Advertisement

Kaup: ನೆರೆಯಿಂದ ಭತ್ತದ ಕೃಷಿಗೆ ಭಾರೀ ಹಾನಿ

04:38 PM Aug 11, 2024 | Team Udayavani |

ಕಾಪು: ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಜತೆಗೆ ಎರಡೆರಡು ಸಲ ಉಂಟಾದ ನೆರೆ ಉಂಟಾಗಿದೆ. ಇದರಿಂದಾಗಿ ಕಾಪು ತಾಲೂಕಿನ ಭತ್ತದ ಗದ್ದೆಗಳಲ್ಲಿ ನೀರು ನಿಂತು ಅಪಾರ ಬೆಳೆ ಹಾನಿಯುಂಟಾಗಿದೆ. ಭತ್ತದ ಕೃಷಿ ಕೊಳೆಯಲಾರಂಭಿಸಿದೆ. ಈ ಹಾನಿಯ ಸಮೀಕ್ಷೆ ಇನ್ನೂ ಕೂಡಾ ಪೂರ್ಣಗೊಂಡಿಲ್ಲ.

Advertisement

ಕಾಪು ತಾಲೂಕಿನ ಇನ್ನಂಜೆ, ಪೊಲಿಪು, ಉಳಿಯಾರಗೋಳಿ, ಕೈಪುಂಜಾಲು, ಪಾಂಗಾಳ, ಮಲ್ಲಾರು, ಮೂಳೂರು, ಬೆಳಪು, ಮಜೂರು, ಕರಂದಾಡಿ, ಕುಂಜೂರು, ಅದಮಾರು, ಎರ್ಮಾಳು, ಪಾದೆಬೆಟ್ಟು, ನಂದಿಕೂರು, ಹೆಜಮಾಡಿ, ಕುತ್ಯಾರು, ಎಲ್ಲೂರು, ಕಳತ್ತೂರು, ಕುರ್ಕಾಲು, ಸುಭಾಸ್‌ನಗರ, ಶಿರ್ವ, ಮಣಿಪುರ, ಬೆಳ್ಳೆ, ಕಟ್ಟಿಂಗೇರಿ ಸಹಿತ ವಿವಿಧೆಡೆ ಅಪಾರ ಪ್ರಮಾಣದ ಭತ್ತದ ಕೃಷಿ ಹಾನಿ ಅಂದಾಜಿಸಲಾಗಿದೆ.

ಕಾಪು ತಾಲೂಕಿನಲ್ಲಿ ಈ ಬಾರಿ 2,800 ಹೆಕ್ಟೇರ್‌ನಷ್ಟು ಭತ್ತ ಬೆಳೆಯಲಾಗುತ್ತಿದೆ. ಆದರೆ ಜೂನ್‌, ಜುಲೈ ತಿಂಗಳಲ್ಲಿ ಭಾರೀ ಮಳೆ ಸುರಿದು ಎರಡೆರಡು ಬಾರಿ ನೆರೆ ಉಂಟಾಗಿದ್ದು ಕೆಲವೆಡೆ ಕೃಷಿಕರು ಎರಡೆರಡು ಬಾರಿ ಬಿತ್ತನೆ ನಡೆಸಿದ್ದಾರೆ. ನೇಜಿ ನಾಟಿ ಮಾಡಿದ್ದಾರೆ. ಅದು ಕೂಡ ಸ್ಥಳೀಯ ಕೂಲಿ ಕಾರ್ಮಿಕರ ಕೊರತೆಯಿಂದಾಗಿ ಯಂತ್ರದ ನಾಟಿ ಮತ್ತು ಹೊರ ರಾಜ್ಯಗಳ ಭತ್ತದ ಕೃಷಿ ಕೂಲಿ ಕಾರ್ಮಿಕರ ತಂಡವನ್ನು ಕರೆಯಿಸಿಕೊಂಡು ಭತ್ತದ ಕೃಷಿ ನಡೆಸಿದ್ದಾರೆ. ಆದರೆ ದುರಾದೃಷ್ಟವಶಾತ್‌ ಎರಡು ಸಲದ ಭತ್ತದ ಕೃಷಿಯೂ ಹಾನಿಗೀಡಾಗಿರುವುದು ಕೃಷಿಕರ ವೇದನೆ ಹೆಚ್ಚಲು ಮುಖ್ಯ ಕಾರಣವಾಗಿದೆ. ಮಳೆ ನಿಂತರೂ ನೆರೆ ತಗ್ಗದೆ ಭತ್ತದ ನೇಜಿ ಸಂಪೂರ್ಣವಾಗಿ ಕೊಳೆತು ಹೋಗಿದೆ.

ಮಾಹಿತಿ ನೀಡಿದರೂ ಯಾರೂ ಪರಿಶೀಲನೆಗೆ ಬಂದಿಲ್ಲ

ಕುಂಜೂರು ಬೈಲ್‌ನಲ್ಲಿ ನೂರಾರು ಎಕರೆ ಕೃಷಿ ಗದ್ದೆಗಳಿವೆ. ವಾರುಣೀ ನದಿ ತಟದಲ್ಲಿರುವುದರಿಂದ ಪ್ರತೀ ವರ್ಷವೂ ಮಳೆಗಾಲದಲ್ಲಿ ಭತ್ತದ ಗದ್ದೆಗಳು ನೆರೆ ನೀರಿನಿಂದ ಮುಳುಗುತ್ತವೆ. ಆದರೆ ಈ ಬಾರಿ ಮೂರು ಸಲ ನೆರೆ ಬಂದಿದೆ. ಈ ಬಗ್ಗೆ ಮಾಹಿತಿ ನೀಡಿದರೂ ಯಾರೂ ಪರಿಶೀಲನೆಗೆ ಬಂದಿಲ್ಲ. ಇದರಿಂದಾಗಿ ಸರಕಾರ ನೀಡುವ ಕನಿಷ್ಠ ಪರಿಹಾರವನ್ನು ಪಡೆದುಕೊಳ್ಳಲೂ ನಮಗೆ ತೊಂದರೆಯುಂಟಾಗಿದೆ.

Advertisement

-ಶಾಮ ದೇವಾಡಿಗ, ಭತ್ತದ ಕೃಷಿಕ, ಕುಂಜೂರು

ವಿಎಗಳ ಬಳಿ ಬೆಳೆ ಹಾನಿ

ಅರ್ಜಿ ಸಲ್ಲಿಸುವಂತೆ ಸೂಚನೆ ಹಲವಾರು ಕಡೆಯಿಂದ ದೂರುಗಳು ಬಂದಿವೆ. ಬೆಳೆ ಹಾನಿಗೊಳಗಾದವರಿಗೆ ವಿಎಗಳ ಬಳಿ ಬೆಳೆ ಹಾನಿ ಅರ್ಜಿ ಸಲ್ಲಿಸುವಂತೆ ಸೂಚಿಸಲಾಗಿದೆ. ಅವರು ಬಂದ ಅರ್ಜಿಯನ್ನು ಪರಿಶೀಲಿಸಿ, ಪರಿಹಾರ ತಂತ್ರಾಂಶ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಮಾಡಲಿದ್ದಾರೆ. ಅರ್ಜಿ ಸಲ್ಲಿಕೆ ವೇಳೆ ಆರ್‌ ಟಿಸಿ, ಆಧಾರ್‌, ಬ್ಯಾಂಕ್‌ ಖಾತೆ ಮಾಹಿತಿ ಮತ್ತು ಬೆಳೆ ಹಾನಿಯ ಫೋಟೋ ನೀಡಬೇಕಿರುತ್ತದೆ. ಬಳಿಕ ಅರ್ಜಿದಾದರ ಖಾತೆಗೆ ನೇರವಾಗಿ ಪರಿಹಾರ ಹಣ ರವಾನೆಯಾಗುತ್ತದೆ.

-ಪುಷ್ಪಲತಾ, ಕೃಷಿ ಅಧಿಕಾರಿ, ಕಾಪು

ಹೋಬಳಿ ಹೆಚ್ಚಿನ ಪರಿಹಾರ ನೀಡುವಂತೆ ವಿನಂತಿಸಲಾಗಿದೆ

ಹಲವಾರು ನೆರೆಪೀಡಿತ ಪ್ರದೇಶಗಳಿಗೆ ನಾನೇ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಇಲಾಖೆಗಳ ವಿವಿಧ ಅಧಿಕಾರಿಗಳನ್ನು ಕಳುಹಿಸಿ ಹಾನಿ ಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ. ಹಾನಿ ಪರಿಶೀಲನೆ ವರದಿಯನ್ನು ಕ್ರೋಡೀಕರಿಸಿಕೊಂಡು ಜಿಲ್ಲಾಡಳಿತ, ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದ್ದು ಹೆಚ್ಚಿನ ಪರಿಹಾರ ನೀಡುವಂತೆ ವಿನಂತಿಸಲಾಗಿದೆ.

-ಗುರ್ಮೆ ಸುರೇಶ್‌ ಶೆಟ್ಟಿ, ಶಾಸಕರು, ಕಾಪು

Advertisement

Udayavani is now on Telegram. Click here to join our channel and stay updated with the latest news.

Next