ನವದೆಹಲಿ:ಮುಂದಿನ ದಿನಗಳಲ್ಲಿ ದೇಶಾದ್ಯಂತ ತಾಪಮಾನದ ಏರಿಳಿಕೆಯನ್ನು ಸುಲಭವಾಗಿ ಅಳೆಯುವಂಥ- ತಾಪಮಾನ ಏರಿಕೆ ಸೂಚ್ಯಂಕ (ಹೀಟ್ ಇಂಡೆಕ್ಸ್- ಎಚ್‌ಐ)ವನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಲಿದೆ.
ಕರ್ನಾಟಕವೂ ಸೇರಿ ದೇಶದ ವಿವಿಧ ರಾಜ್ಯಗಳಲ್ಲಿ ತಾಪಮಾನ ಏರಿಕೆಯಾಗುತ್ತಿರುವಂತೆಯೇ ಹವಾಮಾನ ಇಲಾಖೆ ಈ ತೀರ್ಮಾನಕ್ಕೆ ಬಂದಿದೆ ಎಂದು ದೆಹಲಿ ಪ್ರಾದೇಶಿಕ ಹವಾಮಾನ ಕೇಂದ್ರದ ಮುಖ್ಯಸ್ಥ ಹಾಗೂ ವಿಜ್ಞಾನಿ ಕುಲದೀಪ್ ಶ್ರೀವಾಸ್ತವ ಮಾಹಿತಿ ನೀಡಿದ್ದಾರೆ.
ಆರಂಭದಲ್ಲಿ ರಾಷ್ಟ್ರ ರಾಜಧಾನಿ ನವದೆಹಲಿ ಹೀಟ್ ಇಂಡೆಕ್ಸ್ ಅನ್ನು ನೀಡಲಾಗುತ್ತದೆ. ಅದಕ್ಕೆ ಸಫªರ್‌ಜಂಗ್‌ನಲ್ಲಿ ದಾಖಲಾಗುವ ತಾಪಮಾನ ಆಧರಿಸಿ ಅದನ್ನು ಪ್ರಕಟಿಸಲಾಗುತ್ತದೆ ಎಂದು ಶ್ರೀವಾಸ್ತವ ಹೇಳಿದ್ದಾರೆ.
ಪ್ರಾಯೋಗಿಕವಾಗಿ ಅಲ್ಲಿ ದಾಖಲಾಗುವ ತಾಪಮಾನವನ್ನು ನವದೆಹಲಿಯ ತಾಪಮಾನ ಸೂಚ್ಯಂಕ ಎಂದು ಪರಿಗಣಿಸಲಾಗುತ್ತದೆ. ಮುಂದಿನ ಹಂತದಲ್ಲಿ ಅದನ್ನು ದೆಹಲಿ ಜಿಲ್ಲಾ ವ್ಯಾಪ್ತಿಗೆ ವಿಸ್ತರಿಸಲಾಗುತ್ತದೆ. ಈ ಮಾಹಿತಿಯ ಮೂಲಕ ಒಟ್ಟಾರೆ ಹವಾಮಾನದಲ್ಲಿ ಯಾವ ರೀತಿಯಲ್ಲಿ ಬದಲಾವಣೆಯಾಗಿದೆ ಎಂಬುದರ ಬಗ್ಗೆ ಮಾಹಿತಿ ಮತ್ತು ಅಧ್ಯಯನಕ್ಕೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಸದ್ಯ ಐಎಂಡಿ ಬಣ್ಣಗಳನ್ನು ಆಧರಿಸಿದ ಹವಾಮಾನ ಮುನ್ಸೂಚನೆ ಮತ್ತು ಮುನ್ನೆಚ್ಚರಿಕೆಯನ್ನು ನೀಡುತ್ತಿದೆ. ಮಳೆ, ಗಾಳಿ, ಚಳಿ ಮತ್ತು ಬಿಸಿಗಾಳಿಗೂ ಇದೇ ನಿಯಮ ಅನ್ವಯಿಸಲಾಗುತ್ತಿದೆ. ಹಸಿರು ಬಣ್ಣವಿದ್ದರೆ ಯಾವುದೇ ಅಪಾಯದ ಸೂಚನೆ ಇಲ್ಲ, ಹಳದಿ ಬಣ್ಣದ ಮೂಲಕ ಸಾರ್ವಜನಿಕರು ಪ್ರತಿಕೂಲ ಹವಾಮಾನದ ಬಗ್ಗೆ ಎಚ್ಚರಿಕೆಯಿಂದ ಇದ್ದು, ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು, ಕೆಂಪು ಬಣ್ಣದ ಸೂಚಕದಲ್ಲಿ ಅತ್ಯಂತ ಪ್ರತಿಕೂಲ ಹವಾಮಾನ ಇರುತ್ತದೆ ಎಂದು ತಿಳಿಯಪಡಿಸಲಾಗುತ್ತದೆ.