಳೂರು ಸೇರಿ ಎಲ್ಲೆಡೆ ಬಿಗಿ ಬಂದೋಬಸ್ತ್ ಹಾಕಿದ್ದಾರೆ.
ಈ ಬೆನ್ನಲ್ಲೇ ಬೆಂಗಳೂರು ಸೇರಿ ರಾಜ್ಯದ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಸೇರಿ ಜನನಿಬಿಡ ಸ್ಥಳಗಳಲ್ಲಿ ಹಾಗೂ ಸೂಕ್ಷ್ಮ ಪ್ರದೇಶಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಪೊಲೀಸ್ ಸಿಬ್ಬಂದಿ ಮತ್ತು ಶ್ವಾನದಳ, ಬಾಂಬ್ ಪತ್ತೆ ದಳ ಪರಿಶೀಲನೆ ನಡೆಸುತ್ತಿವೆ. ಹೋಟೆಲ್ ಗಳು ಹಾಗೂ ಲಾಡ್ಜ್ಗಳಲ್ಲಿ ತಂಗಿರುವ ಅನುಮಾನಾಸ್ಪದ ವ್ಯಕ್ತಿಗಳು ಹಾಗೂ ಪ್ರವಾಸಿಗರ ಮಾಹಿತಿ ಕಲೆ ಸಂಗ್ರಹಿಸಲಾಗುತ್ತಿವೆ. ಅನುಮಾನಾಸ್ಪದ ವಸ್ತುಗಳು ಹಾಗೂ ಶಂಕಿತ ವ್ಯಕ್ತಿಗಳ ಬಗ್ಗೆ ಮಾಹಿತಿ ಸಿಕ್ಕರೆ ಕೂಡಲೇ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕೋರಿದ್ದಾರೆ.
ನಗರದಲ್ಲಿ ತೀವ್ರ ಕಟ್ಟೆಚ್ಚರ: ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸೂಚನೆ ಮೇರೆಗೆ ಜಂಟಿ ಪೊಲೀಸ್ ಆಯುಕ್ತ ಡಾ.ಶರಣಪ್ಪ ನೇತೃತ್ವದ ವಿಶೇಷ ತಂಡಗಳು ಶನಿವಾರ ನಗರದ ಎಲ್ಲೆಡೆ ಪರಿಶೀಲಿಸಿದೆ. ಡಾ.ಶರಣಪ್ಪ ನೇತೃತ್ವದಲ್ಲಿ 6 ಡಿಸಿಪಿಗಳು, 10 ಎಸಿಪಿಗಳು, 25 ಪೊಲೀಸ್ ಇನ್ಸ್‌ಪೆಕ್ಟರ್‌ಗಳು ಹಾಗೂ 220 ಪೊಲೀಸರು ಮತ್ತು ಶ್ವಾನದಳ, ಬಾಂಬ್ ಪತ್ತೆ ದಳಗಳು ಮೆಜೆಸ್ಟಿಕ್ ಬಸ್ ನಿಲ್ದಾಣ, ಸಿಟಿ ರೈಲ್ವೆ ನಿಲ್ದಾಣ, ಯಶವಂತಪುರ ರೈಲ್ವೆ ನಿಲ್ದಾಣ, ಶಾಂತಿನಗರ ಬಸ್ ನಿಲ್ದಾಣ, ಜಯನಗರ ಬಸ್ ಟರ್ಮಿನಲ್, ಪ್ರಮುಖ ಮೆಟ್ರೋ ನಿಲ್ದಾಣಗಳು ಹಾಗೂ ನಗರದಲ್ಲಿರುವ ವಿವಿಧ ಹೋಟೆಲ್ ಮತ್ತು ಲಾಡ್ಜ್ ಗಳಲ್ಲಿ ತಪಾಸಣೆ ನಡೆಸಲಾಗಿದೆ.
ಇದನ್ನೂ ಓದಿ:ರಾಯ್ಪುರದಲ್ಲಿ ಹೀನಾಯ ಸೋಲು: ಐಸಿಸಿ ರ್ಯಾಂಕಿಂಗ್ ನಲ್ಲಿ ಮೊದಲ ಸ್ಥಾನ ಕಳೆದುಕೊಂಡ ಕಿವೀಸ್
ಗಣರಾಜ್ಯೋತ್ಸವದವರೆಗೂ ನಿತ್ಯ ಕ್ಷಿಪ್ರ ಕಾರ್ಯಾಚರಣೆ ನಡೆಸಲಾಗುವುದು. ನಗರಕ್ಕೆ ಬರುವ ಎಲ್ಲಾ ರಸ್ತೆಗಳಲ್ಲಿ ರಾತ್ರಿ ವೇಳೆ ಹೆಚ್ಚು ಪೊಲೀಸರನ್ನು ನಿಯೋಜಿಸುವುದು ಎಂದು ಪೊಲೀಸರು ಮಾಹಿತಿ ನೀಡಿದರು.