ಹೊಸದಿಲ್ಲಿ/ಲಿಮಾ: ಜಾಗತಿಕ ತಾಪ ಮಾನ ಏರಿಕೆ ಬೇರೆ ಬೇರೆ ರೂಪದಲ್ಲಿ ಜಗತ್ತಿಗೆ ಅಪಾಯ ಉಂಟುಮಾಡಲಿದೆ ಎಂಬ ಎಚ್ಚರಿಕೆ ಹೊಸದಲ್ಲ. ಇದಕ್ಕೆ ಹೊಸ ಸೇರ್ಪಡೆಯೆಂಬಂತೆ ಈಗ ತಾಪಮಾನ ಏರಿಕೆಯ ಪ್ರಭಾವದಿಂದಾಗಿ ಅರಬಿ ಸಮುದ್ರದಲ್ಲಿ ಚಂಡಮಾರುತದಂಥ ವಿದ್ಯಮಾನಗಳು ಹೆಚ್ಚಾಗಲಿವೆ ಎಂಬ ಎಚ್ಚರಿಕೆಯನ್ನು ವಿಜ್ಞಾನಿಗಳು ನೀಡಿದ್ದಾರೆ.
ವಿಜ್ಞಾನಿಗಳು 2014ರಿಂದೀಚೆಗಿನ ದತ್ತಾಂಶ ಗಳನ್ನು ಸಂಗ್ರಹಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕಳೆದ 4 ವರ್ಷಗಳಿಂದಲೂ ಚಂಡಮಾರುತ, ಭೂಕಂಪದಂಥ ಪ್ರಾಕೃತಿಕ ವಿಕೋಪ ಗಳ ಸಂಖ್ಯೆ ವೃದ್ಧಿಸುತ್ತಲೇ ಇದೆ. ಮುಂದೆ ಅರಬಿ ಸಮುದ್ರದಲ್ಲಿ ಇವುಗಳ ಸಂಖ್ಯೆ ಹೆಚ್ಚಲಿದೆ. ಇದಕ್ಕೆಲ್ಲ ಜಾಗತಿಕ ತಾಪಮಾನ ಹೆಚ್ಚಳವೇ ಕಾರಣ ಎಂದು ಕೇಂದ್ರ ಭೂವಿಜ್ಞಾನ ಇಲಾಖೆಯ ಮಾಜಿ ಕಾರ್ಯದರ್ಶಿ ಶೈಲೇಶ್ ನಾಯಕ್ ಅವರು ಹೇಳಿದ್ದಾರೆ.
2014ರಲ್ಲಿ ಅರಬಿ ಸಮುದ್ರ ಒಂದು ಚಂಡಮಾರುತಕ್ಕೆ ಸಾಕ್ಷಿ ಯಾಗಿತ್ತು. 2015ರಲ್ಲಿ ಈ ಸಂಖ್ಯೆ ಎರಡಕ್ಕೇರಿತು. 2017 ರಲ್ಲಿ ಒಖೀ ಚಂಡ ಮಾರುತ ಉಂಟುಮಾಡಿದ ಸಂಕಷ್ಟ ಎಲ್ಲರಿಗೂ ಗೊತ್ತಿದೆ. ಇದಕ್ಕೂ ಮೊದಲು ಈ ಪ್ರದೇಶದಲ್ಲಿ ಇಂಥ ಚಟುವಟಿಕೆ ನಡೆದಿರಲಿಲ್ಲ.
ನಡೆದಿದ್ದರೂ ಈಗಿರುವಂಥ ತೀವ್ರತೆಯೂ ಇರಲಿಲ್ಲ. ಈಗ ಚಂಡಮಾರುತ ವೆಂಬುದು ಪ್ರತೀ ವರ್ಷವೂ ನಡೆಯುವ ಸಹಜ ವಿದ್ಯಮಾನದಂತೆ ಆಗುತ್ತಿದೆ. ಇದು ಅಪಾಯಕಾರಿ ಎಂದಿದ್ದಾರೆ ನಾಯಕ್.
ಮಂಗಳೂರಿಗೆ ಭಯ ಹುಟ್ಟಿಸಿದ್ದ ವರದಿ: ತಿಂಗಳ ಹಿಂದೆಯಷ್ಟೆ ನಾಸಾ ಬಿಡುಗಡೆ ಮಾಡಿದ್ದ ವರದಿಯಲ್ಲೂ ಜಾಗತಿಕ ತಾಪಮಾನ ಏರಿಕೆಯ ಪರಿಣಾಮದ ಕುರಿತು ಎಚ್ಚರಿಕೆ ಇತ್ತು. ಅದರಲ್ಲಿ ನೀರ್ಗಲ್ಲುಗಳು ಕರಗುತ್ತಿರುವ ಕಾರಣ ಸಮುದ್ರ ಮಟ್ಟ ಏರಿಕೆಯಾಗುತ್ತಿದ್ದು, ಭಾರೀ ಪ್ರವಾಹವೇನಾದರೂ ಆದರೆ ಮೊದಲು ಮುಳುಗುವುದು ಕರ್ನಾಟಕದ ಮಂಗಳೂರು ಕಿನಾರೆ ಎಂದು ಆ ವರದಿ ಹೇಳಿತ್ತು.
ಪಶ್ಚಿಮ ಕರಾವಳಿ ಸಾಕ್ಷಿಯಾಗಿದ್ದು
– 2014- ಅಕ್ಟೋಬರ್‌ನಲ್ಲಿ ನಿಲೋಫರ್ ಚಂಡಮಾರುತ. ಗಂಟೆಗೆ 100 ಮೈಲು ವೇಗದಲ್ಲಿ ಬೀಸಿದ ಗಾಳಿ. 30 ಸಾವಿರ ಮಂದಿಯ ಸ್ಥಳಾಂತರ.
– 2015- ಒಂದೇ ವಾರದಲ್ಲಿ ಎರಡು ಚಂಡಮಾರುತ. ನಿಲೋಫರ್‌ಗಿಂತಲೂ ಬಲಿಷ್ಠವಾಗಿದ್ದ ಛಪಾಲ್ ಮತ್ತು ಮೇಘಾ ಚಂಡಮಾರುತ. ಗಂಟೆಗೆ 150 ಮೈಲು ವೇಗ. 27 ಮಂದಿ ಸಾವು.
– 2017- ಡಿಸೆಂಬರ್‌ನಲ್ಲಿ ಅಪ್ಪಳಿಸಿದ್ದು ಒಖೀ ಚಂಡಮಾರುತ. ಗಂಟೆಗೆ 115 ಮೈಲು ವೇಗ. 50ಕ್ಕೂ ಹೆಚ್ಚು ಸಾವು. 100ಕ್ಕೂ ಹೆಚ್ಚು ಬೆಸ್ತರು ನಾಪತ್ತೆ.