Advertisement

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

10:11 AM May 23, 2024 | Shreeram Nayak |

ದಾವಣಗೆರೆ: ಆನೆಗಳು ಹೆಚ್ಚಿರುವ ರಾಜ್ಯ ಎನ್ನಿಸಿಕೊಂಡಿರುವ ಕರುನಾಡಿನ ಅರಣ್ಯ ಪ್ರದೇಶಗಳಲ್ಲಿ ಬೇಸಗೆ ದಿನಗಳಲ್ಲಿ ಆನೆ ಗಳ ಸಾವಿನ ಪ್ರಮಾಣವೂ ಹೆಚ್ಚಳವಾಗುತ್ತಿದೆ. ಪ್ರಸಕ್ತ ಬೇಸಗೆಯ ನಾಲ್ಕು ತಿಂಗಳುಗಳಲ್ಲಿ (ಜನವರಿ 14ರಿಂದ ಮೇ 16ರ ವರೆಗೆ) 22 ಆನೆಗಳು ಮೃತಪಟ್ಟಿವೆ!

Advertisement

ಮೂರು ಮರಿಯಾನೆ, ಆರು ವಯಸ್ಕ ಹೆಣ್ಣಾನೆ, 13 ವಯಸ್ಕ ಗಂಡು ಆನೆಗಳು ಬಿಸಿಲ ಬೇಗೆಗೆ ಅಸುನೀಗಿವೆ. ಇದಲ್ಲದೆ, ಎರಡು ಆನೆಗಳು ವಿದ್ಯುತ್‌ ಸ್ಪರ್ಶಕ್ಕೊಳಗಾಗಿ ಸಾವಿಗೀಡಾಗಿವೆ. ಚಾಮರಾಜನಗರ ಅರಣ್ಯ ವೃತ್ತ ವೊಂದರಲ್ಲೇ 13 ಆನೆಗಳು ಸಾವನ್ನಪ್ಪಿವೆ.

ಅರಣ್ಯ ಇಲಾಖೆಯ ಅಂಕಿಅಂಶ ಪ್ರಕಾರ, ಕಳೆದ ಮೂರೂವರೆ ವರ್ಷಗಳಲ್ಲಿ ಒಟ್ಟು 272 ಆನೆಗಳು ಮೃತಪಟ್ಟಿದ್ದು, ಇವುಗಳಲ್ಲಿ ಕಳೆದ ಜನವರಿಯಿಂದ ಮೇ ವರೆಗಿನ ತಾಪಮಾನ ಹೆಚ್ಚಳದ ದಿನಗಳಲ್ಲಿ 22 ಆನೆಗಳು ಸಾವಿಗೀಡಾಗಿವೆ. ಇವುಗಳಲ್ಲಿ ಬಹುತೇಕ ಆನೆಗಳು ಸಹಜ ಸಾವು ಕಂಡಿದ್ದರೂ, ಹವಾಮಾನ ವೈಪರೀತ್ಯದಿಂದ ಅರಣ್ಯದಲ್ಲಿ ಸಮರ್ಪಕ ನೀರು, ಆಹಾರ ಸಿಗದೇ ಆರೋಗ್ಯದಲ್ಲಿ ಏರುಪೇರಾಗಿಯೇ ಬಹಳಷ್ಟು ಆನೆಗಳ ಕೊನೆಯುಸಿರೆಳೆದಿವೆ.

ಸರಾಸರಿ 25-30 ಸಾವು
2021ನೇ ಸಾಲಿನಲ್ಲಿ ಒಟ್ಟು 82 ಆನೆಗಳು ಮೃತಪಟ್ಟಿದ್ದು, ಇವುಗಳಲ್ಲಿ ಜನವರಿಯಿಂದ ಮೇ ವರೆಗಿನ ತಾಪಮಾನ ಹೆಚ್ಚಳದ ದಿನಗಳಲ್ಲಿ 30 ಆನೆಗಳು ಸಾವಿಗೀಡಾಗಿವೆ. 2022ನೇ ಸಾಲಿನಲ್ಲಿ ಒಟ್ಟು 72 ಆನೆಗಳು ಸಾವು ಕಂಡಿದ್ದು, ಇವುಗಳಲ್ಲಿ ಜನವರಿಯಿಂದ ಮೇ ವರೆಗಿನ ಅವಧಿಯಲ್ಲಿ 24 ಆನೆಗಳು ಮೃತಪಟ್ಟಿವೆ. 2023ನೇ ಸಾಲಿನಲ್ಲಿ ಒಟ್ಟು 96 ಆನೆಗಳು ಮೃತಪಟ್ಟಿದ್ದು, ಜನವರಿಯಿಂದ ಮೇವರೆಗೆ 36 ಆನೆಗಳು ಸಹಜ ಸಾವು ಕಂಡಿವೆ. ಮೂರು ವರ್ಷಗಳ ಅಂಕಿಅಂಶವನ್ನು ಗಮನಿಸಿದರೆ ಬೇಸಗೆ ದಿನಗಳಲ್ಲಿ ಸರಾಸರಿ ಪ್ರತಿ ವರ್ಷ 25-30 ಆನೆಗಳ ಸಾವು ಸಂಭವಿಸುತ್ತಿವೆ.

ಒಟ್ಟಾರೆ ಆನೆಗಳ ಸಾವು ತಡೆದು ಗಜ ಸಂತತಿ ಉಳಿಸಲು ಸರಕಾರ, ಅರಣ್ಯ ಇಲಾಖೆ ವಿಶೇಷ ಗಮನ ಹರಿಸಬೇಕಿದೆ. ಅರಣ್ಯದಲ್ಲಿ ಅವುಗಳ ವಾಸಕ್ಕೆ ಸೂಕ್ತ ನೀರು, ಆಹಾರ, ಗಿಡ-ಮರಗಳ ಬೆಳೆಸುವಿಕೆ ಮುಂತಾದ ವ್ಯವಸ್ಥೆ ಕಲ್ಪಿಸುವ ಕಾರ್ಯಕ್ಕೆ ಅಣಿಯಾಗಬೇಕು ಎಂಬುದು ವನ್ಯಜೀವಿ ಪ್ರಿಯರ ಆಗ್ರಹವಾಗಿದೆ.

Advertisement

ಆನೆ ಮರಣ ವಿವರ
ಪ್ರಸಕ್ತ ವರ್ಷ ಜನವರಿಯಿಂದ ಮೇ ವರೆಗೆ ಚಾಮರಾಜನಗರ ಅರಣ್ಯ ವೃತ್ತದಲ್ಲಿ ಒಟ್ಟು 13 ಆನೆಗಳು ಸಾವಿಗೀಡಾಗಿವೆ. ಇವುಗಳಲ್ಲಿ ಮೂರು ಮರಿಯಾನೆ, ಮೂರು ಹೆಣ್ಣು ಆನೆ ಹಾಗೂ ಏಳು ಗಂಡು ವಯಸ್ಕ ಆನೆಗಳು. ಉಳಿದಂತೆ ಚಿಕ್ಕಮಗಳೂರು ವೃತ್ತದ ಚಿಕ್ಕಮಗಳೂರು ಮತ್ತು ಭದ್ರಾ ಪ್ರದೇಶದಲ್ಲಿ ತಲಾ ಒಂದು, ಕೊಡಗು ಅರಣ್ಯ ವೃತ್ತದ ನಾಗರಹೊಳೆಯಲ್ಲಿ ಮೂರು, ಬೆಂಗಳೂರು ವೃತ್ತದ ರಾಮನಗರ, ಕೆನರಾ ವೃತ್ತದ ಯಲ್ಲಾಪುರ, ಮಂಗಳೂರು ವೃತ್ತದ ಮಂಗಳೂರು, ಮೈಸೂರು ವೃತ್ತದ ಬಂಡೀಪುರದ ಹುಲಿ ಮೀಸಲು ಪ್ರದೇಶದಲ್ಲಿ ತಲಾ ಒಂದು ಆನೆಗಳು ಮೃತಪಟ್ಟಿವೆ.

ಪರ್ಯಾಯ ಕ್ರಮವಾಗಲಿ
ಇತ್ತೀಚೆಗೆ ಅರಣ್ಯ ಪ್ರದೇಶಗಳಲ್ಲಿ ಆನೆಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿಯೂ ಬೇಸಗೆಯ ಬಿಸಿಲಿನ ಪ್ರಖರತೆಯ ಪರಿಣಾಮ ಎಂಬಂತೆ ಬಿಸಿಲಿನ ದಿನಗಳಲ್ಲಿ ಆನೆಗಳ ಸಾವಿನ ಸಂಖ್ಯೆಯೂ ಅಧಿಕವಾಗುತ್ತಿದೆ. ಸಾವು ತಡೆಯಲು ಅರಣ್ಯದಲ್ಲಿ ಅವುಗಳಿಗೆ ಬೇಕಾದ ಅಗತ್ಯ ಪರ್ಯಾಯ ವ್ಯವಸ್ಥೆ ಕಲ್ಪಿಸಲು ಸರಕಾರ ಹಾಗೂ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು.
– ಗಿರೀಶ್‌ ದೇವರಮನೆ, ಅಧ್ಯಕ್ಷರು, ಪರಿಸರ ಸಂರಕ್ಷಣ ವೇದಿಕೆ

 -ಎಚ್‌.ಕೆ. ನಟರಾಜ

Advertisement

Udayavani is now on Telegram. Click here to join our channel and stay updated with the latest news.

Next