ಉಡುಪಿ: ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಎರಡು ಬಾರಿ ದೊಡ್ಡ ಮಟ್ಟದಲ್ಲಿ ಮಳೆಹಾನಿ ಸಂಭವಿಸಿದೆ. ಒಂದು ವಾರದ ಹಿಂದೆ ಮತ್ತು ಜೂನ್ ತಿಂಗಳಲ್ಲಿ ನಡೆದ ಭಾರೀ ಪ್ರಮಾಣದ ಮಳೆಗೆ ಜಿಲ್ಲೆಯಲ್ಲಿ ಒಟ್ಟು 2.93 ಕೋ.ರೂ. ಮೆಸ್ಕಾಂಗೆ, 90 ಲ.ರೂ. ತೋಟಗಾರಿಕೆ ಬೆಳೆ, 34 ಲ.ರೂ. ಕೃಷಿ ಬೆಳೆ ನಷ್ಟವಾಗಿದೆ. ಮೆಸ್ಕಾಂ ನಷ್ಟದಲ್ಲಿ ಉಡುಪಿ ವಿಭಾಗದ (ಉಡುಪಿ ಮತ್ತು ಕಾರ್ಕಳ ತಾಲೂಕು) ನಷ್ಟ 2.04 ಕೋ.ರೂ., ಕುಂದಾಪುರ ವಿಭಾಗದ (ಕುಂದಾಪುರ ತಾಲೂಕು) 89.4 ಲ.ರೂ. ಉಡುಪಿ ವಿಭಾಗದಲ್ಲಿ 687 ಮತ್ತು ಕುಂದಾಪುರ ವಿಭಾಗದಲ್ಲಿ 408 ಗ್ರಾಮಗಳಲ್ಲಿ ಹಾನಿ ಸಂಭವಿಸಿದೆ. ಜಿಲ್ಲೆಯಲ್ಲಿ ಒಟ್ಟು 2,485 ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ಇದರಲ್ಲಿ ಉಡುಪಿ ವಿಭಾಗದಲ್ಲಿ 1,674, ಕುಂದಾಪುರ ವಿಭಾಗದಲ್ಲಿ 811 ಕಂಬಗಳು ಇವೆ. ಜಿಲ್ಲೆಯಲ್ಲಿ ಒಟ್ಟು 345 ಟ್ರಾನ್ಸ್‌ಫಾರ್ಮರ್ ಗಳು ಹಾಳಾಗಿವೆ. ಇದರಲ್ಲಿ ಉಡುಪಿ ವಿಭಾಗದಲ್ಲಿ 246, ಕುಂದಾಪುರ ವಿಭಾಗದಲ್ಲಿ 99 ಟ್ರಾನ್ಸ್‌ಫಾರ್ಮರ್ ಗಳು ಇವೆ.
ಒಟ್ಟು 54.32 ಕಿ.ಮೀ. ಮಾರ್ಗಗಳು (ಉಡುಪಿ ವಿಭಾಗ 38.72 ಕಿ.ಮೀ., ಕುಂದಾಪುರ ವಿಭಾಗ 15.59 ಕಿ.ಮೀ.) ಹಾನಿಗೊಳಗಾಗಿದ್ದು ಇವುಗಳನ್ನೂ ಸರಿಪಡಿಸಲಾಗಿದೆ. ಹಾನಿಗೊಳಗಾದ ಕಂಬಗಳಲ್ಲಿ ಐದು, ಟ್ರಾನ್ಸ್‌ಫಾರ್ಮರ್ ಗಳಲ್ಲಿ ಎರಡನ್ನು ಹೊರತುಪಡಿಸಿ ಉಳಿದೆಲ್ಲವನ್ನೂ ದುರಸ್ತಿಪಡಿಸಲಾಗಿದೆ. ಹಿಂದಿನ ವರ್ಷದಲ್ಲಿ ಆದ ಒಟ್ಟು ಹಾನಿ 3.81 ಕೋ.ರೂ. ಇದಕ್ಕೆ ಹೋಲಿಸಿದರೆ ಈ ವರ್ಷ ಇದುವರೆಗೆ ಆದ ಹಾನಿ ಜಾಸ್ತಿ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತೋಟಗಾರಿಕಾ ಬೆಳೆಗಳನ್ನು ಬೆಳೆಸಿದ ಒಟ್ಟು 127 ರೈತರ 18.28 ಹೆಕ್ಟೇರ್ ಪ್ರದೇಶಕ್ಕೆ ಹಾನಿಯಾಗಿದೆ. 89.99 ಲಕ್ಷ ರೂ. ನಷ್ಟವಾಗಿದ್ದು 4.19 ಲ.ರೂ. ಪರಿಹಾರ ಪಾವತಿಸಲಾಗಿದೆ. ಉಡುಪಿ ತಾಲೂಕಿನಲ್ಲಿ ಮೂರು ರೈತರ 0.20 ಹೆ., ಕುಂದಾಪುರ ತಾಲೂಕಿನಲ್ಲಿ 72 ಕೃಷಿಕರ 9.74 ಹೆ., ಕಾರ್ಕಳ ತಾಲೂಕಿನ 52 ರೈತರ 8.30 ಹೆ. ಭೂಮಿಯ ತೋಟಗಾರಿಕಾ ಬೆಳೆಗಳಿಗೆ ಹಾನಿಯಾಗಿದೆ. ಅತಿ ಹೆಚ್ಚು ಹಾನಿಗೊಳಗಾದ ಬೆಳೆ ಅಡಿಕೆ. ಒಟ್ಟು 13 ಹೆ. ಅಡಿಕೆ ಬೆಳೆ ನಾಶವಾಗಿದೆ. ಅನಂತರ ತೆಂಗು, ಬಾಳೆ, ಗೇರು, ಹಲಸು, ಮಾವು, ಕಾಳು ಮೆಣಸಿನ ಬೆಳೆ ಹಾನಿಗೊಂಡಿವೆ.
ಉಡುಪಿ ಜಿಲ್ಲೆಯಲ್ಲಿ 103 ಕೃಷಿಕರ 49 ಹೆಕ್ಟೇರ್ ಪ್ರದೇಶದ ಭತ್ತದ ಕೃಷಿಗೆ ಹಾನಿಯಾಗಿದೆ. ಉಡುಪಿ ತಾಲೂಕಿನ ಐವರು ಕೃಷಿಕರ 27.6 ಹೆ., ಕುಂದಾಪುರ ತಾಲೂಕಿನ 21 ಕೃಷಿಕರ 12 ಹೆ., ಕಾರ್ಕಳ ತಾಲೂಕಿನ 25 ಕೃಷಿಕರ 10 ಹೆ. ಭತ್ತದ ಬೆಳೆ ನಷ್ಟವಾಗಿದೆ. ಬೆಂಬಲ ಬೆಲೆ ಪ್ರಕಾರ ಆದ ಬೆಳೆ ನಷ್ಟ 34.30 ಲ.ರೂ., ಸರಕಾರಿ ನಿಯಮದ ಪ್ರಕಾರ ಹೆಕ್ಟೇರ್ ಗೆ 6,800 ರೂ.ನಂತೆ ಒಟ್ಟು 3.33 ಲ.ರೂ. ಪರಿಹಾರ ಧನ ವಿತರಿಸಲಾಗುತ್ತದೆ.