Advertisement

ಇ ಪಾಸ್‌ಗೆ ಜಿಲ್ಲೆಯಾದ್ಯಂತ ಭಾರೀ ಬೇಡಿಕೆ

09:49 PM May 04, 2020 | Sriram |

ಉಡುಪಿ/ಕುಂದಾಪುರ/ ಕಾಪು/ ಬೈಂದೂರು/ಕಾರ್ಕಳ: ಅಂತರ್‌ ಜಿಲ್ಲೆ ಪ್ರಯಾಣಕ್ಕೆ ಒನ್‌ ಟೈಮ್‌ ಇ ಪಾಸ್‌ ನೀಡಲಾಗುತ್ತಿದ್ದು, ತಹಶೀಲ್ದಾರ್‌ ಕಚೇರಿಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಅರ್ಜಿಗಳನ್ನು ಸಲ್ಲಿಸುತ್ತಿದ್ದಾರೆ. ಇದು ಒನ್‌ಟೈಂ ಪಾಸ್‌ ಆಗಿದ್ದು, ಹೋದವರು ವಾಪಸ್‌ ಬರಲು ಅವಕಾಶ ವಿರುವುದಿಲ್ಲ. ಈ ಕಾರಣಕ್ಕೆ ಕೆಲವೆಡೆ ಪಾಸ್‌ಗಾಗಿ ಬಂದವರು ವಾಪಸ್‌ ಹೋದ ಉದಾಹರಣೆಗಳೂ ವರದಿಯಾಗಿವೆ.

Advertisement

150-200 ಅರ್ಜಿ
ಉಡುಪಿಯಲ್ಲಿ 150-200 ಅರ್ಜಿ ಗಳು ಬರುತ್ತಿವೆ. ಆರೋಗ್ಯ ಕಾರಣ, ಆಕಸ್ಮಿಕವಾಗಿ ಬಂಧಿಯಾಗಿರುವುದು, ಬಾಣಂತಿಯರು, ಔದ್ಯೋಗಿಕವಾಗಿ ಅನಿವಾರ್ಯವಾಗಿ ಹೋಗಬೇಕಿರುವ ಸಂದರ್ಭಗಳಲ್ಲಿ ಅನುಕೂಲಕ್ಕಾಗಿ ಇ ಪಾಸ್‌ ಯೋಜನೆಯನ್ನು ಜಾರಿಗೊಳಿಸಿದೆ. ಈಗ ಜನರು ಬೇರೆ ಬೇರೆ ಗಂಭೀರವಲ್ಲದ ಕಾರಣಗಳನ್ನೂ ಮುಂದೊಡ್ಡಿ ಅರ್ಜಿ ಸಲ್ಲಿಸುತ್ತಿದ್ದಾರೆ.

ವಿಚಾರಣೆ, ಶಿಫಾರಸು
ಅರ್ಜಿಗಳು ಸಾಕಷ್ಟು ಬರುತ್ತಿದ್ದರೂ ಸೂಕ್ತ ವಿಚಾರಣೆ ನಡೆಸಿ ದಿನಕ್ಕೆ 35-40 ಅರ್ಜಿಗಳಿಗೆ ಅನುಮತಿ ಕೊಡಲು ಜಿಲ್ಲಾಧಿ ಕಾರಿ ಕಚೇರಿಗೆ ಶಿಫಾರಸು ಮಾಡುತ್ತಿದ್ದೇವೆ ಎಂದು ತಹಶೀಲ್ದಾರ್‌ ಪ್ರದೀಪ್‌ ಕುರ್ಡೆಕರ್‌ ತಿಳಿಸಿದ್ದಾರೆ.

ಪಾಸ್‌, ವೈದ್ಯಕೀಯ ಪ್ರಮಾಣಪತ್ರಕ್ಕೆ ಜನ
ಕುಂದಾಪುರದಲ್ಲೂ ಇ-ಪಾಸ್‌ಗಾಗಿ ಹಲವರು ಸರತಿಯಲ್ಲಿ ನಿಂತಿದ್ದರು. ಇದರೊಂದಿಗೆ ತಾಲೂಕು ಸರಕಾರಿ ಆಸ್ಪತ್ರೆ ಯಲ್ಲಿ ವೈದ್ಯಕೀಯ ಪ್ರಮಾಣ ಪತ್ರಕ್ಕಾಗಿ ಸರದಿ ಸಾಲು ಕಂಡು ಬಂದಿತ್ತು.

ತಾಲೂಕು ಆಸ್ಪತ್ರೆ ಅಷ್ಟೇ ಅಲ್ಲದೇ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಜನ ಪ್ರಮಾಣಪತ್ರಕ್ಕಾಗಿ ಆಗಮಿಸುತ್ತಿದ್ದರು. ಒಮ್ಮೆ ಗಡಿ ದಾಟಿ ಹೋದವರು ಮರಳಿ ಈ ಕಡೆ ಪ್ರವೇಶಿಸುವಂತಿಲ್ಲ. ಇದನ್ನು ಕಟ್ಟುನಿಟ್ಟಾಗಿ ಪಾಲಿಸುವುದಾಗಿ ಮತ್ತು ಪರಿಶೀಲಿಸಿಯೇ ಪಾಸ್‌ ವಿತರಿಸುವುದಾಗಿ ಸಹಾಯಕ ಕಮಿಷನರ್‌ ರಾಜು ತಿಳಿಸಿದ್ದಾರೆ.

Advertisement

ಬೈಂದೂರಿನಲ್ಲೂ ಸರತಿ ಸಾಲು
ಬೈಂದೂರು: ಇಲ್ಲಿನ ತಹಶೀಲ್ದಾರ್‌ ಕಚೇರಿಯಲ್ಲೂ ಸರತಿ ಸಾಲು ಇತ್ತು. ಬೆಂಗಳೂರಿಗೆ ತೆರಳುವವರು ಪಾಸ್‌ಗಾಗಿ ನಿಂತಿದ್ದರು. ಒನ್‌ ಟೈಮ್‌ ಪಾಸ್‌ ಮಾತ್ರ ಆಗಿದ್ದು, ವಾಪಸ್‌ ಬರಲು ಅನುಮತಿ ಇಲ್ಲ ಎಂಬ ಕಾರಣಕ್ಕೆ ಪಾಸ್‌ಗೆ ಬಂದಿದ್ದವರು ಹಲವರು ವಾಪಸಾಗಿದ್ದಾರೆ.

120 ಪಾಸ್‌ ವಿತರಣೆ
ಕಾಪು: ತಾಲೂಕಿನಲ್ಲಿ 120 ಪಾಸ್‌ಗಳ ವಿತರಣೆಯಾಗಿದೆ. ಸೋಮವಾರ 40ಕ್ಕೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ. ಅತಿ ಅಗತ್ಯವಿದ್ದವರು ಮಾತ್ರ ಇ ಪಾಸ್‌ಗೆ ಅರ್ಜಿ ಸಲ್ಲಿಸಲು ತಹಶೀಲ್ದಾರ್‌ ಮಹಮ್ಮದ್‌ ಇಸಾಕ್‌ ಹೇಳಿದ್ದಾರೆ.

ಕಾರ್ಕಳ: 71 ಅರ್ಜಿ
ಕಾರ್ಕಳ: ಇ-ಪಾಸ್‌ ಪಡೆಯುವ ಸಲುವಾಗಿ ಕಾರ್ಕಳ ತಾಲೂಕು ಕಚೇರಿಗೆ ಸೋಮವಾರ 71 ಅರ್ಜಿಗಳು ಬಂದಿವೆ.

ಪಾಸ್‌ಗೆ ಬೇಕಾದ್ದೇನು?
ಫೋಟೊ, ಆಧಾರ್‌ ಕಾರ್ಡ್‌ ಜೆರಾಕ್ಸ್‌ ಪ್ರತಿ, ಮೊಬೈಲ್‌ ನಂಬರ್‌, ಮನೆಯ ವಿಳಾಸ, ಎಲ್ಲಿಂದ ಹಾಗೂ ಎಲ್ಲಿಗೆ ಹೋಗುವುದು, ಪ್ರಯಾಣಿಸುವ ನಿರ್ದಿಷ್ಟ ಉದ್ದೇಶ, ಪ್ರಯಾಣಿಸುವವರಿಗೆ ಕೋವಿಡ್‌ 19 ಸೋಂಕು ಇಲ್ಲ ಎಂದು ವೈದ್ಯಕೀಯ ಪ್ರಮಾಣ ಪತ್ರ ಮತ್ತು ವಾಹನದ ದಾಖಲಾತಿ ಮತ್ತಿತರ ಮಾಹಿತಿ ಇತ್ಯಾದಿ ವಿವರಗಳನ್ನು ಅರ್ಜಿಯಲ್ಲಿ ನಮೂದಿಸಿ ತಹಶೀಲ್ದಾರ್‌ ಕಚೇರಿಗೆ ಸಲ್ಲಿಸಬೇಕಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next