Advertisement
ಕೊಟ್ಟಿಗೆಹಾರ ಬೆಟ್ಟಗುಡ್ಡಗಳ ಮಧ್ಯೆ ಇರುವ ಪುಟ್ಟ ಹಾಗೂ ಸುಂದರ ಗ್ರಾಮ. ಪ್ರವಾಸಿಗರನ್ನ ಮಂತ್ರಮುಗ್ಧರನ್ನಾಗಿಸೋ ಚಾರ್ಮಾಡಿಘಾಟಿಗೆ ಅಂಟಿಕೊಂಡಂತೆಯೇ ಇರುವ ಊರು. ಚಾರ್ಮಾಡಿ ಘಾಟಿಯಲ್ಲಿ ಬೀಸುವ ಗಾಳಿ ಶಬ್ಧ ಕೂಡ ಈ ಊರಲ್ಲಿ ಕೇಳಿಸುತ್ತದೆ. ಜೊತೆಗೆ, ಮಳೆಗಾಲದಲ್ಲಿ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ. ಮಳೆ ಜೊತೆ ವರ್ಷಪೂರ್ತಿ ತಣ್ಣನೆಯ ಗಾಳಿ ಬೀಸುವ ಸ್ಥಳವಾಗಿದ್ದು, ವರ್ಷದ ಏಳೆಂಟು ತಿಂಗಳು ಮಂಜಿನಿಂದಲೇ ಕೂಡಿರುವ ಊರು. ಕರ್ನಾಟಕದ ಕಾಶ್ಮೀರ ಅಂದರೂ ತಪ್ಪಿಲ್ಲ. ಅದೇ ರೀತಿ, ಇಂದು ಕೂಡ ಕೊಟ್ಟಿಗೆಹಾರದಲ್ಲಿ ಭಾರೀ ಮಂಜು ಕವಿದಿದ್ದು ವಾಹನ ಸವಾರರು ಪರದಾಡುವಂತಾಗಿದೆ.
Related Articles
Advertisement
ಫಾಗ್ ಲೈಟ್ ಹಾಗೂ ಹೆಡ್‍ಲೈಟ್ ಹಾಕಿಕೊಂಡೇ ಸಾಗುವಂತಹಾ ಪರಿಸ್ಥಿತಿ ನಿರ್ಮಾಣವಾಗಿದೆ. ಕೊಟ್ಟಿಗೆಹಾರದಿಂದ ಧರ್ಮಸ್ಥಳ ಹಾಗೂ ಹೊರನಾಡಿನ ಎರಡು ಮಾರ್ಗಗಳೂ ಹಾವು-ಬಳುಕಿನ ಮೈಕಟ್ಟಿನ ತಿರುವುಗಳ ರಸ್ತೆಯಾಗಿದ್ದು ಈ ಮಂಜಿನ ಮಧ್ಯೆ ತಿರುವುಗಳಲ್ಲಿ ಹೆಡ್‍ಲೈಟ್-ಫಾಗ್ ಲೈಟ್ ಹಾಕಿಕೊಂಡು ವಾಹನ ಚಲಾಯಿಸೋದಕ್ಕೂ ಚಾಲಕರು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯಲ್ಲಿ ಓಡಾಡುವ ವಾಹನಗಳಲ್ಲಿ ಉರಿಯುವ ದೀಪದ ಬೆಳಕಿಗೆ ಮಂಜು ಸೇರಿ ಮತ್ತೊಂದು ಲೋಕವೇ ಸೃಷ್ಟಿಯಾಗಿದೆ. ಆದರೆ, ಪ್ರವಾಸಿಗರು ಈ ಕಷ್ಟ-ನಷ್ಟದ ಮಧ್ಯೆಯೂ ಮಂಜಿನಿಂದ ಮುಳುಗಿರೋ ಕೊಟ್ಟಿಗೆಹಾರ ಹಾಗೂ ಮರಗಿಡಗಳ ಮೇಲೆ ಹಾಲ್ನೊರೆಯಂತೆ ಕೂತಿರೋ ಈ ಸುಂದರ ವಾತಾವರಣವನ್ನ ಕಂಡು ಇದು ಕರ್ನಾಟಕದ ಕಾಶ್ಮೀರ ಎಂದು ಬಣ್ಣಿಸಿದ್ದಾರೆ.