Advertisement

ಹೃದಯ me tooವ ನೋವು

06:00 AM Nov 23, 2018 | |

ಇಷ್ಟು ದಿನ ಯಾಕೆ ಸುಮ್ಮನಿದ್ದರು? ಆಗಲೇ ಹೇಳಬಹುದಿತ್ತಲ್ಲ ಎನ್ನುವವರಿಗೆ ಒಂದು ಮಾತು. ವಿನಿತಾ ನಂದ 19 ವರ್ಷಗಳ ಮೊದಲೇ ಇದರ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಕೆಲವು ಸಿನಿ ಪತ್ರಿಕೆಗಳನ್ನು ಬಿಟ್ಟರೆ, ಮುಖ್ಯವಾಹಿನಿಯ ಯಾವ ಪತ್ರಿಕೆಯೂ ಅದನ್ನು ಪ್ರಕಟಿಸಿರಲಿಲ್ಲ. ಈಗ ಅಮಿತಾಭ್‌ ಮಾತನಾಡಿದ ಭಾಷೆಯಲ್ಲಿ ಆಗ ಇಡೀ ವ್ಯವಸ್ಥೆ ಮಾತನಾಡುತ್ತಿತ್ತು. ಆಮೇಲೆ ಆಕೆಗೆ ಕೆಲಸಗಳು ಸಿಗುವುದು ಕಡಿಮೆಯಾಯಿತು. ಆಕೆ ಖನ್ನತೆಗೆ ಒಳಗಾದರು. 

Advertisement

 ಒಂದು ಕಾವ್ಯ ನ್ಯಾಯವೋ ಎನ್ನುವಂತೆ ನವರಾತ್ರಿಯಲ್ಲಿ ದುರ್ಗಿಯ ಆಗಮನ ಆಗಿದೆ; ಅದು “ಮಿ ಟೂ’ ಹೆಣ್ಣಿನ ಪ್ರತಿಭಟನೆಯ ಧ್ವನಿಯಲ್ಲಿ. ಹೆಣ್ಣು ತನ್ನೊಳಗೆ ಎಂದೋ ಗಾಯವಾಗಿ, ಹೆಪ್ಪುಗಟ್ಟಿದ ನೋವೊಂದನ್ನು ಈ ಧ್ವನಿಯ ಮೂಲಕ ಹೊರಹಾಕುತ್ತಿದ್ದಾಳೆ. ಸತ್ಯ ಹೇಳಿದರೆ ನಮ್ಮನ್ನು ಅಪರಾಧಿಗಳಂತೆ ನೋಡುವುದಿಲ್ಲ ಎನ್ನುವುದು ಹೆಣ್ಣು ಮಕ್ಕಳಿಗೆ ಅರಿವಾದಂತಿದೆ…

ಕೆಲವು ದಿನಗಳ ಹಿಂದೆ ಲೇಖಕಿ ವಿನಿತಾ ನಂದಾ “ಸಂಸ್ಕಾರಿ ಕಲಾವಿದ’ನಿಂದ ತಮ್ಮ ಮೇಲಾದ ಅತ್ಯಾಚಾರದ ಬಗ್ಗೆ ಬರೆದುಕೊಂಡಿದ್ದರು. ಅದೇ ಸಮಯಕ್ಕೆ ತನುಶ್ರೀ ದತ್ತಾ ಚಿತ್ರೀಕರಣದ ಸಂದರ್ಭದಲ್ಲಿ ನಾನಾ ಪಾಟೇಕರ್‌ ಹೇಗೆ ತಮ್ಮ ಮೇಲೆ ದೌರ್ಜನ್ಯ ಎಸಗಿದ್ದರು ಎಂದು ಹೇಳಿದರು. ಪತ್ರಕರ್ತರು ಅಮಿತಾಭ್‌ ಮತ್ತು ಅಮೀರ್‌ ಖಾನ್‌ರನ್ನು ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು ಎಂದು ಕೇಳಿದಾಗ, ಅಮೀರ್‌ ಜಾಣತನದಿಂದ ತಪ್ಪಿಸಿಕೊಂಡರೆ, ಅಮಿತಾಭ್‌ “ನನ್ನ ಹೆಸರು ತನುಶ್ರೀ ದತ್ತಾ ಅಲ್ಲ, ನಾನಾ ಪಾಟೇಕರ್‌ ಸಹ ಅಲ್ಲ’ ಎಂದು ಬುದ್ಧಿವಂತಿಕೆಯ ಮಾತುಗಳನ್ನಾಡಿದ್ದರು. ಕೆಲವೇ ದಿನಗಳಲ್ಲಿ ಆ ಹೆಣ್ಣುಗಳ ಸ್ವರಗಳ ಜೊತೆಗೆ ಹಲವಾರು ಸ್ವರಗಳು ಜೊತೆಯಾದವು. ಒಂದರ ಹಿಂದೆ ಒಂದರಂತೆ ಘಟಾನುಘಟಿ ಹೆಸರುಗಳು ಹೊರಬೀಳಲಾರಂಭಿಸಿದವು. ಅಮಿತಾಭ್‌ ಮಗಳು ಶ್ವೇತಾನಂದ, ಸ್ಪಷ್ಟ ದನಿಯಲ್ಲಿ ಅದನ್ನು ಖಂಡಿಸಿದರು. ಅಮೀರ್‌ ಮಡದಿ ಕಿರಣ್‌ ರಾವ್‌ ಚೇರ್‌ ಪರ್ಸನ್‌ ಆಗಿರುವ ಮುಂಬೈ ಫಿಲ್ಮ್ ಫೆಸ್ಟಿವಲ್‌ MAMIಯಿಂದ ಮಿ ಟೂ ಆಪಾದಿತ ರಜತ್‌ಕಪೂರ್‌ ಚಿತ್ರವನ್ನು ಕೈಬಿಡಲಾಯಿತು.

ಇಷ್ಟು ದಿನ ಯಾಕೆ ಸುಮ್ಮನಿದ್ದರು? ಆಗಲೇ ಹೇಳಬಹುದಿತ್ತಲ್ಲ ಎನ್ನುವವರಿಗೆ ಒಂದು ಮಾತು. ವಿನಿತಾ ನಂದ 19 ವರ್ಷಗಳ ಮೊದಲೇ ಇದರ ಬಗ್ಗೆ ಹೇಳಿಕೊಂಡಿದ್ದರು. ಆದರೆ, ಕೆಲವು ಸಿನಿ ಪತ್ರಿಕೆಗಳನ್ನು ಬಿಟ್ಟರೆ, ಮುಖ್ಯವಾಹಿನಿಯ ಯಾವ ಪತ್ರಿಕೆಯೂ ಅದನ್ನು ಪ್ರಕಟಿಸಿರಲಿಲ್ಲ. ಈಗ ಅಮಿತಾಭ್‌ ಮಾತನಾಡಿದ ಭಾಷೆಯಲ್ಲಿ ಆಗ ಇಡೀ ವ್ಯವಸ್ಥೆ ಮಾತನಾಡುತ್ತಿತ್ತು. ಆಮೇಲೆ ಆಕೆಗೆ ಕೆಲಸಗಳು ಸಿಗುವುದು ಕಡಿಮೆಯಾಯಿತು. ಆಕೆ ಖನ್ನತೆಗೆ ಒಳಗಾದರು. ಇದೇ ರೀತಿ ಆರೋಪ ಮಾಡಿದ ಆಲಿಶಾ ಚಿನಾಯ್‌, ಸುಮಾರು ಹತ್ತು ವರ್ಷಗಳ ಕಾಲ ಜಗತ್ತಿಗೇ ಬಾಗಿಲು ಹಾಕಿ ತಮ್ಮ ಆಲಿಭಾಗ್‌ ಮನೆಯಲ್ಲಿ ಕಳೆದುಬಿಟ್ಟರು. “ಮಾತನಾಡಿದವರ’ ಬಾಯಿ ಮುಚ್ಚಿಸಲು ಇಡೀ ವ್ಯವಸ್ಥೆಯೇ ನಿಂತು ಬಿಡುತ್ತದೆ. ಹಾಗಾಗಬಾರದು ಎಂದರೆ ಆ ಹೆಣ್ಣುಮಕ್ಕಳ ಜೊತೆಯಲ್ಲಿ ಸಮಾಜ ನಿಲ್ಲಬೇಕಾಗುತ್ತದೆ. ಈ ಸಲ ಆಗಿರುವುದೂ ಅದು. ಮೊದಲ ಬಾರಿಗೆ, ಸತ್ಯ ಹೇಳಿದರೆ ನಮ್ಮನ್ನು ಅಪರಾಧಿಗಳಂತೆ ನೋಡುವುದಿಲ್ಲ ಎನ್ನುವುದು ಹೆಣ್ಣುಮಕ್ಕಳಿಗೆ ಅರಿವಾಯಿತು. ಕೆಲವು ಆರೋಪಿಗಳು ಸಾರ್ವಜನಿಕ ಕ್ಷಮಾಪಣೆ ಕೇಳಿದರು. ನೊಂದ ದನಿ ಇಲ್ಲಿ ಗೋಳಾಟವಾಗಲಿಲ್ಲ , ಒಂದು ಅಭಿಯಾನವಾಯಿತು. ಈಗ ನೊಂದವರು ಮಾತನಾಡುತ್ತಿದ್ದಾರೆ.

ಇದರ ಬಗ್ಗೆ ಮೂಡುತ್ತಿರುವ ಮೆಚ್ಚುಗೆಯ ಜೊತೆಜೊತೆಯಲ್ಲಿಯೇ ಕೆಲವರು ಮಾಡುತ್ತಿರುವ ಅಪಹಾಸ್ಯ ಕಳವಳಕ್ಕೀಡು ಮಾಡುತ್ತದೆ. ಅವರಿಗೆ ನಾನು ಹೇಳುವುದು ಇಷ್ಟೇ… ಅಮ್ಮ, ಅಕ್ಕ , ತಂಗಿ, ಮಗಳು, ಸ್ನೇಹಿತೆ ಯಾರನ್ನಾದರೂ ಕೂರಿಸಿಕೊಂಡು, ಅವರ ಜೀವನದಲ್ಲಿ ಎಂದಾದರೂ ಇಂತಹ ಘಟನೆ ನಡೆದಿದೆಯೇ ಎಂದು ಅನುನಯಿಸಿ ಕೇಳಿ. ಅವರ ಉತ್ತರ ನಿಮಗೆ ಆಘಾತ ನೀಡುತ್ತದೆ. ಇದು ನೀವು ವಿಂಗಡಣೆ ಮಾಡಿ ಗುರುತಿಸುವ “ಮಹಿಳಾವಾದಿ’ಗಳು ಅಥವಾ “ಬಾಯಾಳಿ’ಗಳು ಅನುಭವಿಸುವ ಸಂಕಟವಲ್ಲ. ಎಲ್ಲೆಲ್ಲಿ ಅಧಿಕಾರದ ಶ್ರೇಣೀಕೃತ ವ್ಯವಸ್ಥೆ ಇದೆಯೋ, ಅಲ್ಲೆಲ್ಲಾ ಇಂತಹ ಅತಿಕ್ರಮಣ ನಡೆದಿದೆ. ಅತಿಕ್ರಮಣ ನಡೆದಾಗ ಓಡಿ ತಪ್ಪಿಸಿಕೋ ಎಂದು ಹೇಳುವ ವ್ಯವಸ್ಥೆ, ಆನಂತರ ಅಪರಾಧಿಯ ವಿರುದ್ಧ ದನಿ ಎತ್ತು ಎಂದು ಹೇಳುವುದಿಲ್ಲ. ಅಪರಾಧಿ ಮತ್ತೂಂದು ಬಲಿಪಶುವನ್ನು ಹುಡುಕಲು ಪ್ರಾರಂಭಿಸುತ್ತಾನೆ. ಹೆಣ್ಣಿಗೆ ಸಮಾನ ಅವಕಾಶ, ಹಕ್ಕು ಕೊಡಬೇಕಾದ ಸಮಾಜ, ಶೈಕ್ಷಣಿಕ ಸಂಸ್ಥೆಗಳು, ಕಾನೂನು ಎಲ್ಲವೂ ಹೆಣ್ಣಿನ ರಕ್ಷಣೆಗೆ ಅವಳನ್ನು ಮಾತ್ರ ಹೊಣೆಗಾರಳನ್ನಾಗಿಸಿ, “ನೀನು ಇಂತಹ ಬಟ್ಟೆ ಹಾಕಬೇಡ, ಇಷ್ಟು ಹೊತ್ತಿಗೆ ಮನೆಯಿಂದ ಹೊರಗೆ ಹೆಜ್ಜೆ ಇಡಬೇಡ, ನಗಬೇಡ, ಮಾತನಾಡಬೇಡ, ಕೆಲಸಕ್ಕೆ ಹೋಗಬೇಡ, ಹಾಗೊಂದು ವೇಳೆ ಮಾಡಿದರೆ, ನಾನು ಹೊಣೆ ಅಲ್ಲ’ ಎಂದು ಜಾರಿಕೊಳ್ಳುತ್ತಲೇ ಬಂದಿವೆ.

Advertisement

2006ರಲ್ಲಿ ತರನಾ ಬರ್ಕ್‌ ಲೈಂಗಿಕ ಅತಿಕ್ರಮಣದ ಬಗ್ಗೆ ಗಮನ ಸೆಳೆಯಲು ‘Me Too’ ಅಭಿಯಾನವನ್ನು ಪ್ರಾರಂಭಿಸಿದಾಗ ಅದು ತಲುಪಲಿರುವ ದೂರದ ಅರಿವು ಬಹುಶಃ ಅವರಿಗೂ ಇರಲಿಕ್ಕಿಲ್ಲ. ಭಾರತದಲ್ಲಿ ಮಹಾಶ್ವೇತಾ ದೇವಿಯವರ “ದೋಪ್ತಿ’ ಈ ಪ್ರತಿಭಟನೆಯ ಸಂಕೇತ. “ಪಿಂಕ್‌ ಚೆಡ್ಡಿ’, “ಮನೋರಮಾ ಹೋರಾಟ’, “ಪಿಂಜರಾ ತೋಡ್‌’, “ಬೇಖೌಫ್ ಆಜಾದಿ’ ಇವೆಲ್ಲಾ ಅದೇ ಪ್ರತಿಭಟನೆಯ ಸ್ವರಗಳಾಗಿದ್ದರೂ ಅವುಗಳು ಪ್ರಾಂತೀಯ ಅಥವಾ ಒಂದು ಗುಂಪಿಗೆ ಸೇರಿದ ಪ್ರತಿಭಟನೆಗಳಾದ್ದರಿಂದ ಅವುಗಳ ವ್ಯಾಪ್ತಿ ಸೀಮಿತವಾಗಿತ್ತು. ಆದರೆ, “ಮಿ ಟೂ’ ವಿಭಿನ್ನ ಕ್ಷೇತ್ರಗಳ, ವಯೋಮಾನದವರ, ಸಾಮಾಜಿಕ ಮತ್ತು ಆರ್ಥಿಕ ಹಿನ್ನೆಲೆಗಳ ಮಹಿಳೆಯರ ದನಿಯಾಗಿದೆ.

ಮೊಟ್ಟಮೊದಲ ಬಾರಿಗೆ, ಗಂಡಸರೂ ತಮ್ಮ ಕ್ರಿಯೆಗಳಿಗೆ ಉತ್ತರದಾಯಿತ್ವವನ್ನು ವಹಿಸಿಕೊಳ್ಳಬೇಕು ಎಂದು ಈ ಅಭಿಯಾನ ಹೇಳುತ್ತಿದೆ. ಇದು “ಗಂಡು ಪ್ರಜ್ಞೆ’ಯನ್ನು ಕಂಗೆಡಿಸಿದೆ, ಆತಂಕಕ್ಕೆ ಒಳಗು ಮಾಡುತ್ತಿದೆ. ಆದರೆ, ಮನೆಯೆದುರಿನ ಪಾರ್ಕಿನಲ್ಲಿ ವಾಕ್‌ ಮಾಡುವಾಗ, ಅಂಗಡಿಯಲ್ಲಿ ದಿನಸಿ ಖರೀದಿಸುವಾಗ, ರಸ್ತೆಯಲ್ಲಿ ನಡೆಯುವಾಗ, ರೈಲು-ಬಸ್ಸಿನಲ್ಲಿ ಪಯಣಿಸುವಾಗ, ರಾತ್ರಿ ಪ್ರಯಾಣದಲ್ಲಿ ದೀಪ ಆರಿಸಿದ ಕ್ಷಣದಿಂದ, ಆಫೀಸಿನಲ್ಲಿ, ಜಾತ್ರೆಯ ಗದ್ದಲದಲ್ಲಿ, ಕ್ಯಾಬ್‌ನಲ್ಲಿ, ಸಿನಿಮಾ ಮಂದಿರದಲ್ಲಿ, ಲೈಬ್ರರಿಯಲ್ಲಿ, ಕಾರ್ಖಾನೆಗಳಲ್ಲಿ, ಕೆಲಸದ ಮನೆಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ… ಎಲ್ಲಾ ಕಡೆ, ಎಲ್ಲಾ ಸಮಯದಲ್ಲೂ ಹೆಂಗಸರು ಇದೇ ಆತಂಕದಲ್ಲಿ ನಿರಂತರವಾಗಿ ಬದುಕಿದ್ದೇವೆ. ಒಂದು ಕಾವ್ಯನ್ಯಾಯವೋ ಎನ್ನುವಂತೆ ನವರಾತ್ರಿಯಲ್ಲಿ ದುರ್ಗಿಯ ಆಗಮನ ಆಗಿದೆ.

ಇದರ ದುರುಪಯೋಗ ಆಗಬಹುದೇ? ಆಗಬಹುದು. ಆದರೆ, ಅದನ್ನು ತಡೆಯಲು ನಾವು ಕ್ರಮಗಳನ್ನು ಕೈಗೊಳ್ಳಬೇಕೇ ಹೊರತು ಸಮಸ್ಯೆಯ ಇರುವಿಕೆಯನ್ನೇ ನಿರಾಕರಿಸಬಾರದು. ದೌರ್ಜನ್ಯಕ್ಕೆ ಒಳಗಾದವರಿಗೆ ಅದರ ಬಗ್ಗೆ ಮಾತನಾಡುವುದು “ಕೆಥಾರ್ಸಿಸ್‌’ ಮಾತ್ರ ಅಲ್ಲ, ಅಪರಾಧಿಗೆ ಎಚ್ಚರಿಕೆಯ ಗಂಟೆ, ನಮಗೆ ಆತ್ಮಗೌರವದ ದನಿ. ಈ “ಮಿ ಟೂ’ ಅಭಿಯಾನ ಕೇವಲ ಗಂಡಿನಿಂದ ಹೆಣ್ಣು ಮಕ್ಕಳ ಮೇಲೆ ನಡೆಯುವ ಅತಿಕ್ರಮಣ ಮಾತ್ರವಲ್ಲ, ಹೆಣ್ಣಿನಿಂದ ಹೆಣ್ಣಿನ ಮೇಲೆ, ಹೆಣ್ಣಿನಿಂದ ಗಂಡಿನ ಮೇಲೆ, ಗಂಡಿನಿಂದ ಗಂಡಿನ ಮೇಲೆ ನಡೆಯುವ ಲೈಂಗಿಕ ಅತಿಕ್ರಮಣದ ಬಗ್ಗೆ ಸಹ ಗಮನ ಸೆಳೆಯಲಿ. ಬರಹ ಮುಗಿಸುವ ಮೊದಲು, ದರ್ಶನ್‌ ಮೋದ್ಕರ್‌ ಅವರ ಒಂದು ಸಾಲು, For every Man who says Not All Men… do remember…YesAll Women.

ಸಂಧ್ಯಾ ರಾಣಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next