ಉಡುಪಿ: ಇತ್ತೀಚಿನ ದಿನಗಳಲ್ಲಿ ಹೃದಯಘಾತ ದಿಂದ ಸಣ್ಣ ಮಕ್ಕಳಿಂದ ಮಧ್ಯವಯಸ್ಕರ ವರೆಗೂ ಸಾವು ಸಂಭವಿಸುತ್ತಿದ್ದು, ಪ್ರಕರಣ ಸಂಖ್ಯೆ ಹೆಚ್ಚುತ್ತಿರುವ ಬಗ್ಗೆ ಭಾರತೀಯ ವೈದ್ಯಕೀಯ ಸಂಘ (ಐಎಂಎ) ರಾಷ್ಟ್ರೀಯ ಉಪಾಧ್ಯಕ್ಷ ಡಾ| ವೆಂಕಟಚಲಪತಿ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದರು.
ಈ ಬಗ್ಗೆ ಅಂಕಿ-ಅಂಶಗಳ ಸಮೇತ ಕೇಂದ್ರ ಸರಕಾರಕ್ಕೆ ವರದಿ ನೀಡಿ ಅಧ್ಯಯನ ನಡೆಸುವಂತೆ ಐಎಂಎ ಆಗ್ರಹಿಸುತ್ತದೆ. ಈಗಾಗಲೇ ಇಂಥ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸುವಂತೆ ಐಎಂಎ ಸಲಹೆ ನೀಡಿದೆ ಎಂದರು.
ಕುಟುಂಬ ವೈದ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಆರಂಭಿಸ ಬೇಕು. ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಸೂದೆಯ ನಿಯಮ, ನಿಬಂಧನೆಗಳನ್ನು ತಿದ್ದುಪಡಿ ಮಾಡಬೇಕು. ನಕಲಿ ವೈದ್ಯರನ್ನು ತಡೆಗಟ್ಟುವ ಕಠಿನ ಕಾನೂನು ಸರಕಾರ ಜಾರಿಗೆ ತರಬೇಕು. ವೈದ್ಯರ ಮೇಲೆ ಹಲ್ಲೆ, ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ವೈದ್ಯರ ಸುರಕ್ಷೆಗೆ ಕಾನೂನಿನಲ್ಲಿ ಬದಲಾವಣೆ ಮಾಡಿ ವೈದ್ಯರ ರಕ್ಷಣ ಕಾನೂನು ಜಾರಿಗೊಳಿಸಬೇಕು ಎಂದರು.
ಅಲೋಪತಿಕ್ ಔಷಧಗಳನ್ನು ಆಧುನಿಕ ವೈದ್ಯರು ಮಾತ್ರ ಉಪಯೋಗಿಸುವ ಪದ್ಧತಿ ಜಾರಿಗೊಳಿಸಬೇಕುಎಂದು ಹೇಳಿದರು. ಐಎಂಎ ರಾಜ್ಯಾಧ್ಯಕ್ಷ ಡಾ| ಶಿವಕುಮಾರ್ ಬಿ. ಲಕ್ಕೋಲ್, ಉಡುಪಿ ಶಾಖೆ ಅಧ್ಯಕ್ಷ ಡಾ| ಪಿ.ವಿ. ಭಂಡಾರಿ, ಪದಾಧಿಕಾರಿಗಳಾದ ಡಾ| ಲಕ್ಷ್ಮಣ್ ಡಿ. ಬಕ್ಲೆ, ಡಾ| ವಾಸುದೇವ್, ಡಾ| ಮಧು ಸೂದನ್, ಡಾ| ಮಾನಸ್, ಡಾ| ದೀಪಕ್, ಡಾ| ಕೇಶವ ನಾಯಕ್ ಪತ್ರಿಕಾಗೋಷ್ಠಿಯಲ್ಲಿದ್ದರು.