ಕಲಬುರಗಿ: ಅಂಬೇಡ್ಕರ್ ಮೂರ್ತಿ ಅವಮಾನ ಪ್ರಕರಣದಲ್ಲಿ ಜೈಲಿನಿಂದ ಬೇಲ್ ಮೇಲೆ ಹೊರ ಬಂದ ಆರೋಪಿ ಮನೆಗೆ ಯುವಕರ ಪಡೆ ನುಗ್ಗಿ ದಾಂಧಲೆ ಮಾಡಿ, ಮನೆಯವರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ವೀರಶೈವ ಲಿಂಗಾಯತ ಸಂಘಟನೆ ನಡೆಸಿದ ಮಿಂಚಿನ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಪಾಲ್ಗೊಂಡ ಸಂಸದ ಹಾಗೂ ಬಿಜೆಪಿ ಅಭ್ಯರ್ಥಿ ಡಾ.ಉಮೇಶ ಜಾಧವ್ ಬಿಸಿಲಿನ ತಾಪಕ್ಕೆ ಅಸ್ವಸ್ಥಗೊಂಡಿದ್ದರಿಂದ ಅಸ್ಪತ್ರೆಗೆ ಸೇರಿಸಲಾಗಿದೆ.
ಯುವಕರ ಪಡೆ ಮಂಗಳವಾರ ರಾತ್ರಿ 10 ಗಂಟೆಗೆ ಮನೆಗೆ ನುಗ್ಗಿ ಹಲ್ಲೆ ಮಾಡಿದ್ದಲ್ಲದೇ ಮನೆ ಮುಂದೆ ನಿಲ್ಲಿಸಲಾಗಿದ್ದ ಬೈಕ್, ಕಾರು ಸಂಪೂರ್ಣ ಧ್ವಂಸ ಮಾಡಲಾಗಿದ್ದು, ಅದರ ಜೊತೆಗೆ ಪ್ರಾಣ ಬೆದರಿಕೆ ಹಾಕಲಾಗಿದ್ದರೂ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳುತ್ತಿಲ್ಲ, ಆರೋಪಿಗಳನ್ನು ಬಂಧಿಸುತ್ತಿಲ್ಲವೆಂದು ಕೋಟನೂರ ಗ್ರಾಮಸ್ಥರು ಹಾಗೂ ವೀರಶೈವ ಲಿಂಗಾಯತ ಸಂಘಟನೆಯ ಪ್ರಮುಖರು ಕಲಬುರಗಿ- ಜೇವರ್ಗಿ ನಡುವಿನ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾರಂಭಿಸಿದರು.
ಈ ಹಿಂದೆ ಅಂಬೇಡ್ಕರ್ ಮೂರ್ತಿ ಅವಮಾನ ಪ್ರಕರಣದಲ್ಲಿ ಆರೋಪಿಗಳನ್ನು ತಕ್ಷಣ ಬಂಧಿಸಲಾಗಿದೆ. ಆದರೆ ಮನೆಗೆ ಪುಂಡರ ಪಡೆ ನುಗ್ಗಿ ದಾಂಧಲೆ ರೂಪಿಸಿ ಮನೆಯವರ ಮೇಲೆ ಹಲ್ಲೆ ಮಾಡಿದ್ದಲ್ಲದೇ, ಬೈಕ್-ಕಾರು ಸಂಪೂರ್ಣ ಧ್ವಂಸಗೊಳಿಸಿದ್ದರೂ ಪ್ರಕರಣ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ಪ್ರಸ್ತುತ ಸರ್ಕಾರದಲ್ಲಿ ಲಿಂಗಾಯಿತರಿಗೆ ರಕ್ಷಣೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ನಡೆಸಲಾಗುತ್ತಿದ್ದ ಪ್ರತಿಭಟನೆಯಲ್ಲಿ ಸಂಸದ ಡಾ.ಉಮೇಶ್ ಜಾಧವ್ ಪಾಲ್ಗೊಂಡರು.
ಸುಮಾರು ಎರಡು ಗಂಟೆಗೂ ಅಧಿಕ ಸಮಯದವರೆಗೂ ಉರಿಬಿಸಿನ ನಡುವೆ ನಡೆದ ಪ್ರತಿಭಟನೆಯಲ್ಲಿ ಸಂಸದರು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಪ್ರತಿಭಟನೆ ಅಂತ್ಯಗಾಣಿಸಲು ಪೊಲೀಸರು ಸಂಸದರನ್ನು ಎಬ್ಬಿಸಲು ಮುಂದಾದರು. ಬಂಧನವಾದರೂ ಪರ್ವಾಗಿಲ್ಲ. ತಾವು ಪ್ರತಿಭಟನಾ ಧರಣಿಯಿಂದ ಎದ್ದೇಳುವುದಿಲ್ಲ ಎಂದು ಸಂಸದರು ಪಟ್ಟು ಹಿಡಿದರು.
ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.30 ರವರೆಗೆ ಆರೋಪಿಗಳ ಬಂಧನವಾಗುವರೆಗೂ ಹಾಗೂ ಜಿಲ್ಲಾಧಿಕಾರಿ ಸ್ಥಳಕ್ಕೆ ಆಗಮಿಸಿ ಬೇಡಿಕೆ ಸ್ವೀಕರಿಸುವರೆಗೂ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ ಎಂದು ರಸ್ತೆ ಮೇಲೆಯೇ ಪ್ರತಿಭಟನೆಗಿಳಿದರು.
ಈ ನಡುವೆ ಪೋಲೀಸ್ ಆಯುಕ್ತ ಆರ್. ಚೇತನ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಏರಿದ ಧ್ವನಿಯಲ್ಲಿ ಪ್ರತಿಭಟನೆ ನಡೆಸುತ್ತಿರುವುದೇ ಅಪರಾಧ. ಹೀಗಾಗಿ ತಮ್ಮನ್ನು ಬಂದಿಸುತ್ತೇವೆ ಎಂದು ಆವಾಜ್ ಹಾಕಿದರು. ಬೇಕಿದ್ದರೆ ಮೊದಲು ನನ್ನ ಬಂಧಿಸಿ ಎಂದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
ಈ ನಡುವೆ ಸಂಸದರ ಮತ್ತು ಪೊಲೀಸರ ನಡುವೆ ನೂಕುನುಗ್ಗಲು ಉಂಟಾಯಿತು. ಕೊನೆಗೆ ಸಂಸದರು ಅಸ್ವಸ್ಥರಾಗಿ ಕುಸಿದು ಬಿದ್ದರು.
ತದನಂತರ ಅಂಬ್ಯುಲೆನ್ಸ್ ಕರೆಸಿ ಸಂಸದ ಡಾ. ಜಾಧವ್ ಅವರನ್ನು ಪ್ರತಿಭಟನಾ ಸ್ಥಳದಿಂದಲೇ ಆಸ್ಪತ್ರೆಗೆ ಸೇರಿಸಲಾಯಿತು. ಹೃದಯದಲ್ಲಿ ಏರುಪೇರಾಗಿದ್ದರಿಂದ ತದನಂತರ ಜಯದೇವ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಲಾಗುತ್ತಿದೆ.
ಜಯದೇವ ಆಸ್ಪತ್ರೆ ವೈದ್ಯರು ಸಂಸದರ ಆರೋಗ್ಯದ ಮೇಲೆ ಸತತ ನಿಗಾ ವಹಿಸುತ್ತಿದ್ದಾರೆ.
ವಿಜಯೇಂದ್ರ ಭೇಟಿ: ಕಲಬುರಗಿ ಜಿಲ್ಲೆ ಪ್ರವಾಸದಲ್ಲಿರುವ ಹಾಗೂ ಬಿಜೆಪಿ ಅಭ್ಯರ್ಥಿ ಡಾ. ಉಮೇಶ್ ಜಾಧವ್ ಪರ ಮತಯಾಚಿಸಲು ಆಗಮಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಜಯದೇವ ಆಸ್ಪತ್ರೆಗೆ ಭೇಟಿ ನೀಡಿ ಸಂಸದರ ಆರೋಗ್ಯ ವಿಚಾರಿಸಿದರು.